ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವನನ್ನು ಇರಿದು ಕೊಂದ ತಂದೆ!

Stab
Published on

ನವದೆಹಲಿ: ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಸುಮಾರು ಒಂದು ವರ್ಷದ ನಂತರ, ಭಾನುವಾರ ಮುಂಜಾನೆ ಗೊಂಡಲ್ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಚಾಕುವಿನಿಂದ ಇರಿದು ಕೊಂದಿದ್ದಾರೆ. ಘಟನೆ ನಡೆದ ಕೆಲವು ಗಂಟೆಗಳ ನಂತರ, ಪೊಲೀಸರು ಸಂತ್ರಸ್ತೆಯ ತಂದೆಯನ್ನು ಬಂಧಿಸಿದರು.

ಗೊಂಡಾಲ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ವಿಜಯ್ ಬಟಾಲಾ ಎಂಬಾತನನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಬಟಾಲಾ ಎಂಬಾತ ತನ್ನ ಸ್ನೇಹಿತ ದೀಪ್ ಮಾಳವೀಯ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಗೊಂಡಾಲ್ ಪಟ್ಟಣದ ಚಾರ್ ದುಕಾನ್ ಬಳಿ ಈ ಘಟನೆ ನಡೆದಿದೆ.

ಎಫ್‌ಐಆರ್‌ ಪ್ರಕಾರ , ಆಟೋರಿಕ್ಷಾ ಡ್ರೈವರ್ ಆಗಿರುವ ಹುಡುಗಿಯ ತಂದೆ ಬಟಾಲಾ ಹೆಸರನ್ನು ಕರೆದು ನಿಲ್ಲಿಸಿದರು. ನಂತರ ಆಟೋ-ರಿಕ್ಷಾ ಚಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ ಎದೆಗೆ ಚಾಕುವಿನಿಂದ ಇರಿದಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಗೂಡ್ಸ್ ಗಾಡಿ ಓಡಿಸುತ್ತಿದ್ದಾತ, ಗಾಯಾಳು ಬಟಾಲಾನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಟಾಲಾ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಬಟಾಲಾನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಟೋ ರಿಕ್ಷಾ ಚಾಲಕನ ಮೇಲೆ ಕೊಲೆ ಆರೋಪವನ್ನು ದಾಖಲಿಸಿದ್ದು ಕೆಲ ಗಂಟೆಗಳ ನಂತರ ಆತನನ್ನು ಬಂಧಿಸಿದ್ದಾರೆ.

ಆಟೊರಿಕ್ಷಾ ಚಾಲಕನು ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಂದು ವರ್ಷದ ಹಿಂದೆ ಬಟಾಲ ಮತ್ತು ಬಟಾಲನ ಸ್ನೇಹಿತರಾದ ಆಕಾಶ್, ಗೋವಿಂದ್, ಹಿಟೊ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಿಕ್ಷಾ ಚಾಲಕನ ಬಂಧನದ ನಂತರ, ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಆಟೋರಿಕ್ಷಾ ಚಾಲಕನು ತಾನು ಬಟಾಲಾ ಜತೆಗೆ ಆಗಾಗ್ಗೆ ಜಗಳ ಮಾಡುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆದರೆ, ಭಾನುವಾರ ಸಲ್ಲಿಸಿದ ದೂರಿನಲ್ಲಿ ಬಟಾಲಾ ಅವರ ತಂದೆ ಆಟೋರಿಕ್ಷಾ ಚಾಲಕ ತನ್ನ ಮಗ ಮತ್ತು ಇತರರ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net