| ಗೀತಾ ಕೀರ್ತಿನಾಥ, (ಲೇಖಕರು ಉಪನ್ಯಾಸಕರು, ಹವ್ಯಾಸಿ ಬರಹಗಾರರು)
ದಸರಾ ಹಬ್ಬ ಮುಗಿದ ಕೆಲವೇ ದಿನಗಳಲ್ಲಿ ಬರುವ ಶರತ್ಕಾಲದ ಪೂರ್ಣಿಮೆ ವಿಶೇಷವಾದದ್ದು. ಈ ಕಾಲದ ಚಂದ್ರನನ್ನು ಶರದ್ ಹುಣ್ಣಿಮೆ, ಆಶ್ವೀಜ ಹುಣ್ಣಿಮೆ (Full Moon), ಸೀಗೆ ಹುಣವೆ, ಶೀಗೀ ಹುಣಿವೆ, ಕೋಜಾಗರಿ ಹುಣ್ಣಿಮೆ, ಕೌಮುದಿ ಹುಣ್ಣಿಮೆ, ಭೂಮಿ ಹುಣ್ಣಿಮೆ… ಹೀಗೆ ವಿಧವಿಧ ಹೆಸರಿನಿಂದ ಕರೆಯುತ್ತಾರೆ. ಇಷ್ಟು ಹೆಸರುಗಳಿಂದ ಗುರುತಿಸುವ ಈ ಹುಣ್ಣಿಮೆ ಎಲ್ಲ ಹುಣ್ಣಿಮೆಗಳಿಗಿಂತ ಶ್ರೇಷ್ಠ.
ಆಶ್ವೀಜ ಮಾಸದ ಪೂರ್ಣಚಂದಿರನೇ ಆಶ್ವೀಜ ಹುಣ್ಣಿಮೆ. ಉತ್ತರ ಕರ್ನಾಟಕದಲ್ಲಿ ಸೀಗೆ, ಶೀಗೀ ಹುಣ್ಣಿಮೆ ಎಂದು ಗೌರಿಯನ್ನು ಪೂಜಿಸುವ ಸಂಪ್ರದಾಯವಿದೆ. ಮಹಾರಾಷ್ಟ್ರದಲ್ಲಿ ಕೋಜಾಗರಿ ಹುಣ್ಣಿಮೆಯಂದು ರಾತ್ರಿಯಿಡೀ ಎಚ್ಚರವಿದ್ದು ಲಕ್ಷ್ಮಿಯನ್ನು ಆರಾಧಿಸಿ, ಕೆನೆಹಾಲನ್ನು ಹುಣ್ಣಿಮೆಯ ಬೆಳಕಿನಲ್ಲಿ ಚಂದ್ರನಿಗೆ ಅರ್ಪಿಸಿದರೆ, ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ನಂಬಿಕೆ ಇದೆ. ಕೌಮುದಿ ಎಂದರೆ ಬೆಳದಿಂಗಳು. ಈ ಬೆಳದಿಂಗಳ ಬೆಳಕನ್ನು ಮಿಂದು ಅಧ್ಯಾತ್ಮ ಸಾಧಕರು ಸಾಧನೆಗಳನ್ನು ಸಿದ್ಧಿಸಿಕೊಳ್ಳುವರು. ಈ ಚಂದ್ರನ ಬೆಳಕು ಮೈಮೇಲೆ ಚೆಲ್ಲಿದರೆ ಸಾಕು ಅನೇಕ ಭವರೋಗಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.
ಭಾರತದಲ್ಲಿ ಈ ವರ್ಷ ಅಕ್ಟೋಬರ್ 16ರ ರಾತ್ರಿ ಸುಮಾರು 9 ಗಂಟೆಗೆ ‘ಸೂಪರ್ ಮೂನ್’ ಕಾಣುತ್ತಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಲ್ಲ ಕಾಲದ ಚಂದ್ರನಿಗಿಂತ 7% ದೊಡ್ಡದಾಗಿರುವ ಮತ್ತು ಸರಾಸರಿ ಸುಮಾರು 17,000 ಮೈಲಿ ಹತ್ತಿರ ಬರುವ ಈ ಚಂದ್ರನ ಸೊಬಗನ್ನು ನೋಡಿರೆಂದು ಖಗೋಳ ವಿಜ್ಞಾನಿಗಳೂ ಹೇಳುತ್ತಿದ್ದಾರೆ. ವಿದೇಶಗಳಲ್ಲೂ ಈ ಚಂದ್ರನನ್ನು ‘ಹಂಟರ್ಸ್ ಸೂಪರ್ ಮೂನ್’ ಎನ್ನುತ್ತಾರೆ. ಬೇಟೆಗಾರರು ರಾತ್ರಿಯಿಡೀ ಬೇಟೆಯಾಡಿ, ಮುಂಬರುವ ಚಳಿಗಾಲಕ್ಕೆ ಆಹಾರ ದಾಸ್ತಾನು ಮಾಡಲು ಈ ಚಂದ್ರ ಸಹಾಯಕನಂತೆ.
