

ನವದೆಹಲಿ: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ತನ್ನ ಅಜೇಯ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದ್ದು, ಭಾನುವಾರ (ಮಾರ್ಚ್ 09) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದ್ದು, 25 ವರ್ಷಗಳ ಹಳೆಯ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.
ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಲ್ಲರ ಗಮನ ಸೆಳೆದಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನವನ್ನು ಹಾಡಿ ಹೊಗಳಿರುವ ಮಾಜಿ ನಾಯಕ ಕಪಿಲ್ ದೇವ್ ಆತ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಯೋಚಿಸುತ್ತಾನೆಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕಪಿಲ್ ದೇವ್, ಆತ ದೊಡ್ಡ ಸವಾಲನ್ನು ಸ್ವೀಕರಿಸುವ ಮನೋಭಾವವನ್ನು ಹೊಂದಿದ್ದಾನೆಂದು ನಾನು ಭಾವಿಸುತ್ತೇನೆ. ಆತ ಈ ರೀತಿಯ ಸವಾಲುಗಳನ್ನು ಸ್ವೀಕರಿಸುವುದರಿಂದಲೇ ಹೆಚ್ಚಿನ ಶಕ್ತಿಯನ್ನು ಪಡೆಯುತ್ತಾನೆ. ನಾನು ನೋಡಿದಂರೆ ಈ ರೀತಿ ಆಡಲು ಕೆಲವೇ ಕೆಲವು ಕ್ರಿಕೆಟಿಗರು ಇಷ್ಟಪಡುತ್ತಾರೆ. ಧೋನಿ ಹಾಗೆ ಮಾಡುತ್ತಿದ್ದರು ಎಂಬುದು ನನಗೆ ತಿಳಿದಿದೆ. ಆದರೆ, ಕೊಹ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಯೋಚನೆ ಮಾಡಿ ಆಟವಾಡುತ್ತಾರೆ ಎಂದು ಮಾಜಿ ನಾಯಕ ಕಪಿಲ್ ದೇವ್ ವಿರಾಟ್ ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (84 ರನ್, 98 ಎಸೆತ, 5 ಬೌಂಡರಿ) ಉಪಯುಕ್ತ ಆಟದ ಫಲವಾಗಿ ಭಾರತ ತಂಡ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದು, ಈ ಮೂಲಕ 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಆಸ್ಟ್ರೇಲಿಯಾ ನೀಡಿದ 265 ರನ್ ಗುರಿ ಬೆನ್ನತ್ತಿದ್ದ ಭಾರತ ತಂಡವು ವಿರಾಟ್ ಕೊಹ್ಲಿ (84 ರನ್, 98 ಎಸೆತ, 5 ಬೌಂಡರಿ), ಶ್ರೇಯಸ್ ಅಯ್ಯರ್ (42 ರನ್, 62 ಎಸೆತ, 3 ಬೌಂಡರಿ), ಕೆ.ಎಲ್. ರಾಹುಲ್ (42 ರನ್*, 34 ಎಸೆತ, 2 ಬೌಂಡರಿ, 2 ಸಿಕ್ಸರ್) ಉಪಯುಕ್ತ ಆಟದ ಫಲವಾಗಿ 48.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ಗಳಿಸಿ ಗೆಲುವಿನ ನಗೆ ಬೀರಿತು. ಪ್ರಮುಖವಾಗಿ ವಿರಾಟ್ ಕೊಹ್ಲಿ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ವಿರಾಟ್ರನ್ನು ಪಾಕಿಸ್ತಾನದ ಆಟಗಾರನಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ.