

Ranya Rao: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.56 ಕೋಟಿ ರೂ. ಮೌಲ್ಯದ 14 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಪೊಲೀಸರು, ಕೆಲವೇ ಕ್ಷಣದಲ್ಲಿ ಕನ್ನಡ ನಟಿ ರನ್ಯಾ ರಾವ್ರನ್ನು ಬಂಧಿಸಿದರು. ಒಂದೇ ವರ್ಷದಲ್ಲಿ 27 ಬಾರಿ ದುಬೈಗೆ ಭೇಟಿ ನೀಡಿದ್ದ ಈ ಚೆಲುವೆ, 14.2 ಕೆಜಿ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ಚಿನ್ನವನ್ನು ಹೇಗೆ ಸಾಗಿಸುತ್ತಿದ್ದರು? ಇಂಥಾ ಕೆಲಸಕ್ಕೆ 'ಮಾಣಿಕ್ಯ' ನಟಿ ಕೈಹಾಕಿದ್ದೇಕೆ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.
ಪ್ರಸ್ತುತ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ (ಮಾ.04-ಮಾ.18) ರನ್ಯಾರನ್ನು ಹೆಚ್ಚಿನ ತನಿಖೆ ನಡೆಸಲು ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಲಾಯಿತು. ಆದರೆ, ಇದಕ್ಕೆ ವಾದ ಮಂಡಿಸಿದ ರನ್ಯಾ ಪರ ವಕೀಲರು, ಆರೋಪಿ ನ್ಯಾಯಾಂಗ ಬಂಧನದ ಅವಧಿಯಲ್ಲಿರುವಾಗ ಕಸ್ಟಡಿಗೆ ಕೇಳುವಂತಿಲ್ಲ. ಇದರ ಬದಲಿಗೆ ಜೈಲಿನಲ್ಲೇ ವಿಚಾರಣೆ ಮುಂದುವರಿಸಬಹುದು ಎಂದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಕಸ್ಟಡಿಗೆ ಒಪ್ಪಿಸುವ ಆದೇಶ ಮತ್ತು ನಟಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ (ಮಾ.07) ಮುಂದೂಡಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿರುವುದು ಭಾರೀ ದೊಡ್ಡದು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲಮಗಳಾದ ರನ್ಯಾ ರಾವ್ರನ್ನು ಸೋಮವಾರ (ಮಾ.03) ರಾತ್ರಿ ಡಿಆರ್ಐ ಅಧಿಕಾರಿಗಳು ಬಂಧಿಸಿದ್ದಾರೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆ, ರನ್ಯಾ ಆಗಾಗ್ಗೆ ದುಬೈಗೆ ಭೇಟಿ ನೀಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿ, ಆಕೆಯ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು.
ಈ ಪ್ರಕರಣದ ತನಿಖೆಯಲ್ಲಿ ಆರೋಪಿ ಆಗಿರುವ ರನ್ಯಾ, ಚಿನ್ನದ ಕಳ್ಳಸಾಗಣೆ ಜಾಲದ ಭಾಗವಾಗಿದ್ದರು ಮತ್ತು ದುಬೈನಿಂದ ಬೆಂಗಳೂರಿಗೆ ಸರಕುಗಳನ್ನು ಕಳ್ಳಸಾಗಣೆ ಮಾಡಲು ದುಬಾರಿ ಮೌಲ್ಯದ ಕಮಿಷನ್ ಪಡೆಯುತ್ತಿದ್ದರು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ದುಬೈನಿಂದ ಬೆಂಗಳೂರಿಗೆ ಒಂದು ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ನಟಿ ಸುಮಾರು 4ರಿಂದ 5 ಲಕ್ಷ ರೂ.ಗಳ ಕಮಿಷನ್ ಪಡೆದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಮಗಳ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರಾಮಚಂದ್ರ ರಾವ್, "ರನ್ಯಾ ಮತ್ತು ಆಕೆಯ ಪತಿಯ ವ್ಯವಹಾರಗಳ ಬಗ್ಗೆ ನನಗೆ ಯಾವ ಮಾಹಿತಿಯೂ ತಿಳಿದಿಲ್ಲ. ಪ್ರಕರಣವನ್ನು ಕಾನೂನು ತನಿಖೆ ಮಾಡಲಿ. ಎಲ್ಲರಂತೆಯೇ ಈ ವಿಷಯ ನನಗೂ ಮಾಧ್ಯಮದ ಮೂಲಕವೇ ಗೊತ್ತಾಗಿದ್ದು. ನನ್ನ ಗಮನಕ್ಕೆ ಬಂದಾಗ ಭಾರೀ ಆಘಾತಕ್ಕೊಳಗಾದೆ. ನನಗೆ ಇಂತಹ ವಿಷಯಗಳ ಬಗ್ಗೆ ಅರಿವಿರಲಿಲ್ಲ. ನಾನು ಹೆಚ್ಚೇನೂ ಹೇಳಲು ಬಯಸುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ರನ್ಯಾ ರಾವ್ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದಿದ್ದಾರೆ. ಕಳೆದ 15 ದಿನಗಳಲ್ಲಿ ಆಕೆ ನಾಲ್ಕು ಬಾರಿ ದುಬೈ ಪ್ರವಾಸ ಕೈಗೊಂಡಿದ್ದನ್ನು ಗಮನಿಸಿದ ಅಧಿಕಾರಿಗಳು, ನಂತರದಲ್ಲಿ ಆಕೆಯ ಮೇಲೆ ಅನುಮಾನಗೊಂಡು, ಹದ್ದಿನ ಕಣ್ಣಿಟ್ಟಿದ್ದರು. ರನ್ಯಾ ದುಬೈನಿಂದ ಬಂದಿಳಿಯುತ್ತಿದ್ದಂತೆ ಪರಿಶೀಲಿಸಿದ ಅಧಿಕಾರಿಗಳಿಗೆ ನಟಿಯ ಬಳಿ ಚಿನ್ನದ ಗಟ್ಟಿ ಇರುವುದು ಪತ್ತೆಯಾಗಿದೆ. ತನ್ನ ಬಟ್ಟೆಯಲ್ಲಿ ಮರೆಮಾಚುವ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದು ಖಚಿತ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ,(ಏಜೆನ್ಸೀಸ್).