ಅವಳ ಬದಲಿಗೆ ನನ್ನ ಜೀವ ಹೋಗಬೇಕಿತ್ತು! ಈಗಲೂ ಸೌಂದರ್ಯ ಹೆಸರು ಕೇಳಿದ್ರೆ... ನಟಿ ಆಮನಿ ಭಾವುಕ | Actress Soundarya

ವಿಜಯವಾಣಿ - 2025-03-06T172215.364
Published on

Actress Soundarya: ತಮ್ಮ ಹೆಸರಿಗೆ ತಕ್ಕಂತೆ ಸೌಂದರ್ಯ ಹೊಂದಿದ್ದ ದಿವಂಗತ ನಟಿ ಸೌಂದರ್ಯ, ಟಾಲಿವುಡ್​, ಸ್ಯಾಂಡಲ್​ವುಡ್​ ಸೂಪರ್ ಹಿಟ್ ಮತ್ತು ಕ್ಲಾಸಿಕ್ ಚಿತ್ರಗಳಲ್ಲಿ ನಟಿಸುವ ಮೂಲಕ ಅಪಾರ ಸಿನಿಪ್ರೇಕ್ಷಕರ ಹೃದಯ ಗೆದ್ದವರು. ಮುಖ ಸೌಂದರ್ಯದಲ್ಲಿ ಮಾತ್ರವಲ್ಲದೇ ಅಭಿನಯದಲ್ಲಿಯೂ ಸೌಂದರ್ಯವಂತೆ ಆಗಿದ್ದೆ ನಟಿ, ಹೆಲಿಕಾಪ್ಟರ್​ ಪತನದಲ್ಲಿ ಸಾವಿಗೀಡಾದರು. ಈ ಸುದ್ದಿ ಅಂದು ಇಡೀ ಚಿತ್ರರಂಗ ಮತ್ತು ಅಭಿಮಾನಿಗಳನ್ನು ಅಕ್ಷರಶಃ ಆಘಾತಕ್ಕೆ ದೂಡಿತ್ತು. ಒಂದು ಕಾಲದಲ್ಲಿ ಅದ್ಭುತ ಚಿತ್ರಗಳನ್ನು ನೀಡಿ, ಅಭಿಮಾನಿಗಳ ಮನದಲ್ಲಿ ಬೇರೂರಿ ಕುಳಿತ ಸೌಂದರ್ಯ ಬಗ್ಗೆ ಇದೀಗ ತೆಲುಗು ಹಿರಿಯ ನಟಿ ಆಮನಿ ಮಾತನಾಡಿದ್ದಾರೆ.

ಅಂದು ಚಿತ್ರೋದ್ಯಮದಲ್ಲಿ ಉತ್ತುಂಗದಲ್ಲಿದ್ದ ನಟಿ ಸೌಂದರ್ಯ ಅವರೊಂದಿಗೆ ಬಹಳ ಆತ್ಮೀಯ ಒಡನಾಟ ಹೊಂದಿದ್ದ ನಟಿ ಆಮನಿ, ಇದೇ ಮಾರ್ಚ್ 7ರಂದು ರಿಲೀಸ್ ಆಗಲಿರುವ ತಮ್ಮ 'ನಾರಿ' ಚಿತ್ರದ ಪ್ರಚಾರದ ಸಂದರ್ಶನದಲ್ಲಿ ಭಾಗಿಯಾಗಿ, ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಆಪ್ತ ಸ್ನೇಹಿತೆ ಸೌಂದರ್ಯರನ್ನು ನೆನಪಿಸಿಕೊಂಡ ಆಮನಿ, ಸೌಂದರ್ಯ ಅವರನ್ನು ಕೆಲವು ನಿಮಿಷ ನೆನೆದು ಭಾವುಕರಾದರು.

"ನಾನು ಮತ್ತು ಸೌಂದರ್ಯ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಬಾಲ್ಯದಿಂದಲೂ ನನಗೆ ಕೆಲವೇ ಕೆಲವು ಸ್ನೇಹಿತರು ಇರುವುದು. ಅವರ ಪೈಕಿ ಸೌಂದರ್ಯ ಕೂಡ ಒಬ್ಬರು. ಚಿತ್ರರಂಗದಲ್ಲಿ ನನಗೆ ತುಂಬಾ ಹತ್ತಿರವಾದ ವ್ಯಕ್ತಿ ಎಂದೇ ಹೇಳಬಹುದು. ನಾವಿಬ್ಬರು ಪರಸ್ಪರ ಆತ್ಮೀಯರು. ಆಗಾಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು. ಇದು ಬಹುತೇಕರಿಗೆ ತಿಳಿದಿಲ್ಲ" ಎಂದರು.

"ಸೌಂದರ್ಯ ಸಾವಿನ ಸುದ್ದಿ ತಿಳಿದಾಗ ನಾನು 'ಸ್ವಾಮಿ' ಚಿತ್ರದ ಚಿತ್ರೀಕರಣದಲ್ಲಿದ್ದೆ. ಆಗ ತಾನೇ ಒಂದು ಸಣ್ಣ ಬ್ರೇಕ್​ ನಂತರ ಚಿತ್ರರಂಗಕ್ಕೆ ಮರಳಿದ್ದೆ. ನಾನು ಶೂಟಿಂಗ್‌ನಲ್ಲಿದ್ದಾಗ, ಸೌಂದರ್ಯ ಸಾವಿನ ಸುದ್ದಿ ತಿಳಿದು ಬಿಕ್ಕಿ ಬಿಕ್ಕಿ ಅತ್ತಿದ್ದೆ. ದುಃಖ ತಡೆಯಲಾರದೆ ನಾನು ಸೆಟ್‌ನಲ್ಲಿ ಕುಸಿದುಬಿದ್ದೆ. ಅವಳ ಬದಲಿಗೆ ನಾನಾದರೂ ಹೋಗಬಾರದಿತ್ತೇ ಎಂದು ಭಾವುಕಳಾದೆ. ಸೌಂದರ್ಯ ಆರ್ಥಿಕವಾಗಿ ಚೆನ್ನಾಗಿದ್ದರು. ಬಹಳಷ್ಟು ಸಂಪಾದಿಸಿದ್ದರು. ಆದರೆ, ಅದನ್ನು ಆನಂದಿಸಲಿಲ್ಲ. ಈಗಲೂ ಆಕೆಯ ಹೆಸರು ಕೇಳಿದಾಗ ಕಣ್ಣಂಚಲ್ಲಿ ನೀರು ಮೂಡುತ್ತೆ. ನಾನು ಚಿತ್ರರಂಗ ತೊರೆಯಬೇಕು ಎಂದು ಯೋಚಿಸಿದಾಗ, ಬೇಡ ಎಂದವರು ಸೌಂದರ್ಯ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net