ಅಪ್ಪನನ್ನು ಕೊಂದವನ ಮೇಲಿನ ಸೇಡಿಗಾಗಿ ಪೊಲೀಸ್​​ ಅಧಿಕಾರಿಯಾದ ಮಗಳು! ಸಿನಿಮಾವನ್ನೇ ಮೀರಿಸೋ ಕತೆಯಿದು | Revenge Story

Revenge Story
Published on

Revenge Story: ತಮ್ಮ ಕಣ್ಣೆದುರೇ ತಂದೆ-ತಾಯಿಯನ್ನು ಕೊಂದ ಕೊಲೆಗಾರರ ​​ವಿರುದ್ಧ ಮಕ್ಕಳು ದ್ವೇಷ ಸಾಧಿಸುತ್ತಾರೆ. ಆತ ದೊಡ್ಡವನಾದಾಗ ಪೋಲೀಸ್ ಅಥವಾ ಲಾಯರ್ ಆಗಿ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುತ್ತಾನೆ. ಇಂತಹ ಸೇಡಿನ ಕಥೆಗಳನ್ನು ಬೆಳ್ಳಿತೆರೆಯಲ್ಲಿ ನೋಡುವುದೇ ಒಂದು ಥ್ರಿಲ್​. ಈಗಾಗಲೇ ಇಂತಹ ಕ್ರೈಂ ಸ್ಟೋರಿಗಳು ಸಾಕಷ್ಟು ಬಂದಿವೆ. ಇದೀಗ ಸಿನಿಮಾ ಕತೆಯನ್ನೇ ನೆನಪಿಸುವ ನೈಜ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಯಾವುದೇ ಅಪರಾಧ ಮಾಡದ ತನ್ನ ತಂದೆಯನ್ನು ಕೊಂದ ಕೊಲೆಗಾರನ ಮೇಲೆ ಮಗಳೊಬ್ಬಳು 25 ವರ್ಷಗಳ ಬಳಿಕ ಸೇಡು ತೀರಿಸಿಕೊಂಡಿದ್ದಾಳೆ. ಈ ಒಂದು ಕ್ಷಣಕ್ಕಾಗಿ ಆಕೆ ತುಂಬಾ ಕಷ್ಟ ಸಹ ಪಟ್ಟಿದ್ದಾಳೆ.

ಬ್ರೆಜಿಲ್​ಗೆ ಸಂಬಂಧಿಸಿದ ಸಿನಿಮಾದಂತಹ ಸೇಡಿನ ಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬ್ರೆಜಿಲ್‌ನ ರೊರೈಮಾ ರಾಜ್ಯದ ಗಿಸ್ಟೆನ್ ಸಿಲ್ವಾಡಿ ಡ್ಯೂಸ್ ಎಂಬ 35 ವರ್ಷದ ಮಹಿಳೆ ತನ್ನ ತಂದೆಯ ಕೊಲೆಗಾರನ ಮೇಲೆ ಸೇಡು ತೀರಿಸಿಕೊಳ್ಳಲು ಪೊಲೀಸ್ ಅಧಿಕಾರಿಯಾದ ಕತೆ ಇದು. ತನ್ನ ತಂದೆಗೆ ಆದ ಅನ್ಯಾಯಕ್ಕೆ ವರ್ಷಗಳ ನಂತರ ಸೇಡು ತೀರಿಸಿಕೊಂಡಿದ್ದಾರೆ. ಅಪರಾಧಿಗೆ ಶಿಕ್ಷೆ ವಿಧಿಸಿದ ಬಳಿಕ ಪೊಲೀಸ್​ ಅಧಿಕಾರಿ ಸಂತೋಷಕ್ಕೆ ಪಾರವೇ ಇರಲಿಲ್ಲ.

ವಾಸ್ತವವಾಗಿ ಏನಾಯಿತು ಎಂದರೆ 1999ರಲ್ಲಿ, ಮಹಿಳಾ ಪೊಲೀಸ್ ಅಧಿಕಾರಿಯ ತಂದೆ ಜೋಸ್ ವಿಸೆಂಟೆ ಅವರು ಮಾರುಕಟ್ಟೆಗೆ ತರಕಾರಿಗಳನ್ನು ಸರಬರಾಜು ಮಾಡುವ ಚಾಲಕ ರೈಮುಂಡೋ ಅಲ್ವೆಸ್ ಗೋಮ್ಸ್‌ಗೆ 20 ಪೌಂಡ್‌ಗಳನ್ನು ನೀಡಬೇಕಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದು ದೊಡ್ಡ ಜಗಳವಾಗಿದೆ. ಈ ವೇಳೆ ಅಲ್ವೆಸ್ ಗೋಮ್ಸ್ ತನ್ನ ಬಂದೂಕಿನಿಂದ ಜೋಸ್‌ನನ್ನು ಗುಂಡಿಕ್ಕಿ ಕೊಂದನು.

