Reel Friendship: ನಿನ್ನೆಯಷ್ಟೇ (ಜ.24) ಮಹಿಳೆಯ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ ಜಾನ್ಸನ್, ವಿಷ ಕುಡಿದು ಸಾಯಲು ಯತ್ನಿಸಿದ್ದ. ಈ ಪರಿಸ್ಥಿತಿಯಲ್ಲಿ ವಿಚಾರಣೆ ಮಾಡಲು ಸಾಧ್ಯವಾಗದ ಪೊಲೀಸರು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ವಿಷ ಕುಡಿದ ಕೊಲೆ ಆರೋಪಿ ನಂತರದಲ್ಲಿ ಪೊಲೀಸರ ಮುಂದೆ ಕಕ್ಕಿದ ಸತ್ಯ ಕೇಳಿ ಒಂದು ನಿಮಿಷ ಪೊಲೀಸರೇ ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಈತನೇ ಟೀಮ್ ಇಂಡಿಯಾ ಕ್ಯಾಪ್ಟನ್! ಸ್ಟಾರ್ ಕ್ರಿಕೆಟಿಗನನ್ನು ಕೊಂಡಾಡಿದ ಜಹೀರ್ ಖಾನ್ | Zaheer Khan
ತಿರುವನಂತಪುರಂನ ಕಡಿನಂಕುಲಂನಲ್ಲಿ, ಕೊಲ್ಲಂನ ನೀಂದಕರ ಮೂಲದ ಜಾನ್ಸನ್ ಔಸೆಪ್ (34) ಬಂಧಿತ ಆರೋಪಿ. ಪೊಲೀಸರ ವಿಚಾರಣೆಯಲ್ಲಿ ತಾನು ಹೇಗೆ ಅತಿರಾಳನ್ನು ಕೊಲೆಗೈದ ಎಂಬುದನ್ನು ವಿವರಿಸಿದ ಜಾನ್ಸನ್, ಕಡಿನಂಕುಲಂನಲ್ಲಿ ಅತಿರಾ ಮನೆಯಿದೆ. ನಾನು ಆಕೆಯನ್ನು ಕೊಲೆಗೈಯುವ ಉದ್ದೇಶದಿಂದ ಅವಳ ಮನೆಗೆ ನುಗ್ಗಿ ಅತಿರಾ ಕತ್ತು ಸೀಳಿ ಸಾಯಿಸಿದೆ. ಅತಿರಾ ನಿವಾಸದ ಸುತ್ತಮುತ್ತಲು ಬೆಳಗ್ಗೆ 6 ಗಂಟೆಯಿಂದಲೇ ಓಡಾಡಲು ಶುರುಮಾಡಿದ್ದೆ. ಆಗ ಅವಳು ತನ್ನ ಮಗನನ್ನು ಬೆಳಗ್ಗೆ 8:30ಕ್ಕೆ ಶಾಲಾ ಬಸ್ಸಿನಲ್ಲಿ ಕಳಿಸುವವರೆಗೂ ಅಲ್ಲೇ ಕಾಯುತ್ತಿದ್ದೆ. ತಕ್ಷಣವೇ ನಾನು ಅವಳೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದೆ ಎಂದಿದ್ದಾನೆ.
