ನಾನು ಪಾತ್ರಧಾರಿ ಅಷ್ಟೇ... ಅಧಿಕಾರಿಗಳ ಮುಂದೆ ರನ್ಯಾ 'ಗೋಲ್ಡ್'​ ಬಣ್ಣ ಬಯಲಾಗಿದ್ದೇ ಅದೊಂದು ಜಗಳದಿಂದ! | Ranya Rao

ವಿಜಯವಾಣಿ - 2025-03-06T190847.141
Published on

Ranya Rao: ಮಾ.03ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್​ ಅವ​ರಿಂದ 14.56 ಕೋಟಿ ರೂ. ಮೌಲ್ಯದ 14 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಪೊಲೀಸರು, ಕೆಲವೇ ಕ್ಷಣದಲ್ಲಿ ನಟಿಯನ್ನು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಒಂದೇ ವರ್ಷದಲ್ಲಿ 27 ಬಾರಿ ದುಬೈಗೆ ಭೇಟಿ ನೀಡಿದ್ದ ಈ ಚೆಲುವೆ, 14.2 ಕೆಜಿ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ಚಿನ್ನವನ್ನು ಹೇಗೆ ಸಾಗಿಸುತ್ತಿದ್ದರು? ಇಂಥಾ ಕೆಲಸಕ್ಕೆ ‘ಮಾಣಿಕ್ಯ’ ನಟಿ ಕೈಹಾಕಿದ್ದೇಕೆ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಸದ್ಯ ಇದಕ್ಕೆ ಉತ್ತರ ಹುಡುಕುತ್ತಿರುವ ಖಾಕಿ ಪಡೆ, ಪಾತ್ರಧಾರಿ ಹಿಂದಿರುವ ಸೂತ್ರಧಾರಿಗಾಗಿ ಶೋಧ ನಡೆಸುತ್ತಿದ್ದಾರೆ.

ಯಾವುದೇ ಬ್ಲ್ಯಾಕ್​ ಸ್ಪಾಟ್ ಇಲ್ಲ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ರನ್ಯಾ ರಾವ್ ಪ್ರಕರಣವು ಹಲವು ತಿರುವು ಪಡೆದುಕೊಂಡಿದೆ. ಒಂದು ಕೆಜಿ ಚಿನ್ನ ಸಾಗಿಸಲು ರನ್ಯಾ ಬರೋಬ್ಬರಿ 4ರಿಂದ 5 ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದರು ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ನಟಿಯೇ ನಾಯಕಿ. ಆದರೆ, ಆಕೆಯ ಹಿಂದೆ ಕಾಣದ ಕೈಯೊಂದು ಇರುವುದು ಪೊಲೀಸರಿಗೆ ಸ್ಪಷ್ಟವಾಗಿದೆ. ಈ ಕುರಿತು ಆರೋಪಿ ಕೂಡ ಒಪ್ಪಿಕೊಂಡಿದ್ದಾರೆ. ನನ್ನ ಕರಿಯರ್​ನಲ್ಲಿ ಇಲ್ಲಿಯವರೆಗೆ ಯಾವುದೇ ಕಪ್ಪು ಕಲೆ ಇಲ್ಲ. ಇಲ್ಲಿ ನಾನು ಪಾತ್ರಧಾರಿ ಅಷ್ಟೇ, ಅವರು ಹೇಳಿದ್ದನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಪೊಲೀಸರಿಗೆ ಗೋಲ್ಡ್​ ಸ್ಮಂಗ್ಲಿಂಗ್​ ಹಿಂದೆ ದೊಡ್ಡ ಜಾಲವೇ ಇರುವುದು ಸ್ಪಷ್ಟವಾಗಿದೆ.

