ಭಾರತ ಬೆಳೆದಾಗ ವಿಶ್ವವೇ ಬೆಳೆಯುತ್ತದೆ: ಪ್ರಧಾನಿ ಮೋದಿ ಯುಎಸ್​ ಕಾಂಗ್ರೆಸ್​ ಭಾಷಣದ ಹೈಲೈಟ್ಸ್​ ಇಲ್ಲಿದೆ…

PM Modi US Congress
Published on

ವಾಷಿಂಗ್ಟನ್​: ಭಾರತ ಬೆಳೆದಾಗ ಇಡೀ ವಿಶ್ವವೇ ಬೆಳೆಯುತ್ತದೆ ಎಂದು ಯುಎಸ್​ ಕಾಂಗ್ರೆಸ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶುಕ್ರವಾರ ಯುಎಸ್​ ಕಾಂಗ್ರೆಸ್​ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಯುಎಸ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡುವುದು ನನಗೆ ಸಿಗುವ ದೊಡ್ಡ ಗೌರವವಾಗಿದೆ. ಅದರಲ್ಲೂ ಎರಡನೇ ಬಾರಿ ಈ ಅವಕಾಶ ದೊರೆತಿರುವುದು ನನಗೆ ಒದಗಿ ಬಂದು ಸೌಭಾಗ್ಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಹಿಂದೆ 2016ರ ಜೂನ್​ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಿದಾಗ ಪ್ರಧಾನಿ ಭಾಷಣ ಮಾಡಿದ್ದರು. ಭಾರತ ಯಾವೊಬ್ಬ ಪ್ರಧಾನಿಯು ಯುಎಸ್​ ಕಾಂಗ್ರೆಸ್​ನಲ್ಲಿ ಎರಡು ಬಾರಿ ಭಾಷಣ ಮಾಡಿಲ್ಲ.

ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು ಇಲ್ಲಿವೆ...

ಕಳೆದ ಏಳು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಆದರೆ ಭಾರತ ಮತ್ತು ಯುಎಸ್ ನಡುವಿನ ಸ್ನೇಹವನ್ನು ಗಾಢಗೊಳಿಸುವ ಬದ್ಧತೆ ಮಾತ್ರ ಒಂದೇ ಆಗಿದೆ. ಎಐ (ಕೃತಕ ಬುದ್ಧಿಮತ್ತೆ) ಮತ್ತೊಂದು ಅಮೆರಿಕ-ಇಂಡಿಯಾ (ಎಐ) ಯುಗದಲ್ಲಿ ಹೆಚ್ಚು ಅಭಿವೃದ್ಧಿಗಳು ಕಂಡಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಅರ್ಥಮಾಡಿಕೊಳ್ಳಬಲ್ಲೆ

ಪ್ರಜಾಪ್ರಭುತ್ವದ ದೇಶದ ಪ್ರಜೆಯಾಗಿ, ನಾನು ಒಂದು ವಿಷಯವನ್ನು ಒಪ್ಪಿಕೊಳ್ಳಬಲ್ಲೆ, ಮಿಸ್ಟರ್ ಸ್ಪೀಕರ್, ನಿಮಗೆ ತುಂಬಾ ಕಠಿಣವಾದ ಕೆಲಸವಿದೆ. ವಿಚಾರಗಳು ಮತ್ತು ಸಿದ್ಧಾಂತದ ಚರ್ಚೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಿಮಗೆ ಬಲವಾದ ಉಭಯಪಕ್ಷೀಯ ಒಮ್ಮತದ ಅಗತ್ಯವಿರುವಾಗ ಸಹಾಯ ಮಾಡಲು ನನಗೆ ಸಂತೋಷವಾಗಿದೆ ಎಂದು ಸ್ಪೀಕರ್​ ಕೆಲಸದ ಮಹತ್ವದ ಬಗ್ಗೆ ಯುಎಸ್​ ಕಾಂಗ್ರೆಸ್​ನಲ್ಲಿ ಪ್ರಧಾನಿ ಮೋದಿ ಹೇಳಿದರು.

ಶೀಘ್ರದಲ್ಲೇ 3ನೇ ಆರ್ಥಿಕತೆ

ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದಾಗ, ಭಾರತ ವಿಶ್ವ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿತ್ತು, ಆದರೆ, ಈಗ ವಿಶ್ವದ 5ನೇ ಆರ್ಥಿಕತೆಯಾಗಿ ಭಾರತ ಬೆಳೆದಿದೆ. ಶೀಘ್ರದಲ್ಲೇ ಭಾರತ 3ನೇ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಭಾರತ ಬೆಳೆದಾಗ ಇಡೀ ವಿಶ್ವವೇ ಬೆಳೆಯುತ್ತದೆ.

ಆಳವಾಗಿ ಗೌರವಿಸುತ್ತದೆ

ಪ್ರಜಾಪ್ರಭುತ್ವದ ಆತ್ಮವಾಗಿರುವ ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಯ ಮನೋಭಾವವು ನಮ್ಮನ್ನು ವ್ಯಾಖ್ಯಾನಿಸುತ್ತದೆ. ಅಲ್ಲದೆ, ಇದು ಜಗತ್ತಿಗೆ ನಮ್ಮ ದೃಷ್ಟಿಕೋನವನ್ನು ಸಹ ರೂಪಿಸುತ್ತದೆ. ಭಾರತೀಯ ಸಂಸ್ಕೃತಿಯು ನಮ್ಮ ಪರಿಸರ ಮತ್ತು ನಮ್ಮ ಗ್ರಹವನ್ನು ಆಳವಾಗಿ ಗೌರವಿಸುತ್ತದೆ. ನಮ್ಮ ದೃಷ್ಟಿಯು ನಮ್ಮ ಗ್ರಹದ ಪ್ರಗತಿಯ ಪರವಾಗಿದೆ, ನಮ್ಮ ದೃಷ್ಟಿ ನಮ್ಮ ಗ್ರಹದ ಸಮೃದ್ಧಿಯ ಪರವಾಗಿದೆ ಎಂದರು.