2013 ರಲ್ಲಿ, ನ್ಯಾಯಾಲಯವು ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿತು ಮತ್ತು ಗೋಮ್ಸ್​ಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೂಲಕ ಗೋಮ್ಸ್ ಜೈಲು ಶಿಕ್ಷೆಯಿಂದ ಪಾರಾಗಿದ್ದ. 2016ರಲ್ಲಿ, ಆತನ ಕೊನೆಯ ಮನವಿಯನ್ನು ತಿರಸ್ಕರಿಸಲಾಯಿತು ಮತ್ತು ಇನ್ನೊಮ್ಮೆ ಬಂಧನ ವಾರಂಟ್ ಹೊರಡಿಸಲಾಯಿತು. ಆದರೆ, ಗೋಮ್ಸ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ತಲೆಮರೆಸಿಕೊಂಡನು. ಇದೆಲ್ಲ ನಡೆದಾಗ ಜೋಸ್ ವಿಸೆಂಟೆ ಅವರ ಮಗಳು ಸಿಲ್ವಾಡಿ ಡ್ಯೂಸ್‌ಗೆ 9 ವರ್ಷ. ಆಗ ತನ್ನ ತಂದೆಯನ್ನು ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದಳು. ಆ ಕಾರಣದಿಂದ ಡ್ಯೂಸ್ 19ನೇ ವಯಸ್ಸಿನಲ್ಲಿ ವಕೀಲರಾಗಿ ಪದವಿ ಪಡೆದರು. ಇದಾದ ನಂತರ ಪೊಲೀಸ್ ಇಲಾಖೆಗೆ ಸೇರಿದರು. ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದ ಆಕೆ ತನ್ನ ತಂದೆಯನ್ನು ಕೊಂದ ಆರೋಪಿಗಳ ವಿಚಾರಣೆ ಆರಂಭಿಸಿದಳು.

ಕೊಲೆಗಾರನನ್ನು ಹುಡುಕಲು ದಣಿವರಿಯಿಲ್ಲದೆ ಹೋರಾಡಿದ ಡ್ಯೂಸ್ ಅಂತಿಮವಾಗಿ ತನ್ನ ತನಿಖೆಯಲ್ಲಿ ಯಶಸ್ವಿಯಾದಳು. ತನ್ನ ತಂದೆಯನ್ನು ಕೊಂದ ಗೋಮ್ಸ್, ಬೋಯಾ ವಿಸ್ಟಾ ಬಳಿಯ ನೋವಾ ಸೆಡೆಡ್ ಪ್ರದೇಶದ ಜಮೀನಿನಲ್ಲಿ ಅಡಗಿಕೊಂಡಿರುವುದು ಗೊತ್ತಾಯಿತು. ಕಳೆದ ತಿಂಗಳ 25ರಂದು ಸಂಪೂರ್ಣ ಸಾಕ್ಷ್ಯ ಸಮೇತ ಆತನನ್ನು ಬಂಧಿಸಲಾಯಿತು. 60ರ ಹರೆಯದಲ್ಲಿ ಗೋಮ್ಸ್​ನನ್ನು ಜೈಲಿಗೆ ಕಳುಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡ್ಯೂಸ್, ನನ್ನ ಕಣ್ಣೆದುರಿನಲ್ಲಿ ನನ್ನ ತಂದೆಯನ್ನು ಕೊಂದ ವ್ಯಕ್ತಿಯನ್ನು ಕಂಡಾಗ ನಾನು ಆಕ್ರೋಶಗೊಂಡೆ. ನೀನು ಅನ್ಯಾಯವಾಗಿ ಕೊಂದ ಜೋಸ್ ವಿಸೆಂಟೆಯ ಮಗಳು ನಾನು, ನಿನ್ನನ್ನು ಹಿಡಿದು ಜೈಲಿಗೆ ಕಳುಹಿಸುತ್ತಿದ್ದೇನೆ ಎಂದು ಹೇಳಿದ್ದೆ. ಈಗ ನನ್ನ ಕುಟುಂಬ ತುಂಬಾ ಸಂತೋಷವಾಗಿದೆ ಎಂದು ಡ್ಯೂಸ್​ ಅವರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net