21 ವರ್ಷಗಳ ನಂತರ ಸುಕ್ಮಾದಲ್ಲಿರುವ ರಾಮ ದೇವಾಲಯದಲ್ಲಿ ಮತ್ತೆ ಪೂಜೆ ಆರಂಭ

temple
Published on

ಛತ್ತೀಸ್‌ಗಢ: ಸುಕ್ಮಾ ನಕ್ಸಲೀಯರು ಹಲವು ರಾಜ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ. ಆದರೆ ಈಗ ಭದ್ರತಾ ಪಡೆಗಳು ಅವರ ಬೆನ್ನು ಮುರಿಯಲು ಪ್ರಯತ್ನಿಸುತ್ತಿವೆ. 2003ರಲ್ಲಿ ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲರು ದೇವಸ್ಥಾನವನ್ನು ಕೆಡವಿದ್ದರು. ಈ ದೇವಸ್ಥಾನದಲ್ಲಿ ಯಾರೂ ಪೂಜೆ ಮಾಡಬೇಡಿ ಎಂದು ಗ್ರಾಮದ ಜನರಿಗೆ ಬೆದರಿಕೆ ಹಾಕಿದ್ದರು.  

ಈ ಗ್ರಾಮವು ಲಖಪಾಲ್‌ ಸಮೀಪ ಬರುತ್ತದೆ. ಗ್ರಾಮದಲ್ಲಿ ದೇವಸ್ಥಾನವೊಂದು ಶಿಥಿಲಾವಸ್ಥೆಯಲ್ಲಿದ್ದುದನ್ನು ಇತ್ತೀಚೆಗೆ ಸಿಆರ್‌ಪಿಎಫ್ ಗಮನಿಸಿದ್ದು, ದೇವಾಲಯವನ್ನು ದುರಸ್ತಿಗೊಳಿಸಿ ಮತ್ತೊಮ್ಮೆ ಗ್ರಾಮದ ಜನರಿಗೆ ಹಸ್ತಾಂತರಿಸಿದೆ. ಇದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಈ ದೇವಾಲಯವು ಶ್ರೀ ರಾಮ ದೇವಾಲಯವಾಗಿದ್ದು ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ನಕ್ಸಲೀಯರು ಇಲ್ಲಿ ಪೂಜೆ ನಿಲ್ಲಿಸಿದ್ದರು.

ನಕ್ಸಲೀಯರಿಂದ ಸಾಕಷ್ಟು ಭಯವಿದ್ದು, 10 ವರ್ಷಗಳ ಹಿಂದೆ, ಛತ್ತೀಸ್‌ಗಢ, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ, ಬಿಹಾರ ಮತ್ತು ಜಾರ್ಖಂಡ್‌ನ ವಿವಿಧ ಪ್ರದೇಶಗಳಲ್ಲಿ ನಕ್ಸಲೀಯರು ತಮಗೆ ಬೇಕಾದ ಕಡೆ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದರು ಮತ್ತು ಎದುರಾಳಿಗಳನ್ನು ಕೊಲ್ಲುತ್ತಿದ್ದರು. ಇದೀಗ ಈ ನಕ್ಸಲೀಯರನ್ನು ನಾಶಪಡಿಸಲು ಸಿಆರ್‌ಪಿಎಫ್ ನಿರಂತರ ಕಾರ್ಯಾಚರಣೆ ಆರಂಭಿಸಿದೆ. ನಿರಂತರವಾಗಿ ಸಿಆರ್‌ಪಿಎಫ್ ಅಭಿಯಾನವನ್ನು ನಡೆಸುತ್ತಿದೆ.

ಮಾರ್ಚ್ 14 ರಂದು ಸುಕ್ಮಾದ ಲಖಪಾಲ್‌ನಲ್ಲಿ ಪ್ರಸ್ತುತ ಸಿಆರ್‌ಪಿಎಫ್ ತನ್ನ ಶಿಬಿರವನ್ನು ಸ್ಥಾಪಿಸಿದೆ ಎಂದು ಸಿಆರ್‌ಪಿಎಫ್‌ನ 74 ನೇ ಕಾರ್ಪ್ಸ್‌ನ ಕಮಾಂಡೆಂಟ್ ಹಿಮಾಂಶು ಪಾಂಡೆ ಹೇಳಿದ್ದಾರೆ.

ಇದರಿಂದ ನಕ್ಸಲೀಯರ ನೈತಿಕ ಸ್ಥೈರ್ಯ ಕುಸಿಯುತ್ತಿದೆ. ಇತ್ತೀಚೆಗಷ್ಟೇ ಛತ್ತೀಸ್‌ಗಢದಲ್ಲಿ ಸಿಆರ್‌ಪಿಎಫ್ ಹೆಚ್ಚಿನ ಸಂಖ್ಯೆಯ ನಕ್ಸಲೀಯರನ್ನು ಹತ್ಯೆ ಮಾಡಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚನೆಯಾದರೆ ನಕ್ಸಲ್ ಸಮಸ್ಯೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದರು.        

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net