

ನವದೆಹಲಿ: ಲಾಹೋರಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಬಳಗ 50 ರನ್ಗಳ ಭರ್ಜರಿ ಜಯವನ್ನು ಸಾಧಿಸಿದ್ದು, ಚೋಕರ್ಸ್ ಎಂಬ ಹಣೆಪಟ್ಟಿಯೊಂದಿಗೆ ದಕ್ಷಿಣ ಆಪ್ರಿಕಾ ತಂಡ ನಿರ್ಗಮಿಸಿದೆ.
ಇನ್ನೂ ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ (100 ರನ್, 67 ಎಸೆತ, 10 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ನ್ಯೂಜಿಲೆಂಡ್ ಬೌಲರ್ಗಳ ಬೆಂಡೆತ್ತಿದ ಮಿಲ್ಲರ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮುನ್ಸೂಚನೆಯನ್ನು ನೀಡಿದರು. ಆದರೆ, ಅಂತಿಮವಾಗಿ ಸೋಲಿನ ಅಂತರವನ್ನು ತಗ್ಗಿಸುವಲ್ಲಿ ಯಶಸ್ವಿಯಾದರು. ಇದೀಗ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಡೇವಿಡ್ ಮಿಲ್ಲರ್ ಆರೋಪ ಮಾಡಿದ್ದು, ಕ್ರೀಡಾ ವಲಯದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.
ಪಂದ್ಯದ ಬಳಿಕ ಮಾತನಾಡಿದ ಡೇವಿಡ್ ಮಿಲ್ಲರ್, 1 ಗಂಟೆ 40 ನಿಮಿಷಗಳ ಪ್ರಯಾಣವಷ್ಟೇ. ಆದರೆ ಅದನ್ನು ನಿರ್ವಹಿಸಬೇಕಲ್ಲವೇ. ಪಂದ್ಯ ಮುಗಿದ ಮರುದಿನ ಬೆಳಗಿನ ಜಾವ ಪ್ರಯಾಣಿಸಬೇಕು. ಪಂದ್ಯ ಮುಗಿದ ನಂತರ ಮರಳಿ ಪ್ರಯಾಣಿಸಿದ್ದೇವೆ. ಒಟ್ಟಾರೆ ಐದು ಗಂಟೆಗಳ ಪ್ರಯಾಣದ ನಂತರ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಇರಬೇಕಿತ್ತು. ಆದರೆ ಪರಿಸ್ಥಿತಿ ನಾವು ಅಂದುಕೊಂಡಂತೆ ಇರಲಿಲ್ಲ.
ಇನ್ನೂ ಫೈನಲ್ ಪಂದ್ಯದ ಕುರಿತು ಮಾತನಾಡಿ, ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಉತ್ತಮ ತಂಡಗಳು, ಹಲವು ವರ್ಷಗಳಿಂದ ಭಾರತ ತಂಡವು ತನ್ನ ಸಾಮರ್ಥ್ಯ ಏನು ಎಂಬುದನ್ನು ಜಗತ್ತಿಗೆ ತೋರಿಸಿದೆ. ನ್ಯೂಜಿಲೆಂಡ್ ತಂಡದ ಆಟಗಾರರು ಕೂಡ ಉತ್ತಮವಾಗಿದ್ದಾರೆ. ಒಂದು ರೋಚಕ ಪಂದ್ಯ ಜರುಗುವುದು ಖಚಿತ ಎಂದು ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ಹೇಳಿದ್ದಾರೆ.
ಭದ್ರತೆಯ ಕಾರಣ ನೀಡಿ ಭಾರತ ಟೂರ್ನಿಯನ್ನು ದುಬೈನಲ್ಲಿ (ಹೈಬ್ರಿಡ್ ಮಾದರಿ) ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ಆಡುತ್ತಿದ್ದು, ಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳು ದುಬೈನಲ್ಲಿ ಜರುಗಲಿದೆ. ಮಾರ್ಚ್ 02ರಂದು ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಎದುರು ಗೆದ್ದು ಬೀಗಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿತ್ತು. ಎ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದವು.
ಅದರಂತೆ ಐಸಿಸಿ ರೂಪಿಸಿದ್ದ ನಿಯಮದ ಪ್ರಕಾರ ಎ ಗುಂಪಿನ ದಕ್ಷಿಣ ಆಫ್ರಿಕಾ ಹಾಗೂ ಬಿ ಗುಂಪಿನ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡವು ಸೆಮಿಫೈನಲ್ ಆಡಲು ಕರಾಚಿಯಿಂದ ಲಾಹೋರ್ಗೆ ಪ್ರಯಾಣಿಸಬೇಕಾಯಿತು. ಈ ಕಾರಣಕ್ಕಾಗಿ ಡೇವಿಡ್ ಮಿಲ್ಲರ್ ಟೂರ್ನಿಯ ವೇಳಾಪಟ್ಟಿ ಕುರಿತು ಅಸಮಾಧಾನ ಹೊರಹಾಕಿರಬಹುದು ಎಂದು ಹೇಳಲಾಗುತ್ತಿದೆ.