

ಬೆಂಗಳೂರು: 'ರೌಡಿಸಂ ಹಾಗೂ ಹಿಂಸಾತ್ಮಕ ದೃಶ್ಯಗಳ ಸಿನಿಮಾಗಳಿಂದ ಸಮಾಜಕ್ಕೆ ಯಾವ ಮೆಸೇಜ್ ನೀಡುತ್ತೀರಿ?' ಎಂದು ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪ್ರಶ್ನಿಸಿದ್ದ ವಿಷಯ ಕೆಲವು ದಿನಗಳ ಹಿಂದೆ ಬಹಳಷ್ಟು ಹರಿದಾಡಿತ್ತು. ಇದೀಗ 'ಕೆಜಿಎಫ್ 2' ಚಿತ್ರದ 'ವಯಲೆನ್ಸ್' ಪೊಲೀಸರ ಮನಗೆದ್ದಿದೆ.
'ಕೆಜಿಎಫ್ ಚಾಪ್ಟರ್ 2' ಚಿತ್ರದಲ್ಲಿನ 'ವಯಲೆನ್ಸ್'ನಿಂದ ಪೊಲೀಸರೇ ಪ್ರೇರಣೆ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಅವರು ಕರ್ನಾಟಕದ ಪೊಲೀಸರಲ್ಲ, ರಾಜಸ್ಥಾನ ಪೊಲೀಸರು. ಹೌದು.. ರಾಜಸ್ಥಾನ ಪೊಲೀಸರಿಗೆ 'ಕೆಜಿಎಫ್2' ಸಿನಿಮಾದ 'ವಯಲೆನ್ಸ್' ಇಷ್ಟವಾಗಿದೆ.
ಈ ಸಿನಿಮಾದಲ್ಲಿ ‘ವಯಲೆನ್ಸ್ ವಯಲೆನ್ಸ್ ವಯಲೆನ್ಸ್.. ಐ ಡೋಂಟ್ ಲೈಕ್ ಇಟ್, ಐ ಅವಾಯ್ಡ್.. ಬಟ್ ವಯಲೆನ್ಸ್ ಲೈಕ್ಸ್ ಮೀ, ಐ ಕಾಂಟ್ ಅವಾಯ್ಡ್..’ ಎಂದು ಯಶ್ ಹೇಳುವ ಡೈಲಾಗ್ ವೈರಲ್ ಆಗಿದ್ದು, ಸಿನಿಪ್ರಿಯರ ಬಾಯಲ್ಲೂ ನಲಿದಾಡುತ್ತಿದೆ.
ಇದೇ ಡೈಲಾಗ್ ಇಟ್ಟುಕೊಂಡು ರಾಜಸ್ಥಾನದ ಉದಯಪುರ ಪೊಲೀಸರು ತಮ್ಮ ಸ್ಲೋಗನ್ ಆಗಿಸಿಕೊಂಡಿದ್ದಾರೆ. ರಾಜಸ್ಥಾನದ ಉದಯಪುರ ರೇಂಜ್ ಪೊಲೀಸರು ವಯಲೆನ್ಸ್ ಶೈಲಿಯಲ್ಲೇ, 'ಕಂಪ್ಲೇಂಟ್, ಕಂಪ್ಲೇಂಟ್, ಕಂಪ್ಲೇಂಟ್.. ವೀ ಡೋಂಟ್ ಅವಾಯ್ಡ್, ವೀ ಟೇಕ್ ಆ್ಯಕ್ಷನ್..' ಎಂಬ ಸ್ಲೋಗನ್ ರಚಿಸಿ ಅಪರಾಧದ ವಿರುದ್ಧ ಜಾಗೃತಿ ಕೈಗೊಂಡಿದ್ದಾರೆ.
ಮೇ 13ರಂದು ಬೆಳಗಾವಿಯಲ್ಲಿ ನಡೆಯಲಿರುವ ಮದುವೆ ಆಹ್ವಾನ ಪತ್ರಿಕೆಯಲ್ಲೂ ವಯಲೆನ್ಸ್ ಶೈಲಿಯಲ್ಲಿ ಮದುವೆ ಕುರಿತು ಮುದ್ರಿಸಿದ್ದು ಕೂಡ ಈಗಾಗಲೇ ವೈರಲ್ ಆಗಿದೆ.