

ನವದೆಹಲಿ: ಇಂಗ್ಲೆಂಡ್ ತಂಡದ ಆಲ್ರೌಂಡರ್ ಆಟಗಾರ ವಿಲ್ ಜ್ಯಾಕ್ಸ್ ಟಿ20 ಬ್ಲ್ಯಾಸ್ಟ್ ಟೂರ್ನಿಯಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಸರ್ರೆ ತಂಡದ ವಿಲ್ ಜ್ಯಾಕ್ಸ್ ಎದುರಾಳಿ ಮಿಡಲ್ಸೆಕ್ಸ್ ತಂಡದ ವಿರುದ್ಧ ಒಂದೇ ಓವರ್ನಲ್ಲಿ 5 ಸಿಕ್ಸರ್ ಬಾರಿಸಿದರು. ಗಮನಿಸಬೇಕಾದ ಸಂಗತಿ ಏನೆಂದರೆ, ಇತ್ತೀಚೆಗಷ್ಟೇ ಮುಗಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡದಲ್ಲಿ ವಿಲ್ ಜ್ಯಾಕ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದಲ್ಲಿದ್ದರು. ಆದರೆ, ಗಾಯದ ಸಮಸ್ಯೆಯಿಂದಾಗಿ ಆರ್ಸಿಬಿ ತಂಡಕ್ಕೆ ಅಲಭ್ಯರಾಗಿದ್ದು ನಿಜಕ್ಕೂ ದುರಾದೃಷ್ಟವೇ ಸರಿ.
ಮಿಡಲ್ಸೆಕ್ಸ್ ತಂಡದ ಲ್ಯೂಕ್ ಹೊಲಮ್ಯಾನ್ ಎಸೆದ 11ನೇ ಓವರ್ನಲ್ಲಿ ವಿಲ್ ಜ್ಯಾಕ್ಸ್ ಸತತ 5 ಸಿಕ್ಸರ್ ಬಾರಿಸಿದರ. ಆರನೇ ಎಸೆತವೂ ಕೂಡ ಸಿಕ್ಸರ್ ಆಗುವ ಸಾಧ್ಯತೆ ಇತ್ತು. ಆದರೆ, ಹೈಪುಲ್ ಟಾಸ್ ಬಾಲ್ ಆದ್ದರಿಂದ ಟೈಮಿಂಗ್ ಸರಿಹೊಂದಲಿಲ್ಲ. ಒಂದು ವೇಳೆ ಆರು ಸಿಕ್ಸರ್ ಬಾರಿಸಿದ್ದರೆ, ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್ ಸಾಲಿಗೆ ಜ್ಯಾಕ್ಸ್ ಕೂಡ ಸೇರಿಕೊಳ್ಳುತ್ತಿದ್ದರು.
ಕೊನೆಯ ಎಸೆತದಲ್ಲಿ ಸಿಕ್ಸರ್ ಮಿಸ್ ಆಗಿದ್ದಕ್ಕೆ ಜ್ಯಾಕ್ಸ್ ಕೂಡ ಬೇಸರಗೊಂಡರು. ಇತಿಹಾಸ ಪುಟ ಸೇರುವ ಅದೃಷ್ಟ ಒಂದು ಎಸೆತದಲ್ಲಿ ಕೈತಪ್ಪಿತು.
ಅಂದಹಾಗೆ ಕಳೆದ ಡಿಸೆಂಬರ್ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ವಿಲ್ ಜ್ಯಾಕ್ ಅವರನ್ನು ಆರ್ಸಿಬಿ ತಂಡ 3.2 ಕೋಟಿ ರೂಪಾಯಿಗೆ ಖರೀದಿಸಿದೆ. ಆದರೆ, ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ಮಿರ್ಪೂರ್ನಲ್ಲಿ ಬಾಂಗ್ಲಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಇಂಗ್ಲೆಂಡ್ ಆಟಗಾರ ವಿಲ್ ಜ್ಯಾಕ್ಸ್ ಗಾಯಗೊಂಡರು. ಈ ಹಿನ್ನೆಲೆಯಲ್ಲಿ ಜ್ಯಾಕ್ಸ್ ಐಪಿಎಲ್ ಆಡಲು ಸಾಧ್ಯವಾಗಲಿಲ್ಲ.
ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಓವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ರೆ ತಂಡ ಲೌರಿ ಇವಾನ್ಸ್ (37ಕ್ಕೆ 85 ರನ್) ಅವರ ಅಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮಿಡಲ್ಸೆಕ್ಸ್ ತಂಡ 19.2 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಗೆಲುವಿನ ನಗೆ ಬೀರಿತು. (ಏಜೆನ್ಸೀಸ್)