ಇದು ಯುದ್ಧದ ಯುಗವಲ್ಲ

ಯೂಕ್ರೇನ್ ಸಂಘರ್ಷದೊಂದಿಗೆ, ಯುದ್ಧವು ಯುರೋಪ್​ಗೆ ಮರಳಿದೆ. ಇದು ಆ ಪ್ರದೇಶದಲ್ಲಿ ತೀವ್ರ ನೋವನ್ನು ಉಂಟು ಮಾಡಿದೆ. ಯುದ್ಧದಲ್ಲಿ ಪ್ರಮುಖ ಶಕ್ತಿಗಳೇ ಎದುರಾಳಿಗಳಾಗಿರುವಾಗ ಪರಿಣಾಮಗಳು ಸಹ ತೀವ್ರವಾಗಿರುತ್ತವೆ. ನಾನು ಮೊದಲೇ ಹೇಳಿದಂತೆ, ಇದು ಯುದ್ಧದ ಯುಗವಲ್ಲ. ಇದು ಮಾತುಕತೆ ಮತ್ತು ರಾಜತಾಂತ್ರಿಕತೆಯ ಯುಗ ಎನ್ನುವ ಮೂಲಕ ರಷ್ಯಾ ಮತ್ತು ಯೂಕ್ರೇನ್​ ದೇಶದ ನಾಯಕರಿಗೆ ನಮೋ ಶಾಂತಿ ಸಂದೇಶವನ್ನು ರವಾನಿಸಿದರು.

ಇಂದಿಗೂ ಉಳಿದುಕೊಂಡಿದೆ

9/11 ದಾಳಿಯಾಗಿ ಎರಡು ದಶಕ ಹಾಗೂ 26/11 ಮುಂಬೈ ದಾಳಿ ನಡೆದ 1 ದಶಕಕ್ಕೂ ಹೆಚ್ಚು ಕಾಲ ಕಳೆದಿದೆ. ಇಂದಿಗೂ ಮೂಲಭೂತವಾದ ಮತ್ತು ಭಯೋತ್ಪಾದನೆ ಹಾಗೇ ಉಳಿದುಕೊಂಡಿದ್ದು, ಇಡೀ ವಿಶ್ವಕ್ಕೆ ಇದು ಅಪಾಯವನ್ನು ಒತ್ತುತ್ತಿದೆ. ಉಗ್ರವಾದದ ಸಿದ್ಧಾಂತಗಳು ಹೊಸ ಗುರುತು ಮತ್ತು ರಚನೆಯನ್ನು ಪಡೆದುಕೊಂಡರೂ ಅದರ ಹಿಂದಿರುವ ಉದ್ದೇಶ ಮಾತ್ರ ಒಂದೇ ಆಗಿದೆ. ಭಯೋತ್ಪಾದನೆ ಎಂಬುದು ಮಾನವೀಯತೆಯ ಶತ್ರುವಾಗಿದೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ವ್ಯವಹರಿಸುವಾಗ ಆದರೆ ಅಥವಾ ಒಂದು ವೇಳೆ ಎಂಬುದಕ್ಕೆ ಅವಕಾಶವನ್ನೇ ಕೊಡಬಾರದರು. ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮತ್ತು ಅದನ್ನು ರಫ್ತು ಮಾಡುವ ಎಲ್ಲ ಶಕ್ತಿಗಳ ವಿರುದ್ಧ ಹೋರಾಡಿ ನಾವು ಜಯಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಜಗತ್ತು ಬದಲಾದಾಗ ನಾವೂ ಬದಲಾಗಬೇಕು

ನಾವು ಸಾಂಕ್ರಾಮಿಕ ರೋಗದಿಂದ ಹೊರಬಂದಂತೆ, ನಾವು ಹೊಸ ವಿಶ್ವ ಕ್ರಮಕ್ಕೆ ಆಕಾರವನ್ನು ನೀಡಬೇಕಿದೆ. ಅದಕ್ಕಾಗಿಯೇ ಆಫ್ರಿಕನ್ ಯೂನಿಯನ್‌ಗೆ G-20ನ ಪೂರ್ಣ ಸದಸ್ಯತ್ವವನ್ನು ನೀಡಲಾಗುವುದು ಎಂದು ನಾನು ದೃಢವಾಗಿ ನಂಬುತ್ತೇನೆ. ನಾವು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಬಹುಪಕ್ಷೀಯ ಸಂಸ್ಥೆಗಳನ್ನು ಸುಧಾರಿಸಬೇಕು. ಜಗತ್ತು ಬದಲಾದಾಗ ನಾವೂ ಬದಲಾಗಬೇಕು ಎಂದರು.

2016 ರಲ್ಲಿ ನಾನು ಇಲ್ಲಿಗೆ ಬಂದಾಗ, ನಮ್ಮ ಸಂಬಂಧವು ಮಹತ್ವದ ಭವಿಷ್ಯಕ್ಕಾಗಿ ಪ್ರಧಾನವಾಗಿದೆ ಎಂದು ಹೇಳಿದ್ದೆ. ಆ ಭವಿಷ್ಯ ಇಂದು ನಿಜವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net