ಗಂಡನಿಲ್ಲದ ಸಮಯ
“ಫೋನ್ನಲ್ಲಿ ಮಾತನಾಡುತ್ತಲೇ ಆಕೆಯ ಮನೆಯೊಳಗೆ ಹೋದೆ. ಆಗ ಅತಿರಾ ನನ್ನನ್ನು ನೋಡಿ ಗಾಬರಿಯಾದಳು. ನಾನು ನಿನ್ನೊಂದಿಗೆ ಮಾತನಾಡಬೇಕು ಎಂದೆ. ಆ ಸಮಯದಲ್ಲಿ ಅತಿರಾ ಪತಿ ಮನೆಯಲ್ಲಿರಲಿಲ್ಲ. ಪೂಜಾರಿಯಾದ ಅವರು, ಎಲ್ಲೋ ಕಾರ್ಯಕ್ರಮಕ್ಕೆ ಹೋಗಿರುವ ಬಗ್ಗೆ ತಿಳಿದುಕೊಂಡೆ. ಇದೇ ಸರಿಯಾದ ಸಮಯ ಎಂದು ನಿರ್ಧರಿಸಿ, ನಾನು ತಂದಿದ್ದ ಚಾಕುವನ್ನು ಅವಳ ಕೋಣೆಯಲ್ಲಿಡಲು ಪ್ಲ್ಯಾನ್ ಮಾಡಿದ್ದೆ. ಇದಕ್ಕಾಗಿ ಒಂದು ಕಪ್ ಚಹಾ ಕೊಡು ಎಂದು ಹೇಳಿ, ಅವಳು ಅಡುಗೆ ಮನೆಗೆ ಹೋಗ್ತಿದ್ದಂತೆ ತಕ್ಷಣವೇ ನಾನು ಹಾಸಿಗೆ ಅಡಿ ಚಾಕುವನ್ನಿಟ್ಟೆ. ಅತಿರಾ ಬರುತ್ತಿದ್ದಂತೆ ಅವಳ ಕುತ್ತಿಗೆಯನ್ನು ಸೀಳಿದೆ. ರಕ್ತದ ಮಡುವಿನಲ್ಲಿದ್ದ ಆಕೆ ಸತ್ತಿರುವುದನ್ನು ಖಚಿತ ಪಡಿಸಿಕೊಂಡ ತಕ್ಷಣವೇ ಅವರ ಮನೆಯಲ್ಲಿದ್ದ ಸ್ಕೂಟರ್ನಲ್ಲೇ ಅಲ್ಲಿಂದ ಪರಾರಿಯಾದೆ” ಎಂದು ನಡೆದ ಘಟನೆಯನ್ನು ವಿವರಿಸಿದ್ದಾನೆ.
ಏನಿದು ಪ್ರಕರಣ?
ರೀಲ್ಸ್ ವಿಡಿಯೋ ಶೇರಿಂಗ್ನಲ್ಲಿ ಶುರುವಾದ ಸ್ನೇಹ-ಸಂಬಂಧ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಿರುವನಂತಪುರದ ಕದೀನಂಕುಲಂನಲ್ಲಿ ಸಂಭವಿಸಿತು. ಪ್ರಿಯಕರನ ಮಾನಸಿಕ ಹಿಂಸೆಯಿಂದ ದೂರವಾಗಲು ಬಯಸಿದ ಅತಿರಾ (33) ಎಂಬ ಮಹಿಳೆ ಬರ್ಬರವಾಗಿ ಹತ್ಯೆಯಾದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿತು. ಹೆಂಡತಿಯ ಕೊಲೆ ಪತಿಯಲ್ಲಿ ಭಾರೀ ಅನುಮಾನ ಮೂಡಿಸಿತ್ತು. ಪತ್ನಿಯ ಸಾವಿನ ಹಿಂದೆ ಓರ್ವನ ಕೈವಾಡ ಇರಬಹುದು ಎಂದು ಶಂಕಿಸಿದ ಹಿನ್ನೆಲೆ ಪತಿ ಆರೋಪಿ ಜಾನ್ಸನ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂತೆಯೇ ತನಿಖೆ ಚುರುಕಾಗಿ, ಆರೋಪಿ ಸಿಕ್ಕಿಬಿದ್ದ.
