ನಾನು ಮಧ್ಯಪ್ರವೇಶಿಸುವುದಿಲ್ಲ ಆದರೆ... ಸಿಎಸ್​ಕೆ ಕ್ಯಾಪ್ಟನ್ಸಿ ವಿಚಾರವಾಗಿ ಋತುರಾಜ್-ಧೋನಿ ಸಂಭಾಷಣೆ ಬಹಿರಂಗ

Ruturaj Dhoni
Published on

ಮುಂಬೈ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಶುರುವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳು ಭರ್ಜರಿ ಅಭ್ಯಾಸವನ್ನು ನಡೆಸುತ್ತಿವೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್​ಕಿಂಗ್ಸ್ (CSK) ಕೂಡ 2024ರ ವರ್ಷಾಂತ್ಯದಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಲಿಷ್ಠ ತಂಡವನ್ನು ಕಟ್ಟಿದ್ದು, ಈ ಬಾರಿ ಕಪ್ ಗೆಲ್ಲುವ ಮುನ್ಸೂಚನೆಯನ್ನು ನೀಡಿದೆ.

2024ರಲ್ಲಿ ಟೂರ್ನಿ ಆರಂಭವಾಗುವುದಕ್ಕೆ ಮುನ್ನ ಚೆನ್ನೈ ಸೂಪರ್​ಕಿಂಗ್ಸ್ (CSK) ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, ಆರಂಭಿಕ ಆಟಗಾರ ಋತುರಾಜ್​ರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಆದರೆ, ಋತುರಾಜ್ ನಾಯಕತ್ವದಲ್ಲಿ ತಂಡ ಉಪಾಂತ್ಯಕ್ಕೇರುವಲ್ಲಿ ವಿಫಲವಾಗಿತ್ತು. ಇದೀಗ ತಮಗೆ ನಾಯಕನಾಗುವುದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ತಮ್ಮ ಜತೆ ನಡೆಸಿದ ಸಂಭಾಷಣೆಯನ್ನು ಋತುರಾಜ್ ಬಹಿರಂಗಪಡಿಸಿದ್ದು, ಈ ಸುದ್ದಿ ವೈರಲ್ ಆಗಿದೆ.

Ruturaj Dhoni

ಜಿಯೋ ಹಾಟ್​ಸ್ಟಾರ್​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಋತುರಾಜ್​, ಟೂರ್ನಿ ಆರಂಭವಾಗುವುದಕ್ಕೆ ಒಂದು ವಾರವಿರುವಾಗ ಮಹೇಂದ್ರ ಸಿಂಗ್ ಧೋನಿ ಅವರು ನನ್ನ ಬಳಿ ಬಂದು ಈ ಬಾರಿ ನೀನು ತಂಡವನ್ನು ಮುನ್ನಡೆಸುತ್ತಿದ್ದಿಯಾ ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿ ನಾನು ಒಂದು ಕ್ಷಣ ಆಶ್ಚರ್ಯಚಕಿತನಾದೆ.

ಬಳಿಕ ನಾನು ಅವರ ಬಳಿಯೇ ನೀವು ಹೇಳುತ್ತಿರುವುದ ನಿಜವೇ ಎಂದು ಕೇಳಿದೆ. ಅವರು ನಗುತ್ತಾ ಇದು ನಿನ್ನ ತಂಡ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಾನು ಮಧ್ಯಪ್ರವೇಶಿಸುವುದಿಲ್ಲ.ಕೆಲವೊಮ್ಮೆ ನಾನು ಸಲಹೆಗಳನ್ನು ಕೊಡುತ್ತೇನೆ. ಆದರೆ, ಪ್ರತಿಬಾರಿಯೂ ನನ್ನ ಮಾತುಗಳನ್ನು ಪರಿಗಣಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು. ಅವರ ಮಾತುಗಳು ನಿಜಕ್ಕೂ ಅರ್ಥಪೂರ್ಣವಾಗಿತ್ತು ಎಂದು ಸಿಎಸ್​ಕೆ (CSK) ನಾಯಕ ಋತುರಾಜ್ ಮಹೇಂದ್ರ ಸಿಂಗ್ ಧೋನಿ ತಮ್ಮ ಜತೆ ನಡೆಸಿದ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net