

ಮಂಡ್ಯ: ದಿನದಿಂದ ದಿನಕ್ಕೆ ದೇಶದೆಲ್ಲೆಡೆ ಲೋಕಸಭಾ ಚುನಾವಣೆಯ ಕಾವೇರುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿಗಳ ನಡುವಿನ ಹಣಾಹಣಿ ಭರ್ಜರಿಯಾಗಿ ಸಾಗುತ್ತಿದೆ. ಸದ್ಯ ಎಲ್ಲರ ಚಿತ್ತ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಮೂಡಿದ್ದು, ಯಾರಿಗೆ ಒಲಿಯಲಿದೆ ಮಂಡ್ಯ ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಇನ್ನು ಈ ಮಧ್ಯೆ ಈಗಾಗಲೇ ಲೋಕಸಭಾ ಅಖಾಡದಲ್ಲಿ ಬಹುಮತಗಳಿಂದ ಗೆಲುವು ದಾಖಲಿಸುವ ಸಲುವಾಗಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಒಂದೆಡೆಯಾದರೆ, ಕಾಂಗ್ರೆಸ್ನಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಮತ್ತೊಂದೆಡೆ. ಈ ಇಬ್ಬರ ಕಾಳಗದಲ್ಲಿ ಗೆಲುವಿನ ಲೆಕ್ಕಾಚಾರ ಯಾರಿಗೆ ಎಂಬ ಕುತೂಹಲ ಮತದಾರರಲ್ಲಿ ಹೆಚ್ಚಿದೆ.
ಇನ್ನು ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಕೈಗೊಳ್ಳಲು ಕಾಂಗ್ರೆಸ್ ಮಾಸ್ಟರ್ಪ್ಲಾನ್ ಮಾಡಿದೆ. ಒಕ್ಕಲಿಗರ ಭದ್ರಕೋಟೆಯಲ್ಲಿ ಪಾರುಪತ್ಯ ಸಾಧಿಸಲು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇವರೊಂದಿಗೆ ಎಚ್ಡಿಕೆ ವಿರುದ್ಧ ಸ್ಯಾಂಡಲ್ವುಡ್ನ ಮೋಹಕ ತಾರೆ ನಟಿ ರಮ್ಯ ಕೂಡ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ.
ಏಪ್ರಿಲ್ 17 ಅಥವಾ 20ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಈ ಸಮಾವೇಶದಲ್ಲಿ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯರಿಂದ ಒಂದು ದಿನ ಮತಬೇಟೆ ಇರಲಿದ್ದು, ಮಂಡ್ಯ ಲೋಕಾ ಕ್ಷೇತ್ರದ ಕೆ.ಆರ್.ನಗರ, ಕೆ.ಆರ್.ಪೇಟೆಯಲ್ಲಿ ಮತಯಾಚನೆ ಮಾಡಲಿದ್ದಾರೆ.