ಸಿದ್ಧಸೂತ್ರದಾಚೆ ಹಿಗ್ಗಲಿದೆ ಬಜೆಟ್ ಗಾತ್ರ; ದಾಖಲೆ 16ನೇ ಮುಂಗಡ ಪತ್ರ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

Siddaramaiah Budget
Published on

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ನಾಡಿನ ಏಳು ಕೋಟಿ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಬಂಧಪಡುವ ಹತ್ತು ಹಲವು ವಿಶೇಷತೆಗಳು, ಗ್ಯಾರಂಟಿ ಯೋಜನೆಗಳು ಮತ್ತು ಸಾಲದ ಪ್ರಮಾಣ ಏರಿಕೆ ಕುರಿತ ಕುತೂಹಲ ಹೊತ್ತ ರಾಜ್ಯದ ಮುಂದಿನ ಆರ್ಥಿಕ ವರ್ಷದ (2025-26) ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸುತ್ತಿದ್ದಾರೆ. ಆ ಮೂಲಕ 16ನೇ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆಯಲಿದ್ದಾರೆ. ಬಜೆಟ್ ಗಾತ್ರ ಕಳೆದ ಆರ್ಥಿಕ ಸಾಲಿಗಿಂತ ಶೇ.10ರಷ್ಟು ವೃದ್ಧಿಯೊಂದಿಗೆ 4.15 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ ದಟ್ಟವಾಗಿದೆ.

ಗ್ಯಾರಂಟಿ ಭವಿಷ್ಯ ನಿರ್ಧಾರ: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಕ್ಕೆ ತೊಂದರೆಯಾಗಿದೆ ಎಂಬ ಚರ್ಚೆ ಜನಜನಿತ. ಕಾಂಗ್ರೆಸ್ ಶಾಸಕರೂ ಸಮಯ ಸಿಕ್ಕಾಗಲೆಲ್ಲ ಈ ಅಭಿಪ್ರಾಯವನ್ನು ಮುಕ್ತವಾಗಿ ಹೊರಹಾಕಿದ್ದಾರೆ. ಆದರೆ, ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೊಂಡೇ ಬಂದಿದ್ದಾರೆ. ಈ ಕಾರಣಕ್ಕೆ 2025-26ನೇ ಸಾಲಿನ ಬಜೆಟ್​ನಲ್ಲಿ ಗ್ಯಾರಂಟಿಗಳಿಗೆ ಎಷ್ಟು ಹಣ ಮೀಸಲಿಡುತ್ತಾರೆಂಬ ಕುತೂಹಲವಿದೆ. ಲಭ್ಯ ಮಾಹಿತಿ ಪ್ರಕಾರ ಗ್ಯಾರಂಟಿ ಯೋಜನೆಗಳ ವಿಸ್ತಾರಕ್ಕೆ ಅವಕಾಶ ಕೊಡದೇ ಪ್ರಸಕ್ತ ಆರ್ಥಿಕ ಸಾಲಿನ ಪ್ರಮಾಣದಲ್ಲೇ ಮುಂದುವರಿಸಲು ತೀರ್ವನಿಸಲಾಗಿದೆ.

State Budget
State Budget

ತೆರಿಗೆ ಲೆಕ್ಕಾಚಾರ: 2024-25ನೇ ಸಾಲಿನ ಬಜೆಟ್​ನಲ್ಲಿ 2,63,177.82 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಜನವರಿ ಅಂತ್ಯದೊಳಗೆ 2,06,704.44 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಮೂಲಕ ಶೇ.80 ಗುರಿ ಸಾಧನೆಯಾಗಿತ್ತು. ಫೆಬ್ರವರಿ, ಮಾರ್ಚ್​ನಲ್ಲಿ ಗುರಿ ಸಮೀಪಿಸ ಲಿದ್ದು, ಇದೇ ಆತ್ಮವಿಶ್ವಾಸದಲ್ಲಿ 2025-26ನೇ ಸಾಲಿನಲ್ಲಿ ಶೇ.10ರ ತೆರಿಗೆ ವೃದ್ಧಿಯ ಗುರಿ ನಿಗದಿ ಆಗುವ ಅಂದಾಜಿದೆ.

ಬಂಡವಾಳ ವೆಚ್ಚ: ಸರ್ಕಾರ ಯೋಜನೆಗಳಿಗೆ, ತನ್ನ ದಿನನಿತ್ಯದ ಆಗುಹೋಗುಗಳಿಗೆ ವೆಚ್ಚ ಮಾಡುವುದರ ಜತೆಗೆ ಬಂಡವಾಳ ವೆಚ್ಚ ಎಷ್ಟು ಪ್ರಮಾಣದಲ್ಲಿ ಮಾಡುತ್ತದೆ ಎಂಬುದು ವಿಶೇಷ ಸಂಗತಿ. ಬಂಡವಾಳ ವೆಚ್ಚ ಅಭಿವೃದ್ಧಿಯ ದೊ್ಯೕತಕವಾಗಿರಲಿದೆ. 2024-25ನೇ ಸಾಲಿನಲ್ಲಿ ಈ ವೆಚ್ಚಕ್ಕೆ 55,877.15 ಕೋಟಿ ರೂ. ಮೀಸಲಿರಿಸಿತ್ತು. ಆದರೆ, ಕೊನೆ ಎರಡು ತಿಂಗಳಲ್ಲಿ ಬರೋಬ್ಬರು 20 ಸಾವಿರ ಕೋಟಿ ರೂ. ವೆಚ್ಚ ಮಾಡುವುದು ಬಾಕಿ ಇತ್ತು. ಅಂದರೆ ಆರ್ಥಿಕ ವರ್ಷದ ಕೊನೆಯಲ್ಲಿ ಬಿಗಿಯಾದ ಸಂದರ್ಭ ಸೃಷ್ಟಿಯಾಗಿದ್ದು ಕಂಡುಬರುತ್ತದೆ.

