

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ( Manu bhaker ) ಆಟದಿಂದ ಕೊಂಚ ವಿರಾಮ ಘೋಷಿಸಿದ್ದಾರೆ. ಪ್ರಸ್ತುತ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಲ್ಯಾಕ್ಮೆ ಫ್ಯಾಶನ್ ಶೋನಲ್ಲಿ ಭಾಗವಹಿಸಿದ ಮನು ಭಾಕರ್, ವೇದಿಕೆಯಲ್ಲಿ ರ್ಯಾಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನು ರ‍್ಯಾಂಪ್ ವಾಕ್ ಮಾಡುವಾಗ ಮನು ಭಾಕರ್ ಅವರ ಶೂಟಿಂಗ್ ಹಾವಭಾವದ ಬಗ್ಗೆ ಕೆಲವರು ನೆಗೆಟಿವ್ ಕಾಮೆಂಟ್‌ಗಳನ್ನು ಮಾಡಿದರೆ. ತೀರಾ ಅನುಚಿತವಾಗಿ ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮನು ಭಾಕರ್, ದ್ವೇಷಿಗಳಿಗೆ ಯಾವಾಗಲೂ ದ್ವೇಷ ಮಾಡುವುದೇ ಕೆಲಸ. ಕೆಲ ಒಳ್ಳೆಯವರೂ ಇರುತ್ತಾರೆ ಎಂದಿದ್ದಾರೆ.
ವಾವ್, ಕೆಲವು ಒಳ್ಳೆಯ ಮಾತುಗಳನ್ನಾಡಿದ್ದಕ್ಕೆ ನಿಮಗೆ ಧನ್ಯವಾದಗಳು. ಕೆಲವು ದ್ವೇಷಿಗಳನ್ನು ಸಹ ನೋಡಿದೆ. ನಾನೊಂದನ್ನು ಹೇಳಲು ಬಯಸುತ್ತೇನೆ, ಯಾವುದಕ್ಕೂ ನಿಮ್ಮನ್ನು ನೀವು ಮಿತಿಗೊಳಿಸಬೇಡಿ, ನಿಮ್ಮ ಜೀವನವನ್ನು ದೊಡ್ಡದಾಗಿಸಿ, ನಿಮ್ಮ ವೃತ್ತಿಜೀವನದಲ್ಲಿ ಮಿಂಚಿರಿ ಇದರಿಂದ, ನಿಮ್ಮ ಹೆತ್ತವರು ಹೆಮ್ಮೆಪಡುತ್ತಾರೆ. ದ್ವೇಷಿಗಳಿಗೆ ಯಾವಾಗಲೂ ದ್ವೇಷ ಮಾಡುವುದೇ ಕೆಲಸ, ಪ್ರೀತಿಸುವವರು ಪ್ರೀತಿಸುತ್ತಲೇ ಇರುತ್ತಾರೆ. ನಿಮ್ಮ ನೈತಿಕತೆಯನ್ನು ಹೆಚ್ಚಿಸಿ ಮತ್ತು ನಿಮ್ಮದೇ ಆದ ಶೈಲಿಯಲ್ಲಿ ನಿಮ್ಮದೇ ಆದ ರೀತಿಯಲ್ಲಿ ಏನಾದರೂ ಮಾಡಿ. ಇಲ್ಲಿ ಯಾವುದಕ್ಕೂ ಅಡ್ಡದಾರಿ ಅನ್ನೋದು ಇಲ್ಲ. ಕಷ್ಟವಾದುದ್ದನ್ನೂ ಮಾಡಲು ನಿಮ್ಮಲ್ಲಿ ಶಕ್ತಿ ಇರುವಾಗ ಸುಲಭ ಕೆಲಸಗಳನ್ನು ಏಕೆ ಮಾಡಬೇಕು ಎನ್ನುವ ಮೂಲಕ ಮನು ಭಾಕರ್ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.
ಇನ್ನು ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಎಂಬ ದಾಖಲೆ ಸೃಷ್ಟಿಸಿರುವುದು ಗೊತ್ತೇ ಇದೆ. ಪ್ಯಾರಿಸ್ ಒಲಿಂಪಿಕ್ಸ್-2024 ಮಹಿಳೆಯರ 10 ಮೀಟರ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಮತ್ತು ಮಿಶ್ರ 10 ಮೀಟರ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ದಾಖಲೆಯನ್ನು ನಿರ್ಮಿಸಿದರು. 25 ಮೀಟರ್ಸ್ ವಿಭಾಗದಲ್ಲಿ ಮೂರನೇ ಪದಕ ಸ್ವಲ್ಪದರಲ್ಲೇ ಕೈ ತಪ್ಪಿತು.
ಸದ್ಯ ಮನು ಭಾಕರ್ ಅವರು ಆಟದಿಂದ ಕೊಂಚ ವಿರಾಮ ಪಡೆದಿದ್ದಾರೆ. ನವೆಂಬರ್‌ನಲ್ಲಿ ಮತ್ತೆ ತರಬೇತಿ ಆರಂಭವಾಗಲಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಮುಂದಿನ ವರ್ಷ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)