

Pakistan High Commissioner : ಪಾಕಿಸ್ತಾನದ ಹೈಕಮಿಷನರ್ ಹನಿಟ್ರ್ಯಾಪ್ ವಿವಾದದಲ್ಲಿ ಸಿಲುಕಿದ್ದಾರೆಂದು ವರದಿಯಾಗಿದೆ. ಬಾಂಗ್ಲಾದೇಶಕ್ಕೆ ಪಾಕ್ ಹೈಕಮಿಷನರ್ ಆಗಿರುವ ಸೈಯದ್ ಅಹ್ಮದ್ ಮರೂಫ್, ಬಾಂಗ್ಲಾದ ಯುವತಿಯೊಂದಿಗೆ ಇರುವ ಫೋಟೋಗಳು ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಯುವತಿಯೊಂದಿಗೆ ಏಕಾಂತದಲ್ಲಿ ಇರುವ ಹಾಗೂ ಮರೂಫ್ ಅವರದ್ದು ಎನ್ನಲಾದ ವೀಡಿಯೊಗಳು ಮತ್ತು ಫೋಟೋಗಳು ಸಹ ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ಬಳಿಕ ಗಾಬರಿಗೊಂಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ, ಮರೂಫ್ ಅವರನ್ನು ರಜೆಯ ಮೇಲೆ ಕಳುಹಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿವರಗಳ ಪ್ರಕಾರ, ಸೈಯದ್ ಅಹ್ಮದ್ ಮರೂಫ್, 2023ರ ಡಿಸೆಂಬರ್ ತಿಂಗಳಲ್ಲಿ ಬಾಂಗ್ಲಾದೇಶಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಇದೀಗ ಬಾಂಗ್ಲಾದೇಶದ ಹುಡುಗಿಯೊಂದಿಗೆ ಇರುವ ಫೋಟೋಗಳು ಲೀಕ್ ಆಗಿದ್ದು, ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗವಾಗಿದೆ. ಹೀಗಾಗಿ, ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅವರನ್ನು ರಜೆಯ ಮೇಲೆ ಕಳುಹಿಸಿದೆ. ಮರೂಫ್, ಮೇ 11 ರಂದು ಢಾಕಾದಿಂದ ದುಬೈ ಮೂಲಕ ಇಸ್ಲಾಮಾಬಾದ್‌ಗೆ ಹಾರಿದ್ದಾರೆ ಎಂದು ಬಾಂಗ್ಲಾದೇಶದ ದಿನಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ. ಹನಿ ಟ್ರ್ಯಾಪ್‌ನಿಂದಾಗಿ ಅವರು ಬಾಂಗ್ಲಾದೇಶವನ್ನು ತೊರೆದಿದ್ದಾರೆ ಅಂತಾನೂ ಅದು ಹೇಳಿದೆ.
ಆದಾಗ್ಯೂ, ಪಾಕ್ ಅಧಿಕಾರಿಗಳು ಮರೂಫ್ ಅವರು ಅಧಿಕೃತವಾಗಿ ರಜೆಯಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಎಷ್ಟು ದಿನಗಳ ಕಾಲ ರಜೆಯಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಮತ್ತೊಂದೆಡೆ, ಢಾಕಾದಲ್ಲಿರುವ ಪಾಕಿಸ್ತಾನದ ಉಪ ಹೈಕಮಿಷನರ್ ಮುಹಮ್ಮದ್ ಆಸಿಫ್ ಅವರು ಹಂಗಾಮಿ ಹೈಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇತ್ತೀಚೆಗೆ, ಮರೂಫ್‌ಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಬಾಂಗ್ಲಾದೇಶದ ಹುಡುಗಿಯ ಜೊತೆ ಅನ್ಯೋನ್ಯವಾಗಿರುವ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ. ಮರೂಫ್‌ಗೆ ಆ ಯುವತಿಯೊಂದಿಗೆ ನಿಕಟ ಸಂಬಂಧವಿದೆ ಎಂದು ತೋರುತ್ತದೆ. ಅಲ್ಲದೆ, ವಂಚನೆಯ ಜಾಲದಲ್ಲಿ ಸಿಲುಕಿದ್ದಾರೆ ಎಂಬ ಪ್ರಚಾರವೂ ನಡೆಯುತ್ತಿದೆ. ಮರೂಫ್ ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು ಹುಡುಗಿಯೊಂದಿಗೆ ಹಂಚಿಕೊಂಡಿರಬಹುದು ಎಂಬ ಅನುಮಾನಗಳು ಈಗಾಗಲೇ ಇವೆ.
ಇದೇ ಸಂದರ್ಭದಲ್ಲಿ ಭಾರತವು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಅಧಿಕಾರಿಯೊಬ್ಬರನ್ನು ಬೇಹುಗಾರಿಕೆ ಆರೋಪದ ಮೇಲೆ ಹೊರಹಾಕಿದೆ ಎಂದು ತಿಳಿದುಬಂದಿದೆ. ಅವರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ ಮತ್ತು ದೇಶವನ್ನು ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಮಂಗಳವಾರ ಈ ಕುರಿತು ಆದೇಶಗಳನ್ನು ಹೊರಡಿಸಿದೆ.
ರಾಜತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಅವರನ್ನು ಪರ್ಸನಾ ನಾನ್ ಗ್ರಾಟಾ ಎಂದು ಪರಿಗಣಿಸಿ ದೇಶದಿಂದ ಹೊರಹಾಕಲಾಗುತ್ತದೆ ಮತ್ತು ನಿರ್ಬಂಧಿತ ಆದೇಶವನ್ನು ವಿಧಿಸಲಾಗುತ್ತದೆ. ಪಾಕಿಸ್ತಾನಿ ಅಧಿಕಾರಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರಿಂದ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. (ಏಜೆನ್ಸೀಸ್)