ಈ ಬೆಳದಿಂಗಳಲ್ಲಿ ನಮ್ಮ ರೈತರೂ ಹಬ್ಬದ ಸಂಭ್ರಮ ಅನುಭವಿಸುತ್ತಾರೆ. ಅದೇ ಭೂಮಿ ಹುಣ್ಣಿಮೆ ಹಬ್ಬ. ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ, ಎಳ್ಳು ಜೀರಿಗೆ ಬೆಳದೋಳ, ಭೂಮ್ತಾಯ ಎದ್ದೊಂದು ಘಳಿಗೆ ನೆನೆದೇನ…’ ಎಂಬ ಜನಪದ ತ್ರಿಪದಿಯೊಂದರಲ್ಲಿ ಹೇಳುವಂತೆ ಹಳ್ಳಿಗರು ಭೂಮಿತಾಯಿಯನ್ನು ನೆನೆಯದ ದಿನವಿಲ್ಲ. ಆದರೆ ರೈತನ ಜೀವ, ಜೀವನಸ್ವರೂಪಿಯಾದ ಭೂಮಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಈ ಭೂಮಿ ಹುಣ್ಣಿಮೆ ಹಬ್ಬ. ರೈತ ತನ್ನ ಪಾಲಿನ ಶಕ್ತಿ, ಸಮೃದ್ಧಿ ಸ್ವರೂಪಿಣಿ, ಅನ್ನ-ಧಾನ್ಯ-ಅಧ್ಯಾತ್ಮ ಸ್ವರೂಪಿಣಿ, ಸಕಲವೂ ಆದ ಭೂಮಿಯನ್ನು ವಿಶಿಷ್ಟವಾಗಿ ಆರಾಧಿಸುವ ಆಚರಣೆ ಇದು. ಮುಖ್ಯವಾಗಿ ಮಲೆನಾಡಿನ ಭಾಗಗಳಲ್ಲಿ ಆಚರಿಸುವ ಈ ಹಬ್ಬ ಹಳ್ಳಿಗರ ಪಾಲಿಗೆ ನಾಡಹಬ್ಬದಂತೆಯೇ ಸರಿ. ಅಕ್ಟೋಬರ್ ತಿಂಗಳಲ್ಲಿ ಭೂಮಿತಾಯಿಯೂ ಫಲಹೊತ್ತು ಸಂಭ್ರಮಿಸುವಂತೆ ಕಣ್ಣಿಗೆ ಸೊಂಪಾಗಿ ಕಾಣುತ್ತಾಳೆ. ಬಸುರಿ ಹೆಣ್ಣಿನಂತೆ ಕಾಣುವ ಈ ಭೂಮಿತಾಯಿಯ ಬಯಕೆಗಳನ್ನು ಈಡೇರಿಸುವ ಹೊಣೆಯನ್ನು ರೈತಮಕ್ಕಳು ಹೊರುತ್ತಾರೆ.
