

ಚೆನ್ನೈ: ನಿನ್ನೆ (ಏ.08) ಚೆಪಾಕ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದ ಭಾರೀ ಹಣಾಹಣಿಯಲ್ಲಿ 7 ವಿಕೆಟ್ಗಳ ಅಂತರದಿಂದ ರುತುರಾಜ್ ನಾಯಕತ್ವದ ಸಿಎಸ್ಕೆ ಪಡೆ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಗೆದ್ದ ಸಿಎಸ್ಕೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕ ಹಂತದಲ್ಲೇ ಕೆಕೆಆರ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ವಿಯಾಯಿತು. ಶ್ರೇಯಸ್ ಅಯ್ಯರ್ 34, ಸುನಿಲ್ ನರೈನ್ 27, ರಘುವನ್ಶಿ 24 ರನ್ಗಳ ಕೊಡುಗೆಯಿಂದ 20 ಓವರ್ಗಳಲ್ಲಿ ಕೆಕೆಆರ್ 137 ರನ್ ಕಲೆಹಾಕುವಲ್ಲಿ ಮಾತ್ರ ಶಕ್ತವಾಯಿತು. ಇನ್ನು ಈ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ ಪಡೆಗೆ ಕ್ಯಾಪ್ಟನ್ ರುತುರಾಜ್ ಅಜೇಯ 67 ರನ್ ಮತ್ತು ಶಿವಂ ದುಬೆ (28) ಸಿಕ್ಸರ್ಗಳ ಆರ್ಭಟದಿಂದ ಗೆಲುವಿನ ಪತಾಕೆ ಹಾರಿಸುವಂತಾಯಿತು.
ಇನ್ನು ಪಂದ್ಯದ 17ನೇ ಓವರ್ನಲ್ಲಿ ಮುಸ್ತುಫಿಸರ್ ಬೌಲಿಂಗ್ ದಾಳಿಯನ್ನು ಎದುರಿಸುತ್ತಿದ್ದ ಆ್ಯಂಡ್ರು ರಸೆಲ್ ಕ್ರೀಸ್ನಲ್ಲಿದ್ದರು. ಈ ವೇಳೆ ರಸೆಲ್ ಬ್ಯಾಟ್ಗೆ ತಗುಲಿದ ಬಾಲ್ ಕೀಪರ್ ಕ್ಯಾಚ್ ಆಗಿತ್ತು. ನಿರೀಕ್ಷಿಸಿದಂತೆ ಧೋನಿ ಈ ಕ್ಯಾಚ್ನ ಮಿಸ್ ಮಾಡುವುದೇ ಇಲ್ಲ ಎಂದು ಅಪಾರ ಭರವಸೆ, ನಂಬಿಕೆ ಇಟ್ಟುಕೊಂಡ ಅಭಿಮಾನಿಗಳಿಗೆ ಅಂತಿಮವಾಗಿ ನಿರಾಸೆ ಉಂಟಾಯಿತು. ಕಾರಣ ಕ್ಯಾಪ್ಟನ್ ಕೂಲ್ ಆ ಕ್ಯಾಚ್ ಮಿಸ್ ಮಾಡಿಕೊಂಡರು. ಇದು ಧೋನಿಗೆ ಬೇಸರವಾಯಿತು. ಆದರೆ ರಸೆಲ್ಗೆ ಭಾರೀ ಶಾಕ್ ಉಂಟಾಯಿತು. ನಾನು ಔಟ್ ಆದೆ ಎಂದೇ ಭಾವಿಸಿದ್ದ ದೈತ್ಯ ಆಟಗಾರನಿಗೆ, ಧೋನಿ ಕ್ಯಾಚ್ ಮಿಸ್ ಮಾಡುವ ಮೂಲಕ ಜೀವದಾನ ಮಾಡಿದರು.
ಸ್ಟೇಡಿಯಂ ಪೂರ ಧೋನಿ....ಧೋನಿ ಎಂದು ಚೀರಾಡುತ್ತಿದ್ದ ಅಭಿಮಾನಿಗಳು ಮಾಹಿ ಕ್ಯಾಚ್ ಮಿಸ್ ಮಾಡಿಕೊಂಡಾಗ ಬೇಸರ ಹೊರಹಾಕಿದರು ಸಹ ಅಂತಹ ಎಷ್ಟೋ ಕ್ಯಾಚ್ಗಳನ್ನು ಹಿಡಿದಿದ್ದಾರೆ, ಇದೊಂದಲ್ಲವೇ? ಇರಲಿ ಪರವಾಗಿಲ್ಲ ಎನ್ನುತ ತಲೆಕೆಡಿಸಿಕೊಳ್ಳದೆ ತಮ್ಮ ಪ್ರೋತ್ಸಾಹವನ್ನು ಮುಂದುವರೆಸಿದರು. ಇದು ನೋಡುಗರಲ್ಲಿ ಭಾರೀ ಉತ್ಸಾಹ ಮೂಡಿಸಿತು.