ರಣಬೀರ್ ಪತ್ನಿ ಪಾತ್ರದಲ್ಲಿ ರಶ್ಮಿಕಾ! ಕುತೂಹಲ ಕೆರಳಿಸಿದ ಮುಂದಿನ ಚಿತ್ರ...

Published on
ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ರಶ್ಮಿಕಾ ಅವರು ನೀಡಿರುವ ಸೂಪರ್ ಹಿಟ್ ಸಿನಿಮಾಗಳಿಂದ ಅವರು ಈಗಾಗಲೇ ಉತ್ತರ ಭಾರತದಲ್ಲಿ ಎಲ್ಲರಿಗೂ ಪರಿಚಿತರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹೌದು, ನಟಿ ರಶ್ಮಿಕಾ ಅವರ ಮೊದಲ ಬಾಲಿವುಡ್ ಚಿತ್ರ ‘ಮಿಷನ್ ಮಜ್ನು’ ಶೂಟಿಂಗ್ ಮುಗಿಸಿದ್ದು ತೆರೆಗಪ್ಪಳಿಸೋಕೆ ರೆಡಿಯಾಗಿದೆ. ಇನ್ನು, ಈ ಸಿನಿಮಾದ ಜತೆಗೆಯೇ ಅವರ ಎರಡನೇ ಹಿಂದಿ ಚಿತ್ರ ‘ಗುಡ್ ಬೈ’ ಕೂಡಾ ರಿಲೀಸ್ ಆಗೋಕೆ ರೆಡಿಯಾಗುತ್ತಿದೆ. ಈ ಎರಡು ಸಿನಿಮಾಗಳ ಸುದ್ದಿಗಳ ನಡುವೆ ನ್ಯಾಷನಲ್ ಕ್ರಶ್ ರಶ್ಮಿಕಾರ ಮುಂದಿನ ಹಿಂದಿ ಚಿತ್ರದ ಬಗ್ಗೆ ಈಗಾಗಲೇ ಹಲವು ಮಾಹಿತಿಗಳು ಹರಿದಾಡುತ್ತಿವೆ.
ಇದಕ್ಕೆ ಕಾರಣ, ಇತ್ತೀಚೆಗೆ ರಶ್ಮಿಕಾ ಅವರು ಖ್ಯಾತ ನಿರ್ಮಾಪಕ, ನಿರ್ದೇಶಕರಾದ ಕರಣ್ ಜೋಹರ್ ಅವರ ಕಛೇರಿಗೂ ಭೆಟಿ ನೀಡಿದ್ದು. ಅಂದಹಾಗೆ, ನಟಿ ರಶ್ಮಿಕಾ ಬಾಲಿವುಡ್​ನ ಖ್ಯಾತ ನಟರೋರ್ವರೊಂದಿಗೆ ತೆರೆ ಹಂಚಿಕೊಳ್ಳುವುದು ಪಕ್ಕಾ ಎನ್ನಲಾಗಿದೆ. ಹಾಗಾದರೆ, ಅವರು ಯಾರು ಅಂತೀರಾ...? 'ಅರ್ಜುನ್ ರೆಡ್ಡಿ' ಸಿನಿಮಾದ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಅವರ ನಿರ್ದೇಶನದ ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ಚಿತ್ರಕ್ಕೆ ನಾಯಕ ನಟ ರಣಬೀರ್ ಕಪೂರ್ ಅಂತೆ. ಹೌದು, ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಹಾಗೂ ರಣಬೀರ್ ಕಪೂರ್ ಅವರ ಕಾಂಬಿನೇಷನ್​ನಲ್ಲಿ ‘ಅನಿಮಲ್’ ಎಂಬ ಚಿತ್ರ ಕೆಲ ದಿನಗಳ ಹಿಂದೆ ಅನೌನ್ಸ್ ಆಗಿತ್ತು.
ಇನ್ನು, ಈ ಚಿತ್ರದ ಕೆಲಸ ಆರಂಭವಾಗಿದ್ದು, ಈ ಹಿಂದೆ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ, ಪರಿಣೀತಿ ಅವರು ಈ ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ಮಾಹಿತಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ರಶ್ಮಿಕಾ ಅವರು ಪರಿಣೀತಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿಯೂ, ನಟಿ ರಶ್ಮಿಕಾ ಅವರು ಈ ಸಿನಿಮಾದಲ್ಲಿ ರಣಬೀರ್ ಅವರ ಪತ್ನಿಯ ಪಾತ್ರದಲ್ಲಿ ತೆರೆ ಮೇಲೆ ಮಿಂಚಲಿದ್ದಾರಂತೆ. ಈ ಸುದ್ದಿಗಳು ನಟಿ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗಂತೂ ನಿಜಕ್ಕೂ ತುಂಬಾನೆ ಖುಷಿ ಕೊಟ್ಟಿದೆ ಎನ್ನಬಹುದು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net