ಭೂಮಿಯ ಬಸುರಿ ಬಯಕೆ ಈಡೇರಿಸಲು, ಅನೇಕ ಬಳ್ಳಿ/ ಗಿಡಗಳ ಚಿಗುರು ನೂರೊಂದು ಕುಡಿ ಕುಯ್ದು, ಬೇಯಿಸಿ ಸಪ್ಪೆ ಪಲ್ಯ ಮಾಡುವರು. ಅದರೊಂದಿಗೆ ಕೆಸುವಿನ ಗಡ್ಡೆಯ ಕಡುಬು, ಸೌತೇ ಕಡುಬು, ಚೀನೀಕಾಯಿ ಕಡುಬು, ಹೀರೇಕಾಯಿ ಕಡುಬು. ಜೊತೆಗೆ ಅಚ್ಚಂಬಲಿ-ನುಚ್ಚಂಬಲಿ. ಬೆರಕೆ ಸೊಪ್ಪಿನಪಲ್ಯ, ಹೀರೇಕಾಯಿಪಲ್ಯ, ಬಾಳೆದಿಂಡಿನ ಪಚಡಿ, ಬುತ್ತಿಉಂಡೆ, ಕೊಟ್ಟೆಕಡುಬು ಇತ್ಯಾದಿ ಕಡುಬುಗಳು ತಯಾರಾಗಿರಬೇಕು. ಇವೆಲ್ಲವನ್ನೂ ಬೂಮುಣಿಮೆ ಬುಟ್ಟಿಯಲ್ಲಿಟ್ಟು, ಜಮೀನು/ತೋಟದ ಒಂದೆಡೆ ಚಪ್ಪರ ಹಾಕಿ, ಪೂಜಾಸಾಮಗ್ರಿಗಳನ್ನು, ಈ ಬುಟ್ಟಿಯನ್ನು ಇಟ್ಟು ಭಕ್ತಿಯಿಂದ ಪೂಜಿಸಬೇಕು. ನಂತರ ಪೂಜಿಸಿದ ಬುಟ್ಟಿಯ ನೈವೇದ್ಯವನ್ನು ಜಮೀನು/ತೋಟದ ಮಧ್ಯೆ ಅಗೆದು ಮುಚ್ಚುತ್ತಾರೆ. ಅಥವಾ ಗೊಬ್ಬರ ಹರಡಿ ಚೆಲ್ಲುವಂತೆ ಚೆಲ್ಲುವರು. ಇದಕ್ಕೆ ‘ಚೆರಗ ಚೆಲ್ಲುವುದು’ ಎನ್ನುತ್ತಾರೆ. ಅಥವಾ ಗತಿ ಹಚ್ಚುವುದು ಎಂದೂ ಹೇಳುವುದುಂಟು. ಅಡುಗೆಯ ಜವಾಬ್ದಾರಿ ಮನೆಯೊಡತಿಯದಾದರೆ, ಮಕ್ಕಳು ಪೂಜೆಗೆ ತಯಾರಿ ಮಾಡುವರು. ಮನೆಯ ಯಜಮಾನ ಚೆರಗ ಚೆಲ್ಲುವನು. ಚೆರಗ ಚೆಲ್ಲುವಾಗ ಅಥವಾ ಗತಿ ಹಚ್ಚುವಾಗ ‘ಅಚ್ಚಂಬಲಿ ನುಚ್ಚಂಬಲಿ ಬೇಲಿ ಮೇಲಿಂದ, ಹೀರೇಕಾಯ್ ಬಣ್ಣದ ಸೌತೇ ಗುಡ್ಡದ ಮೇಲಿಂದ, ನೂರೊಂದು ಕುಡಿ ಭೂಮಿತಾಯಿಗೆ ಬಯಕೆಯೋ ಬಯಕೆ, ಹುಲಿಗ್ಯೋ, ಹುಲಿಗ್ಯೋ’ ಎಂದು ತೋಟ/ ಜಮೀನಿನ ತುಂಬೆಲ್ಲ ಓಡಾಡಿ ಬರುತ್ತಾನೆ.
ಇಂದು ರಾತ್ರಿ ಚಂದಿರ ವಿವಿಧ ಹೆಸರು ಹೊತ್ತು ಬರುವನಾದರೂ, ಚೆಲ್ಲುವ ಬೆಳದಿಂಗಳ ಬೆಳಕು ಒಂದೇ. ಬೆಳದಿಂಗಳ ಬೆಳಕ ನೀವೂ ಮಿಂದು ನೋಡಿ. ಜೀವನಗತಿ ಬದಲಾಗುವುದೋ, ಅಧ್ಯಾತ್ಮಕ್ಕೆ ಬೆಳಕು ಚೆಲ್ಲುವುದೋ, ಭವರೋಗ ಗುಣವಾಗುವುದೋ, ಸಂಪತ್ತು ಹೆಚ್ಚಾಗುವುದೋ ಏನಾದರೂ ಆಗಬಹುದು. ಪಂಡಿತರೋ ಪಾಮರರೋ ಯಾರಾದರೂ ಆಗಿರಿ; ವಿಜ್ಞಾನವೋ, ಸಂಪ್ರದಾಯವೋ ಯಾವುದನ್ನಾದರೂ ಒಮ್ಮೆ ಮನದಾಳದಿಂದ ಪ್ರಯೋಗ ಮಾಡಿ ಸಾರ್ಥಕವಾಗಿರಿ, ನಿರಾಳವಾಗಿರಿ.
ಅಂದು ಇಂಡಿಕಾ 1.0, ಇಂದು ನೆಕ್ಸಾನ್ ಇವಿ… ಟಾಟಾ ಸಾಮ್ರಾಜ್ಯದ ಹಿಂದಿತ್ತು ಸವಾಲಿನ ರತ್ನನ ಪರಪಂಚ