Opposition MLAs

ವಿತ್ತೀಯ ಕೊರತೆ: ಸರ್ಕಾರ ಸಾಲ ಹೊರತುಪಡಿಸಿದ ಆದಾಯ ದಲ್ಲಿ ಹೆಚ್ಚಿನದನ್ನು ಖರ್ಚು ಮಾಡಿದಾಗ ಅದು ಹಣಕಾಸಿನ ಕೊರತೆಯಾಗಿರಲಿದೆ, ಅಂದರೆ ವಿತ್ತೀಯ ಕೊರತೆ. ಇದು ಸರ್ಕಾರ ಎಷ್ಟು ಸಾಲ ಪಡೆಯಬೇಕು ಎಂಬುದರ ಅಳತೆಗೋಲಾಗಲಿದೆ. ಈ ವಿತ್ತೀಯ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಿದ್ದು, 2025-26ನೇ ಸಾಲಿಗೆ ಈ ಕೊರತೆ ಪ್ರಮಾಣ 90 ಸಾವಿರ ಕೋಟಿ ರೂ. ಸಮೀಪಿಸಲಿದೆ.

ವೆಚ್ಚದ್ದೇ ಸವಾಲು: ನಿರೀಕ್ಷಿತ ಆದಾಯದಲ್ಲಿ ವೆಚ್ಚ ತೂಗಿಸುವುದೇ ಸರ್ಕಾರಕ್ಕಿರುವ ದೊಡ್ಡ ಸವಾಲು. ಮುಖ್ಯವಾಗಿ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ತರ್ಕಬದ್ಧಗೊಳಿಸುವ ಮೂಲಕ ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರ ಬಯಸಿದಂತಿದೆ. ಇದು ಬಜೆಟ್​ನಲ್ಲೂ ಪ್ರತಿಫಲನಾಗುವ ಸಾಧ್ಯತೆ ಇದೆ.

ವಿಶೇಷ ಬ್ಯಾಗ್: ಲಿಡ್ಕರ್ ವಿಶೇಷವಾಗಿ ತಯಾರಿಸಿ ಆರ್ಥಿಕ ಇಲಾಖೆಗೆ ನೀಡಿದ ಬಜೆಟ್ ಬ್ಯಾಗ್​ನಲ್ಲಿ ಸಿಎಂ ಸಿದ್ದರಾಮಯ್ಯ 2025-26ರ ಸಾಲಿನ ಬಜೆಟ್ ಪುಸ್ತಕಗಳನ್ನು ಕೊಂಡೊಯ್ದು ಮಂಡಿಸಲಿದ್ದಾರೆ.

ಬಜೆಟ್ ಘೋಷಣೆ ಸಾಧ್ಯತೆ
  • ಗ್ಯಾರಂಟಿಗಳಿಗೆ 53 ಸಾವಿರ ಕೋಟಿ ರೂ. ಅನುದಾನ ಕ್ಯಾಪ್, ಅಲೆಮಾರಿ ಕುರಿಗಾಹಿಗಳ ರಕ್ಷಣೆಗಾಗಿ ಕಾನೂನು
  • ಬೆಂಗಳೂರು ಮೆಟ್ರೋಗೆ ಡಬಲ್ ಡೆಕ್ಕರ್ ಮೆಲ್ಸೇತುವೆ, ಗಿಗ್ ವರ್ಕರ್​ಗಳಿಗೆ ಅನುಕೂಲತೆಗೆ ಕಾನೂನು ಚಾವಡಿ
  • ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗೆ ಹೊಸ ಕೊಡುಗೆ, ಹಿಂದುಳಿದ ವರ್ಗದ ಮಕ್ಕಳಿಗೆ ಯುಪಿಎಸ್ಸಿ ತಯಾರಿಗೆ ಆಶ್ರಯ
  • ಮಾನವ- ವನ್ಯಜೀವಿ ಸಂಘರ್ಷ ತಡೆಗೆ ದೀರ್ಘಾವಧಿ ಕಾರ್ಯಕ್ರಮ, ಮತ್ತಷ್ಟು ಕರ್ನಾಟಕ ಪಬ್ಲಿಕ್ ಶಾಲೆ ಘೋಷಣೆ ಮೂಲಕ ಬಲ
  • ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ, ಪ್ರವಾಸೋದ್ಯಮಕ್ಕೆ ಪಿಪಿಪಿ ಮಾದರಿ ಮೂಲಸೌಕರ್ಯಕ್ಕೆ ಒತ್ತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net