'ಅವರಿಗೆ ಟಿಕೆಟ್​ ಕೊಟ್ಟಿಲ್ಲ ಎಂದರೆ ನಾನೂ ನಿಲ್ಲಲ್ಲ' ಎಂದ ರಮೇಶ್ ಜಾರಕಿಹೊಳಿ!

ramesh jarakiholi
Published on

ವಿಜಯಪುರ: 'ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡದೇ ಹೋದರೆ ನಾನೂ ಗೋಕಾಕ್​ನಿಂದ ನಿಲ್ಲುವುದಿಲ್ಲ' ಎಂದು ಶಾಸಕ ರಮೇಶ್​ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.

ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಶುಕ್ರವಾರ ವಿಜಯಪುರ ನಗರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ 13 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದು ಈ ಬಾರಿ ಇನ್ನೂ ಎರಡು ಸ್ಥಾನ ಹೆಚ್ಚಿಗೆ ಗೆಲ್ಲಿಸುವ ಪ್ರಯತ್ನ ಮಾಡುವೆ ಎಂದರು.

ತಮ್ಮೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರಿಗೆ ಟಿಕೆಟ್ ಅನುಮಾನ ಎನ್ನಲಾಗುತ್ತಿದ್ದು, ಇದರಲ್ಲಿ ಮಹೇಶ ಕುಮಟಳ್ಳಿ ಕೂಡ ಒಬ್ಬರು ಎಂಬ ಮಾತು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಕುಮಟಳ್ಳಿಗೆ ಟಿಕೆಟ್ ನೀಡದೇ ಹೋದರೆ ತಾವು ಸಹ ‌ನಿಲ್ಲಲ್ಲ ಎಂದರು.

ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ, 'ಕಾಂಗ್ರೆಸ್ ಮುಳುಗುವ ಹಡಗು. ಈಗ ಹೋಗಿ ಏನು ಮಾಡುವುದು. ಬಿಜೆಪಿ ತತ್ವ ಸಿದ್ದಾಂತ ನಂಬಿ ಕಾಂಗ್ರೆಸ್ ಬಿಟ್ಟು ಬಂದಿದ್ದೇನೆ. ಬಿಜೆಪಿ ದೊಡ್ಡ ಪ್ರವಾಹ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಕೊಂಡಾಡುತ್ತಿದ್ದಾರೆ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net