ಸ್ನೇಹದ ಹೆಸರಿನಲ್ಲಿ ವಿವಾಹವಾಗಿದ್ದ ರೀಲ್ಸ್ ಸ್ನೇಹಿತೆಯ ಜತೆ ಲವ್ವಿ-ಡವ್ವಿ ನಡೆಸಲು ಬಯಸಿದ್ದ ವ್ಯಕ್ತಿ, ತಾನು ಅಂದುಕೊಂಡಿದ್ದು ಈಡೇರುತ್ತಿಲ್ಲ ಎಂಬ ಹತಾಶೆಯಲ್ಲಿ ಮಹಿಳೆಯ ಮನೆಗೆ ನುಗ್ಗಿ, ಚಾಕುವಿನಿಂದ ತಿವಿದು ಭೀಕರವಾಗಿ ಕೊಲೆ ಮಾಡಿದನು. ಹತ್ಯೆಯಲ್ಲಿ ತನ್ನ ಕೈವಾಡ ಮರೆಮಾಚಲು ಎಲ್ಲಾ ಪ್ಲ್ಯಾನ್ಗಳನ್ನು ಯಶಸ್ವಿಯಾಗಿ ಮಾಡಿ, ಸ್ಥಳದಿಂದ ಪರಾರಿಯಾದ ಕಿಡಿಗೇಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇ ರೋಚಕ. ಆರೋಪಿ ಜಾನ್ಸನ್ ಸುಮಾರು ಒಂದು ವರ್ಷದಿಂದ ಅತಿರಾ ಜತೆ ನಿಕಟ ಸಂಬಂಧ ಹೊಂದಿದ್ದನು. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಇಬ್ಬರ ಸ್ನೇಹ ಪ್ರಾರಂಭವಾಗಿ, ಮತ್ತಷ್ಟು ಗಟ್ಟಿಯಾಗಿತ್ತು.
ಹೆದರಿ ವಿಷ ಕುಡಿದೆ
ಕೊಲೆಗೆ ಐದು ದಿನಗಳ ಮೊದಲು ಪೆರುಮತುರಾದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಆರೋಪಿ, ಅತಿರಾಳನ್ನು ಬರ್ಬರವಾಗಿ ಹತ್ಯೆಗೈದ ಮರುಕ್ಷಣವೇ ಆ ರೂಮ್ ಖಾಲಿ ಮಾಡಿದ್ದ. ಆಕೆಯ ಮನೆಯಿಂದ ಓಡಿ ಹೋಗಲು ಅತಿರಾಳ ಸ್ಕೂಟರ್ ಅನ್ನೇ ಬಳಸಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ನಂತರ, ಚಿರಯಿನ್‌ಕೀಳು ರೈಲು ನಿಲ್ದಾಣ ತಲುಪಿದ ಆರೋಪಿ, ರೈಲು ಹತ್ತಿ ರಾಜ್ಯದ ಗಡಿ ದಾಟಿ ಹೋಗಿದ್ದ ಎಂದು ವರದಿಯಾಗಿದೆ. ಅತಿರಾ ಪತಿ ರಾಜೇಶ್ ಪೊಲೀಸರಿಗೆ ಜಾನ್ಸನ್ ಬಗ್ಗೆ ಮಾಹಿತಿ ನೀಡಿದ್ದು, 7 ತಿಂಗಳ ಹಿಂದೆಯೇ ಈತನ ಕುರಿತು ನನ್ನ ಪತ್ನಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಳು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಕ್ಷಣವೇ ಈ ಸಂಬಂಧ ದೂರು ದಾಖಲಿಸಿಕೊಂಡ ಖಾಕಿ ಪಡೆ, ಆರೋಪಿಯ ಬಂಧನಕ್ಕೆ ಬಲೆ ಬೀಸಿತ್ತು.
ಮಹಿಳೆಯನ್ನು ಕೊಲೆಗೈದ ಬಳಿಕ ಖಾಕಿ ನೆರಳಿನಿಂದ ತಲೆಮರಿಸಿಕೊಂಡಿದ್ದ ಆರೋಪಿ, ಸುಳಿವು ಸಿಗದಂತೆ ಪರಾರಿಯಾಗಿದ್ದ. ಆದರೆ, ಆತನ ಮೊಬೈಲ್ ನಂಬರ್ ಟ್ರ್ಯಾಕ್ ಮಾಡ್ತಿದ್ದ ಪೊಲೀಸರಿಗೆ ಆರೋಪಿ ಕೊಟ್ಟಾಯಂನಲ್ಲಿರುವುದು ಗೊತ್ತಾಗಿದೆ. ತಕ್ಷಣವೇ ಜಾನ್ಸನ್ನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿದರು. ಬಂಧನದ ವೇಳೆ ತಾನು ಹೆದರಿ ವಿಷ ಸೇವಿಸಿರುವುದಾಗಿ ಹೇಳಿಕೊಂಡ ಹಿನ್ನೆಲೆ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ರವಾನಿಸಿ, ಪರೀಕ್ಷೆಗೆ ಒಳಪಡಿಸಿದರು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).