

ಲಖನೌ: ಇತ್ತೀಚಿನ ತಿಂಗಳುಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಕ್ಷುಲಕ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿವೆ. ಈ ರೀತಿಯ ವಿಚಿತ್ರ ಘಟನೆಗಳು ಉತ್ತರಪ್ರದೇಶದಲ್ಲಿ ಹೆಚ್ಚು ಎಂದರೆ ತಪ್ಪಾಗಲಾರದು. ಇದೀಗ ವಧುವಿನ ಲಿವ್ ಇನ್ ಪಾರ್ಟನರ್ ಒಬ್ಬರು ನಿಶ್ಚಿತಾರ್ಥ (Engagement) ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ದಕ್ಕೆ ಮದುವೆಯೊಂದು ಮುರಿದು ಬಿದ್ದಿದ್ದು, ಸದ್ಯ ಈ ಸುದ್ದಿ ವೈರಲ್ ಆಗುತ್ತಿದೆ.
ಘಟನೆಯು ಉತ್ತರಪ್ರದೇಶದ ಬುಲಂದರ್ಶಹರ್ನಲ್ಲಿ ನಡೆದಿದ್ದು. ವಧುವಿನ ಗೆಳತಿ ಒಬ್ಬರು ಎಂಗೇಜ್ಮೆಂಟ್ (Engagement) ಸಮಾರಂಭಕ್ಕೆ ದಿಢೀರ್ ಎಂಟ್ರಿ ಕೊಟ್ಟಿದ್ದು, ತಾನು ಹಾಗೂ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಯುವತಿ ನಾಲ್ಕು ವರ್ಷಗಳಿಮದ ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದಿದ್ದಾಗಿ ಹೇಳಿಕೊಂಡಿದ್ದು, ಮಹಿಳೆಯೂ ವಧುವಿನ ಕೈಯನ್ನು ಹಿಡಿದು ಪಾರ್ಟಿಹಾಲ್ನಿಂದ ಕರೆದುಕೊಂಡು ಹೋಗಲು ಮುಂದಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ನಗರದ ಗಾಂಧಿ ಪಾರ್ಕ್ ಬಳಿ ಇರುವ ರೂಬಿ ಹೋಟೆಲಿನಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ (Engagement) ಸಮಾರಂಭಕ್ಕೆ ಬಿನಾ ಎಂಬ ಮಹಿಳೆಯೂ ಪ್ರವೇಶಿಸಿದ್ದು, ತಾನು ಹಾಗೂ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದ ವಧು ನಾಲ್ಕು ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದು, ತನ್ನನ್ನು ಬಿಟ್ಟು ಬೇರೆಯವರ ಜತೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ತನ್ನ ಹೇಳಿದ್ದಾಗಿ ಯುವತಿ ವಿವರಿಸಿದ್ದಾಳೆ.
ಬಿನಾ ಹಾಗೂ ನಿಶ್ವಿತಾರ್ಥ ಮಾಡಿಕೊಳ್ಳುತ್ತಿದ್ದ ವಧು ಕೋಚಿಂಗ್ ಸೆಂಟರ್ ಒಂದರಲ್ಲಿ ಪರಚಿಯವಾಗಿದ್ದು, ಪರಿಚಯ ಪ್ರೀತಿಯಾಗಿ ಇಬ್ಬರು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದರು. ಆದರೆ, ವಧು ಕುಟುಂಬದವರು ನೋಡಿದ ವರನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದು, ಈ ವಿಚಾರ ತಿಳಿದ ಬಿನಾ ನಿಶ್ಚಿತಾರ್ಥ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಜಗಳ ಮಾಡಿದ್ದು, ಕೂಡಲೇ ವರನ ಕಡೆಯವರು ಮದುವೆಯನ್ನು ರದ್ದುಪಡಿಸಿದ್ದಾರೆ.
ಬಿನಾ ಮಾಡಿರುವ ಆರೋಪಗಳನ್ನು ವಧು ತಳ್ಳಿಹಾಕಿದ್ದು, ಸತ್ಯಕ್ಕೆ ದೂರವಾದ ಮಾತು ಎಂದು ಆರೋಪಿಸಿದ್ದಾಳೆ. ಅಲ್ಲದೇ ಬಿನಾ ವಿರುದ್ಧ ವಧು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.