

Kichcha Sudeep: ಇತ್ತೀಚೆಗಷ್ಟೇ ಘೋಷಣೆಯಾದ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ‘ಪೈಲ್ವಾನ್’ ಚಿತ್ರಕ್ಕಾಗಿ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು. ಆದರೆ, ಸುದೀಪ್ ಮಾತ್ರ ಈ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸದ್ಯ ಇದು ಅವರ ಅಪಾರ ಅಭಿಮಾನಿಗಳಿಗೆ ಭಾರೀ ಬೇಸರ ತಂದಿದೆ.
'ಪೈಲ್ವಾನ್' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರ ಕಿಚ್ಚ ಸುದೀಪ್ ಅವರಿಗೆ ಪ್ರಶಸ್ತಿ ಪಟ್ಟಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಇದರ ಬೆನ್ನಲ್ಲೇ ಸ್ಟಾರ್ ನಟನಿಗೆ ಅಭಿನಂದನೆಗಳು ಹಾಗೂ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿತು. ಇಷ್ಟಾದರೂ ಸಹ ಕಿಚ್ಚ ಮಾತ್ರ ತಮಗೆ ಈ ಅವಾರ್ಡ್ ಬೇಡ. ಅದನ್ನು ಉದಯೋನ್ಮುಖ ನಟರಿಗೆ ನೀಡಿ ಎಂದು ಹೇಳುವ ಮೂಲಕ ಪ್ರಶಸ್ತಿ ಸ್ವೀಕಾರಕ್ಕೆ ನಿರಾಕರಿಸಿದ್ದಾರೆ. ಈ ಕುರಿತಂತೆ ತಮ್ಮ ಅಭಿಪ್ರಾಯವನ್ನು ಕಿಚ್ಚ ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
“ಕಳೆದ ಕೆಲವು ವರ್ಷಗಳಿಂದ ನಾನು ನನ್ನದೇ ಆದ ಕಾರಣಗಳಿಂದ ಪ್ರಶಸ್ತಿ ಸ್ವೀಕಾರ ಮಾಡುವುದನ್ನು ನಿಲ್ಲಿಸಿದ್ದೇನೆ. ಚಿತ್ರರಂಗದಲ್ಲಿ ನನಗಿಂತಲೂ ಅತ್ಯುತ್ತಮ ಕಲಾವಿದರಿದ್ದಾರೆ. ಈ ಪ್ರಶಸ್ತಿ ಅವರಿಗೆ ಸಿಕ್ಕರೆ ಇನ್ನೂ ಚೆನ್ನಾಗಿರುತ್ತದೆ. ಚಿತ್ರರಂಗದಲ್ಲಿನ ನನ್ನ ಸೇವೆ ನಿರಂತರವಾಗಿ ಮುಂದುವರೆಯುತ್ತದೆ. ಹೀಗಾಗಿ ಪ್ರಶಸ್ತಿ ಸ್ವೀಕರಿಸಲು ನಾನು ಇಚ್ಛಿಸುವುದಿಲ್ಲ. ಯಾವುದೇ ಪ್ರಶಸ್ತಿಯ ಆಕಾಂಕ್ಷಿಯಲ್ಲದೇ ನಾನು ಕೆಲಸ ಮಾಡಲು ಬಯಸುತ್ತೇನೆ” ಎಂದಿದ್ದಾರೆ.
“ಪ್ರಶಸ್ತಿಗಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ತೀರ್ಪುಗಾರರ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಕಾರಣ, ಈ ಮನ್ನಣೆಯೇ ನನ್ನ ಪ್ರತಿಫಲ. ನನ್ನ ನಿರ್ಧಾರದಿಂದ ತೀರ್ಪುಗಾರರ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ಬೇಸರವಾದಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಹಾಗೂ ನಾನು ಆಯ್ಕೆ ಮಾಡಿದ ಹಾದಿಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬುತ್ತೇನೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಕಿಚ್ಚ ಟ್ವೀಟ್ ಮೂಲಕ ತಿಳಿಸಿದರು.
'ದಬಾಂಗ್ 3' ಹಿಂದಿ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಅಮೋಘ ನಟನೆಗಾಗಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯ ಸಾಲಿನಲ್ಲಿ 'ಭರವಸೆ ನಟ' ಪ್ರಶಸ್ತಿ ಲಭಿಸಿತು. ಫೆ.20ರಂದು ಮುಂಬೈನಲ್ಲಿ ನಡೆದ ಅವಾರ್ಡ್ ಸಮಾರಂಭದಲ್ಲಿ ಸುದೀಪ್ ಈ ಪ್ರಶಸ್ತಿಯನ್ನು ಬಹಳ ಖುಷಿಯಿಂದ ಸ್ವೀಕರಿಸಿದ್ದರು. ವಿಶೇಷ ಪ್ರಶಸ್ತಿಯ ಜತೆಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡ ಸುದೀಪ್, ಅಂದು ತಮ್ಮ ಸಂತಸವನ್ನು ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
2019ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ನಿರಾಕರಿಸಲು ಈ ಘಟನೆ ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ. 2004ರಲ್ಲಿ ಪಶಸ್ತಿ ಕಮಿಟಿಯಲ್ಲಿದ್ದವರಿಂದಲೇ ಸುದೀಪ್ಗೆ ದೂರವಾಣಿ ಕರೆ ಮೂಲಕ ನಿಮಗೆ ಅತ್ಯುತ್ತಮ ನಟ ಅವಾರ್ಡ್ ಬಂದಿದೆ ಎನ್ನಲಾಗಿತ್ತಂತೆ. ಇದನ್ನು ಕೇಳಿದ ಸುದೀಪ್ ಭಾರೀ ಸಂತೋಷ ವ್ಯಕ್ತಪಡಿಸಿದ್ದರಂತೆ. ಆದರೆ, ಅಧಿಕೃತ ಚಲನಚಿತ್ರ ಪ್ರಶಸ್ತಿ ಘೋಷಣೆಯಲ್ಲಿ ಅವರ ಹೆಸರ ಬದಲಿಗೆ ಇನ್ಯಾರದ್ದೋ ಹೆಸರಿದಿದ್ದು, ಕಿಚ್ಚನ ಬೇಸರಕ್ಕೆ ಕಾರಣವಾಯಿತು. ಅಂದಿನ ಘಟನೆಯಿಂದ ಉಂಟಾದ ಭಾರೀ ನೋವು ಇಂದಿನ ರಾಜ್ಯ ಪ್ರಶಸ್ತಿ ನಿರಾಕರಣೆಗೆ ಬಲವಾದ ಕಾರಣ ಎಂದೇ ಹೇಳಲಾಗುತ್ತಿದೆ.
2004ರಲ್ಲಿ ತೆರೆಕಂಡ ರಂಗ SSLC ಮತ್ತು 2008ರಲ್ಲಿ ರಿಲೀಸ್ ಆದ ಮುಸ್ಸಂಜೆ ಮಾತು ಚಿತ್ರಗಳನ್ನು ಮಾಡಿದಾಗ ಆದಂತಹ ಕೆಲವು ಘಟನೆಗಳಿಂದ ಬೇಸರಗೊಂಡ ಕಿಚ್ಚ ಸುದೀಪ್, ತಮಗೆ ಒಲಿದು ಬಂದ ಪ್ರಶಸ್ತಿಗಳ ಸ್ವೀಕಾರ ಮಾಡುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.