

RCB : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ಕೆಲ ಕಾಲ ಮುಂದೂಡಲ್ಪಟ್ಟಿದ್ದ ಐಪಿಎಲ್ 2025 ಲೀಗ್ ಇದೇ ಶನಿವಾರದಿಂದ (ಮೇ 17) ಮತ್ತೆ ಆರಂಭವಾಗಲಿದೆ. ಕೋಲ್ಕತ ನೈಟ್ ರೈಡರ್ಸ್ ತಂಡವು ಮೇ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ. ಅದಕ್ಕೂ ಮುನ್ನವೇ ಆರ್‌ಸಿಬಿಗೆ ಭಾರಿ ಆಘಾತ ಎದುರಾಗಿದೆ.
ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಈ ಐಪಿಎಲ್ ಸೀಸನ್ನ ಉಳಿದ ಪಂದ್ಯಗಳನ್ನು ಆಡುವ ಬಗ್ಗೆ ಅನಿಶ್ಚಿತತೆ ಇದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಾಟಿದಾರ್ ಅವರು ಗಾಯಗೊಂಡರು. ಒಂದು ವಾರಗಳ ಕಾಲ ಸಮಯ ಸಿಕ್ಕಿದ್ದರಿಂದ ಪಾಟಿದಾರ್ ಚೇತರಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಗಾಯದಿಂದ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂಬ ವರದಿ ಬಂದಿದೆ.
ರಜತ್ ಪಾಟಿದಾರ್ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಯಾವುದೇ ಭಾರತೀಯ ತಂಡದಿಂದ ಪಾಟಿದಾರ್ ಕೂಡ ಹೊರಗುಳಿಯುವ ಸಾಧ್ಯತೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ರಜತ್ ಪಾಟಿದಾರ್ ಅವರ ಬೆರಳನ್ನು ರಕ್ಷಿಸಲು ಸ್ಪ್ಲಿಂಟ್ ಧರಿಸಲು ವೈದ್ಯರು ಸಲಹೆ ನೀಡಿದ್ದಾರೆ. ಗಾಯದಿಂದಾಗಿ ಅವರು ಅಭ್ಯಾಸದ ಅವಧಿಯಲ್ಲಿ ಬ್ಯಾಟಿಂಗ್ ಮಾಡಲು ಸಹ ಸಾಧ್ಯವಾಗಲಿಲ್ಲ.
ಈ ಸೀಸನ್ನ ಉಳಿದ ಪಂದ್ಯಗಳನ್ನು ರಜತ್ ಪಾಟಿದಾರ್ ತಪ್ಪಿಸಿಕೊಂಡರೆ, ಅದು ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ. ಅವರ ನಾಯಕತ್ವದಲ್ಲಿ ಈ ಋತುವಿನಲ್ಲಿ ಕಣಕ್ಕೆ ಇಳಿದ ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಇಲ್ಲಿಯವರೆಗೆ, 11 ಪಂದ್ಯಗಳನ್ನು ಆಡಿರುವ ಆರ್‌ಸಿಬಿ, ಎಂಟು ಪಂದ್ಯಗಳನ್ನು ಗೆಲುವು ಸಾಧಿಸಿ, 16 ಅಂಕಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಈಗಾಗಲೇ, ಸ್ಟಾರ್ ಆಟಗಾರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದಾರೆ ಮತ್ತು ಅವರ ಸ್ಥಾನದಲ್ಲಿ ಆರ್‌ಸಿಬಿ ಮಯಾಂಕ್ ಅಗರ್ವಾಲ್ ಅವರನ್ನು ಕರೆತಂದಿದೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ಸ್ಟಾರ್ ಆಟಗಾರ ಹ್ಯಾಜಲ್‌ವುಡ್ ಗಾಯದ ಕಾರಣದಿಂದಾಗಿ ಉಳಿದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರಜತ್ ಪಾಟಿದಾರ್ ತಂಡದಿಂದ ಹೊರಗುಳಿದ್ದಲ್ಲಿ, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆರ್‌ಸಿಬಿ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)