

ಬೆಂಗಳೂರು: ರಿಮೇಕ್ಗಳ ಸಾವು?!
- ಹೌದು.. ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಪ್ರಕಾರ ರಿಮೇಕ್ಗಳು ಸತ್ತಿವೆ. ದಕ್ಷಿಣ ಭಾರತದ ಸಿನಿಮಾಗಳ ಇತ್ತೀಚಿನ ಯಶಸ್ಸಿನ ಬಳಿಕ ಅವರು ದೇಶದ ಸಿನಿಮಾ ಬೆಳವಣಿಗೆ ಕುರಿತು ವಿಶ್ಲೇಷಣೆ ಮಾಡಿದ್ದು, ರಿಮೇಕ್ಗಳ ಕಾಲ ಮುಗಿದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೆಜಿಎಫ್2, ಪುಷ್ಪ, ಆರ್ಆರ್ಆರ್ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಕೆಜಿಎಫ್2, ಪುಷ್ಪ, ಆರ್ಆರ್ಆರ್ ಡಬ್ಬಿಂಗ್ ವರ್ಷನ್ಗಳಿಂದಾಗಿ ಒಳ್ಳೆಯ ಕಂಟೆಂಟ್ ಇರುವ ದಕ್ಷಿಣ ಭಾರತೀಯ ಸಿನಿಮಾಗಳ ರಿಮೇಕ್ ಹಕ್ಕುಗಳು ಮಾರಾಟವಾಗುತ್ತಿಲ್ಲ. ಏಕೆಂದರೆ ಪ್ರಾದೇಶಿಕ ಸಿನಿಮಾಳ ಕಂಟೆಂಟ್ ಹಾಗೂ ನಟರನ್ನು ಹಿಂದಿ ಸಿನಿಮಾ ಪ್ರೇಕ್ಷಕರು ಇಷ್ಟಪಡಲಾರಂಭಿಸಿದ್ದಾರೆ ಎಂದಿದ್ದಾರೆ ಆರ್ಜಿವಿ.
ಇದೀಗ ಬಾಲಿವುಡ್ಗೆ ಹಿಂದೆ-ಮುಂದೆ ಎರಡೂ ಕಡೆಯಿಂದ ಹೊಡೆತ ಬೀಳಲಾರಂಭಿಸಿದೆ. ಅವರಿಗೆ ಈಗ ಬಹುಶಃ ಸೂಪರ್ ಹಿಟ್ ಸಿನಿಮಾ ಮಾಡುವುದು ಹೇಗೆ ಅಂತಲೂ ತಿಳಿಯುತ್ತಿಲ್ಲ, ಇನ್ನೊಂದೆಡೆ ದಕ್ಷಿಣ ಭಾರತದ ಸಿನಿಮಾ ರಿಮೇಕ್ ಮಾಡೋಣ ಎಂದರೆ ಅವರಿಗೆ ಯಾರೂ ರಿಮೇಕ್ ರೈಟ್ಸ್ ಕೊಡುತ್ತಿಲ್ಲ ಎಂಬುದು ವರ್ಮಾ ಅಭಿಪ್ರಾಯ.
ಒಟ್ಟಾರೆ ಸಾರ ಏನೆಂದರೆ, ಹಿಂದಿಯಲ್ಲಿ ರಿಮೇಕ್ ಮಾಡುವುದಕ್ಕಿಂತ ಹಿಂದಿ ಡಬ್ ವರ್ಷನ್ಗಳನ್ನು ಬಿಡುಗಡೆ ಮಾಡುವುದೇ ಉತ್ತಮ. ಏಕೆಂದರೆ ಪ್ರೇಕ್ಷಕರಿಗೆ ಈಗ ಆಸಕ್ತಿಕರ ಅನಿಸುವ ಯಾವುದೇ ಸಬ್ಜೆಕ್ಟ್ ಯಾವುದೇ ಕಡೆಯಿಂದ ಯಾರದ್ದೇ ಮುಖದಲ್ಲಿ ಬಂದರೂ ಓಕೆ ಅನಿಸಲಾರಂಭಿಸಿದೆ. ಅದರಲ್ಲೂ ಕನ್ನಡ ಹಾಗೂ ತೆಲುಗು ಸಿನಿಮಾಗಳು ಹಿಂದಿ ಚಿತ್ರಗಳನ್ನು ಕೋವಿಡ್ ವೈರಸ್ನಂತೆ ಕಾಡುತ್ತಿವೆ. ಬಾಲಿವುಡ್ ಬೇಗ ಲಸಿಕೆ ಕಂಡುಕೊಳ್ಳುತ್ತದೆ ಎಂದು ಭಾವಿಸಿದ್ದೇನೆ ಎಂದು ರಾಮ್ಗೋಪಾಲ್ ವರ್ಮಾ ಹಿಂದಿ ಚಿತ್ರರಂಗವನ್ನು ಲೇವಡಿ ಮಾಡಿದ್ದಾರೆ.