ಬೈಕ್​ನಲ್ಲಿ 2 ವರ್ಷದ ಮಗಳನ್ನು ಕೂರಿಸಿಕೊಂಡು ಸುತ್ತಾಟ: ಈ ಡೆಲಿವರಿ ಏಜೆಂಟ್​ ಕತೆ ಕೇಳಿದ್ರೆ ಮನಕಲಕುತ್ತೆ! Delivery agent

Delivery agent
Published on

Delivery agent : ಗಂಡ-ಹೆಂಡತಿಯ ದಾಂಪತ್ಯ ಜೀವನದಲ್ಲಿ ವಿಧಿಯ ಘೋರ ಆಟದಿಂದ ಯಾರಾದರೂ ಒಬ್ಬರು ಕೊನೆಯುಸಿರೆಳೆದಾಗ ಒಬ್ಬಂಟಿಯಾದ ಸಂಗಾತಿಯ ಜೀವನವು ತುಂಬಾ ಶೋಚನೀಯವಾಗುತ್ತದೆ. ಆದಾಗ್ಯೂ, ಅನೇಕ ಸಂದರ್ಭಗಳಲ್ಲಿ, ಹೆಂಡತಿ ಸತ್ತಾಗ, ಗಂಡ ಮರುಮದುವೆ ಆಗುತ್ತಾನೆ. ಮನೆಯ ಜವಾಬ್ದಾರಿಗಳ ಜೊತೆಗೆ ಮೊದಲ ಹೆಂಡತಿಯ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಎರಡನೇ ಹೆಂಡತಿಗೆ ವರ್ಗಾಯಿಸಲಾಗುತ್ತದೆ. ಆದರೆ, ಸ್ವಿಗ್ಗಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ಈ ವ್ಯಕ್ತಿ ವಿಭಿನ್ನ. ಪತ್ನಿ ಸತ್ತರೂ ಮತ್ತೊಂದು ಮದುವೆಯಾಗದೇ ತನ್ನ ಎರಡು ವರ್ಷದ ಮಗಳನ್ನು ನೋಡಿಕೊಳ್ಳುತ್ತಿರುವ ಈ ಡೆಲಿವರಿ ಏಜೆಂಟಿನ ಮನಕಲಕುವ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕತೆ ಸಾವಿರಾರು ಜನರ ಹೃದಯಗಳನ್ನು ಮುಟ್ಟಿದೆ.