ಅಕ್ರಮ ಚಿನ್ನದ ಕಳ್ಳಸಾಗಣೆಯಲ್ಲಿ ಹಲವರ ಕೈವಾಡ ಇರುವುದು ಖಚಿತ. ಇದರಲ್ಲಿ ಅನೇಕರು ಭಾಗಿಯಾಗಿದ್ದಾರೆ ಎಂದು ಕಸ್ಟಮ್ಸ್​ ಅಧಿಕಾರಿಗಳು ಶಂಕಿಸಿದ್ದಾರೆ. ಕಮಿಷನ್ ಜತೆಗೆ ಪ್ರಯಾಣ, ವಸತಿ ಮತ್ತು ಇತರ ವೆಚ್ಚಗಳಿಗಾಗಿ ರನ್ಯಾಳಿಗೆ 12 ಲಕ್ಷ ರೂ. ನೀಡಲಾಗುತ್ತಿತ್ತು. ಒಂದೇ ಪ್ರವಾಸದಲ್ಲಿ ಆಕೆ 10 ಕೆಜಿಗೂ ಹೆಚ್ಚು ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಪೊಲೀಸರು ಕಂಡುಕೊಂಡಿದ್ದಾರೆ. ರನ್ಯಾ ರಾವ್ ಬೆಂಗಳೂರಿಗೆ ತಂದ ಚಿನ್ನವನ್ನು ಯಾರಿಗೆ ನೀಡಿದ್ದಾರೆ ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ರನ್ಯಾ ಬಳಸುತ್ತಿದ್ದ ಬ್ಯಾಂಕ್ ಖಾತೆ, ಮೊಬೈಲ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮಾಸ್ಟರ್ ಮೈಂಡ್‌ಗಾಗಿ ಸಕ್ರಿಯ ಹುಡುಕಾಟ ನಡೆಸುತ್ತಿದ್ದಾರೆ.

ಆದಾಗ್ಯೂ, ಈ ಅಕ್ರಮ ಚಿನ್ನದ ಕಳ್ಳಸಾಗಣೆ ಕಥೆಯಲ್ಲಿ ನಟಿಗೆ ರಾಜಕೀಯ ನಾಯಕರ ಸಹಕಾರವಿದೆ ಎಂಬ ವದಂತಿಗಳು ಕೇಳಿಬಂದಿವೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಮತ್ತು ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ, "ರನ್ಯಾ ರಾವ್ ಅವರೊಂದಿಗೆ ಸಂಪರ್ಕದಲ್ಲಿರುವ ನಾಯಕರ ಜತೆಗೆ ಇತರ ಅಧಿಕಾರಿಗಳ ಹೆಸರುಗಳನ್ನು ತನಿಖೆಯ ಸಮಯದಲ್ಲಿ ಬಹಿರಂಗಪಡಿಸಲಾಗುವುದು. ಆಕೆಗೆ ಕೆಲವು ಕಳ್ಳಸಾಗಣೆದಾರರೊಂದಿಗೆ ಸಂಪರ್ಕವಿದೆ ಎಂಬುದು ತಿಳಿದುಬಂದಿದೆ" ಎಂದು ಹೇಳಿದ್ದಾರೆ.

ಅಧಿಕಾರಿಯೊಂದಿಗಿನ ಜಗಳವೇ ಕಾರಣ

ಬಂಧನಕ್ಕೂ ಕೆಲವು ದಿನಗಳ ಹಿಂದೆ ರನ್ಯಾ ದುಬೈನಿಂದ ಬೆಂಗಳೂರಿಗೆ ಬಂದಾಗ, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಯೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದಾರೆ. ತನ್ನ ಸಂಬಂಧಿಕರ ಹೆಸರನ್ನು ಬಳಸಿಕೊಂಡು, ಆಕೆ ಅಧಿಕಾರಿಗೆ ಬೆದರಿಸಿದ್ದಾರೆ ಎನ್ನಲಾಗಿದೆ. ಈ ಜಗಳವೇ ನಟಿಯನ್ನು ತೊಂದರೆಗೆ ಸಿಲುಕಿಸಿದ್ದು. ಆ ಘಟನೆಯ ಬೆನ್ನಲ್ಲೇ ಅಧಿಕಾರಿ ರನ್ಯಾ ರಾವ್ ಪ್ರಯಾಣಿಸಿದ ವಿವರಗಳನ್ನು ಒಮ್ಮೆ ಪರಿಶೀಲಿಸಿದ್ದಾರೆ. ಆಕೆ ಆಗಾಗ್ಗೆ ದುಬೈಗೆ ಹೋಗುತ್ತಿರುವುದು ಮಾತ್ರವಲ್ಲದೆ, ಪ್ರತಿ ಬಾರಿ ಹೋದಾಗಲೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಿರುವುದು ಗಮನಕ್ಕೆ ಬಂದಿದೆ. ಇದೇ ಅನುಮಾನದಲ್ಲಿ ರನ್ಯಾ ದುಬೈ ಪ್ರವಾಸದ ಮೇಲೆ ಹದ್ದಿನ ಕಣ್ಣಿಡಲಾಗಿತ್ತು. ಅಂತೆಯೇ ಕಡೆಗೂ ಆಕೆಯನ್ನು ಏರ್​ಪೋರ್ಟ್​ನಲ್ಲಿ ಸೆರೆಹಿಡಿದು, ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net