

ಪ್ರಯಾಗ್ರಾಜ್: ಕಠಿಣ ಪರಿಶ್ರಮ ಒಂದಿದ್ದರೆ ಸಾಕು ಯಶಸ್ಸು ನಮ್ಮ ಪಾಲಾಗುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಅದೇ ರೀತಿ ಕುಟುಂಬವೊಂದು ಬರೀ 45 ದಿನದಲ್ಲಿ 30 ಕೋಟಿ ರೂಪಾಯಿ ಸಂಪಾದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಇವರ ಯಶಸ್ಸನ್ನು ಶ್ಲಾಘಿಸಿ ಪೋಸ್ಟ್ಗಳನ್ನು ಹಾಕುತ್ತಿದ್ದು, ಇವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಜನವರಿ 13ರಂದು ಆರಂಭವಾಗಿ ಫೆಬ್ರವರಿ 26ರಂದು ಸಂಪನ್ನಗೊಂಡ ಮಹಾಕುಂಭ ಮೇಳಕ್ಕೆ (Mahakumbh Mela) ವಿಶ್ವದ ಮೂಲೆ ಮೂಲೆಗಳಿಂದ ಭಕ್ತರ ದಂಡೇ ಆಗಮಿಸಿದ್ದು, ಉತ್ತರಪ್ರದೇಶ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಮಹಾಕುಂಭಮೇಳವು ಅನೇಕರ ಬದುಕಿನ ದಿಕ್ಕನ್ನೇ ಬದಲಿಸಿದ್ದು, ಅದೇ ರೀತಿ ನಾವಿಕ ಕುಟುಂಬವೊಂದು ಕುಂಭಮೇಳದಿಂದಾಗಿ ಕೋಟ್ಯಾಧಿಪತಿಗಳಾಗಿದ್ದು, ಸದ್ಯ ಇವರ ಸಕ್ಸಸ್ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ.
ಪ್ರಯಾಗ್‌ರಾಜ್‌ನ ಅರೈಲ್ ಪ್ರದೇಶದ ದೋಣಿ ಚಾಲಕ ಪಿಂಟು ಮಹಾರ ಎಂಬುವವರು 45 ದಿನದಲ್ಲಿ 30 ಕೋಟಿ ರೂಪಾಯಿ ಸಂಪಾದಿಸಿದ್ದು, ಇವರ ಯಶೋಗಾಥೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇವರ ಬಳಿ 130 ಬೋಟ್ಗಳಲ್ಲಿ 45 ದಿನಗಳ ಕಾಲ ಮಹಾಕುಂಭ ಮೇಳಕ್ಕೆ (Mahakumbh Mela) ಆಗಮಿಸುವ ಭಕ್ತರನ್ನು ಸ್ನಾದ ಘಾಟ್ಗಳಿಗೆ ಕರೆದುಕೊಂಡು ಹೋಗಿ 30 ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡಿದ್ದು, ಈ ಬಗ್ಗೆ ಖುದ್ದು ಯೋಗಿ ಆದಿತ್ಯನಾಥ್ ಅವರೇ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿರುವ ದೋಣಿ ಚಾಲಕ ಪಿಂಟು ಮಹಾರ, ಇದು ದೈವಿಕ ಅನುಗ್ರಹ ಮತ್ತು ಆಶೀರ್ವಾದ ಎಂದರೆ ತಪ್ಪಾಗಲಾರದು. ನನಗೆ 100 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಕುಟುಂಬವಿದೆ. ಭಕ್ತರ ಬೃಹತ್ ಆಗಮನವನ್ನು ನಿರೀಕ್ಷಿಸಿ, ಮಹಾಕುಂಭಕ್ಕೆ ಮುಂಚಿತವಾಗಿ ಒಟ್ಟು 130 ದೋಣಿಗಳನ್ನು ಚಿನ್ನವನ್ನು ಅಡವಿಟ್ಟು, ಸಾಲ ಮಾಡಿ ತೆಗೆದುಕೊಂಡೆ, ಅಲ್ಲಿಯವರೆಗೆ ನನ್ನ ಬಳಿ 60 ದೋಣಿಗಳಿದ್ದವು.
2019 ರ ಕುಂಭಮೇಳದಲ್ಲಿ 24 ಕೋಟಿ ಭಕ್ತರು ಪ್ರಯಾಗರಾಜ್‌ಗೆ ಆಗಮಿಸಿದ್ದರು, ಈ ಅನುಭವವು 2025 ರ ಮಹಾಕುಂಭಕ್ಕೆ ಇನ್ನೂ ಹೆಚ್ಚಿನ ಭಕ್ತರು ಬರುತ್ತಾರೆ ಎಂದು ನಿರೀಕ್ಷಿಸಲು ಸಹಾಯ ಮಾಡಿತು. 70 ಹೆಚ್ಚುವರಿ ದೋಣಿಗಳನ್ನು ಖರೀದಿಸಿ ವ್ಯಾಪಾರವನ್ನು ವಿಸ್ತರಿಸಿದೆ. ಮಹಾಕುಂಭಮೇಳವು ಒಂದು ವರದಾನವಾಗಿ ಪರಿಣಮಿಸಿತು. ಕುಟುಂಬದ ಭವಿಷ್ಯವನ್ನು ಭದ್ರಪಡಿಸಲು ಗಣನೀಯ ಆದಾಯ ಗಳಿಸಿತು. ಈಗ ನಾನು ನನ್ನ ಮಕ್ಕಳಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.
ಇದು ಬರೀ ನಮ್ಮ ಕುಟುಂಬದ ಕಥೆಯಲ್ಲ. ಮಹಾಕುಂಭವು ಇತರ ಅನೇಕ ದೋಣಿ ನಾವಿಕರ ಕುಟುಂಬಗಳಿಗೆ ಸಂಪತ್ತು ಗಳಿಸಿಕೊಟ್ಟಿದೆ. ಅವರಲ್ಲಿ ಅನೇಕರು ತಮ್ಮ ಸಾಲ ಮರುಪಾವತಿಸಿದ ನಂತರ ಈಗ ಸುರಕ್ಷಿತ ಭವಿಷ್ಯದ ಹಾದಿಯನ್ನು ಸುಗಮ ಮಾಡಿಕೊಂಡಿದ್ದಾರೆಂದು ನಾವಿಕ ಪಿಂಟು ಮಹಾರ ಹೇಳಿದ್ದಾರೆ.