ಪಂಕಜ್ ಗುರುಗ್ರಾಮದ ಸ್ವಿಗ್ಗಿ ಡೆಲಿವರಿ ಏಜೆಂಟ್. ಅವರ ಪತ್ನಿಯ ಮರಣದ ನಂತರ, ಅವರ ಎರಡು ವರ್ಷದ ಮಗಳು ತುನ್ ತುನ್ ತಾಯಿಯಿಲ್ಲದ ತಬ್ಬಲಿಯಾದಳು. ಆದರೆ, ಪಂಕಜ್ ತನ್ನ ಮಗುವನ್ನು ಒಂಟಿಯಾಗಿ ಬಿಡಲಿಲ್ಲ. ತಾವೇ ಸ್ವತಃ ತಮ್ಮ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ತಮ್ಮ ಮಗಳು ತುನ್ ತುನ್ ಜೊತೆ ಡೆಲಿವರಿ ಕೆಲಸವನ್ನು ಸಹ ಮಾಡುತ್ತಿದ್ದಾರೆ. ಮಗಳನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಮತ್ತು ಅವರ ಹಿರಿಯ ಮಗ ಸಂಜೆ ತರಗತಿಗಳಿಗೆ ಹಾಜರಾಗುವುದರಿಂದ ಪಂಕಜ್‌ಗೆ ಬೇರೆ ದಾರಿ ಕಾಣಲಿಲ್ಲ. ಹೀಗಾಗಿ ಡೆಲಿವರಿ ಕೆಲಸದೊಂದಿಗೆ ತಮ್ಮ ಮಗಳನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಗುರುಗ್ರಾಮ್ ಮೂಲದ ಸಿಇಒ ಮಾಯಾಂಕ್ ಅಗರ್ವಾಲ್ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಡೆಲಿವರಿ ಏಜೆಂಟ್ ಪಂಕಜ್ ಬೆಳಕಿಗೆ ಬಂದರು. ಮಾಯಾಂಕ್ ಅವರು ಸ್ವಿಗ್ಗಿಯಲ್ಲಿ ಆಹಾರವನ್ನು ಆರ್ಡರ್ ಮಾಡಿದರು. ನಂತರ, ಡೆಲಿವರಿ ಏಜೆಂಟ್ ಪಂಕಜ್‌ಗೆ ಕರೆ ಮಾಡಿದಾಗ, ಆ ಕಡೆಯಿಂದ ಮಗುವಿನ ಧ್ವನಿ ಕೇಳಿಸಿತು. ಹೀಗಾಗಿ ಆತನನ್ನು ಮೇಲಕ್ಕೆ ಬರಲು ಹೇಳಿದೇ ಸ್ವತಃ ಅವರೇ ಕೆಳಗೆ ಇಳಿದು ಹೋದರು. ಈ ವೇಳೆ ಅಲ್ಲಿನ ದೃಶ್ಯವನ್ನು ನೋಡಿ ಅವರು ಆಶ್ಚರ್ಯಗೊಂಡರು. ಆಹಾರ ಡೆಲಿವರಿ ಏಜೆಂಟ್ ಪಂಕಜ್ ತನ್ನ ಎರಡು ವರ್ಷದ ಮಗಳನ್ನು ಬೈಕ್​ನಲ್ಲಿ ಕರೆತಂದಿದ್ದರು. ಆ ಬಗ್ಗೆ ಪಂಕಜ್ ಅವರನ್ನು ಪ್ರಶ್ನಿಸಿದಾಗ ಮನಕಲಕುವ ಕತೆ ತೆರೆದುಕೊಂಡಿತು. ಅದನ್ನು ಕೇಳಿ ಮಾಯಾಂಕ್ ಅವರು ಭಾವುಕರಾದರು. ಈ ಬಗ್ಗೆ ಮಾಯಾಂಕ್ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ಪಂಕಜ್​​ಗೆ ಇಬ್ಬರು ಮಕ್ಕಳಿದ್ದಾರೆ. ಅವರ ಎರಡನೇ ಮಗು ತುನ್ ತುನ್ ಜನಿಸಿದಾಗ, ಅವರ ಪತ್ನಿ ಹೆರಿಗೆಯ ಸಮಯದಲ್ಲಿ ನಿಧನರಾದರು. ಅಂದಿನಿಂದ, ಇಬ್ಬರು ಮಕ್ಕಳನ್ನು ಪಂಕಜ್​ ಅವರೇ ನೋಡಿಕೊಳ್ಳುತ್ತಿದ್ದಾರೆ. ಅವರ ಮಗ ಸ್ವಲ್ಪ ದೊಡ್ಡವನಾಗಿದ್ದು, ಆತ ಸಂಜೆ ತರಗತಿಗಳಿಗೆ ಹೋಗುತ್ತಾರೆ. ಮಗಳು ಚಿಕ್ಕವಳಾಗಿರುವುದರಿಂದ, ಆಕೆಯನ್ನು ಎಲ್ಲಿಯೂ ಬಿಡಲಾಗದು. ಹೀಗಾಗಿ ತಮ್ಮ ಬೈಕ್​ನಲ್ಲಿ ಕೂರಿಸಿಕೊಂಡು ಸ್ವಿಗ್ಗಿಯಲ್ಲಿ ಡೆಲಿವರಿ ಏಜೆಂಟ್​ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಇದು ತುಂಬಾ ಅಪಾಯಕಾರಿ. ಆದರೆ, ಅವರು ಕೆಲಸ ಮಾಡದಿದ್ದರೆ, ಜೀವನ ನಡೆಸುವುದು ಕಷ್ಟವಾಗುತ್ತದೆ ಎಂಬ ಪಂಕಜ್ ಅವರ ಮಾತುಗಳು ಅನೇಕರನ್ನು ಯೋಚಿಸುವಂತೆ ಮಾಡಿದೆ. ಹೆಂಡತಿ ಸತ್ತರೆ ಮತ್ತೊಂದು ಮದುವೆ ಆಗುವ ಈ ಕಾಲದಲ್ಲಿ ನೀವು ಮಕ್ಕಳಿಗಾಗಿ ನಿಮ್ಮ ಜೀವನವನ್ನು ಮುಡಿಪಾಗಿಟ್ಟಿರುವುದು ನಿಜಕ್ಕೂ ಗ್ರೇಟ್​ ಎಂದು ಪಂಕಜ್​ ಬಗ್ಗೆ ನೆಟ್ಟಿಗರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕೆಲವರಂತೂ ಪಂಕಜ್​ ಅವರಿಗೆ ಸಹಾಯ ಮಾಡಲು ಮುಂದೆ ಬರುತ್ತಿರುವುದು ಗಮನಾರ್ಹ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net