More

    ಮಾತುಬಾರದ, ಕಿವಿ ಕೇಳಿಸದ ವಕೀಲೆಯ ವಾದ; ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ಕರ್ನಾಟಕ ಹೈಕೋರ್ಟ್



    ಬೆಂಗಳೂರು: ರಾಜ್ಯದ ಹೈಕೋರ್ಟ್​ ಇದೇ ಮೊದಲ ಬಾರಿಗೆ ವಾಕ್, ಶ್ರವಣದೋಷವುಳ್ಳ ವಕೀಲೆಯೊಬ್ಬರು ಕೌಟುಂಬಿಕ ವ್ಯಾಜ್ಯ ಪ್ರಕರಣದಲ್ಲಿ ವಾದ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.

    ಕೌಟುಂಬಿಕ ಪ್ರಕರಣವೊಂದರಲ್ಲಿ ಪತಿಗೆ ಲುಕ್ ​ಔಟ್​ ನೋಟಿಸ್​ ಜಾರಿ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ. ಸಂಜ್ಞಾ ಭಾಷೆಯಲ್ಲಿ ಮಂಡಿಸಿದ ವಾದ ಆಲಿಸಿದ ದೇಶದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಕೀಲೆ ಸಾರಾ ಸನ್ನಿ ಮಂಡಿಸಿದ ವಾದವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠವು ಆಲಿಸಿತು.


    ಪ್ರಮಾಣೀಕೃತ ಸಂಜ್ಞಾ ಭಾಷಾ ಇಂಟರ್ಪ್ರಿಟರ್ (ವಿವರಣೆಕಾರ) ಮೂಲಕ ವಕೀಲೆ ಸಾರಾ ಸನ್ನಿ ಸುಪ್ರೀಂ ಕೋರ್ಟ್​ನಲ್ಲಿ ವಾದ ಮಂಡಿಸಿ ದೇಶದ ನ್ಯಾಯಾಂಗದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದರು. ಇದೀಗ ಹೈಕೋರ್ಟ್​ನಲ್ಲಿ ವಾದ ಮಂಡನೆ ಮಾಡಿ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.

    ಮಹಿಳೆಯೊಬ್ಬರು ಪತಿಯ ವಿರುದ್ಧ ಐಪಿಸಿ ಸೆಕ್ಷನ್ 498 (ಎ), 504, 506 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3, 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ಮಹಿಳೆಯ ಪರ ವಕೀಲೆ ಸಾರಾ ವಾದ ಮಂಡಿಸಿದ್ದರು. ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ಲುಕ್‌ಔಟ್ ನೋಟಿಸ್​ಗೆ ತಡೆ ನೀಡುವಂತೆ ಕೋರಿ ಸಾರಾ ಕಕ್ಷಿಗಾರರ ಪತಿ ನ್ಯಾಯಾಲಯದ ಮೊರೆ ಹೋಗಿದ್ದರು.

    ಅರ್ಜಿದಾರರ ಪತ್ನಿಯ ಪರ ವಕೀಲೆ ಸಾರಾ ಸನ್ನಿ ಸಂಜ್ಞಾ ಭಾಷೆಯ ಇಂಟರ್ಪ್ರಿಟರ್ ಮೂಲಕ ವಿವರವಾಗಿ ವಾದ ಮಂಡನೆ ಮಾಡಿದ್ದಾರೆ. ಸಾರಾ ಸನ್ನಿ ಮಾಡಿದ ವಾದ ಮಂಡನೆಯನ್ನು ಪ್ರಶಂಸಿಸಬೇಕಾಗಿದೆ. ಸಂಜ್ಞೆ ಭಾಷಾ ಇಂಟರ್ಪ್ರಿಟರ್ ಮೂಲಕವಾದರೂ ಮೆಚ್ಚುಗೆಯಾಗುವ ರೀತಿಯಲ್ಲಿ ವಾದ ಮಂಡನೆ ಮಾಡಿದ್ದಾರೆ ಎಂದು ನ್ಯಾಯಪೀಠ ಮೆಚ್ಚುಗೆ ವ್ಯಕ್ತಪಡಿಸಿದೆ.

    ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ವಾಕ್ ಮತ್ತು ಶ್ರವಣದೋಷವುಳ್ಳ ವಕೀಲರ ಅಹವಾಲುಗಳನ್ನು ದಾಖಲಿಸಿದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಕರ್ನಾಟಕ ಹೈಕೋರ್ಟ್ ಪಾತ್ರವಾಗಿದೆ ಎಂದರು.

    ಸಾರಾ ಸನ್ನಿ ಮೂಲತಃ ಕೇರಳದ ಕೊಟ್ಟಾಯಂನವರು. ಸಾರಾ ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ವಿದ್ಯಾಲಯದಲ್ಲಿ ಎಲ್​ಎಲ್​ಬಿ ಪದವಿ ಪಡೆದಿದ್ದಾರೆ. ಸಾರಾಗೆ ಬಾಲ್ಯದಿಂದಲೂ ಕಿವಿ ಕೇಳಿಸುತ್ತಿರಲಿಲ್ಲ, ಮಾತು ಸಹ ಬರುತ್ತಿರಲಿಲ್ಲ. ಆದರೆ ತಂದೆ ತಾಯಿ ಬೆಂಬಲದೊಂದಿಗೆ ಎಲ್​ಎಲ್​ಬಿ ಕಲಿತು ವಕೀಲಿ ವೃತ್ತಿ ಆರಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts