

ಪುಣೆ: ರಸ್ತೆಯೊಂದರಲ್ಲಿ ತನ್ನ ಅಜ್ಜಿಯ ಜತೆ ನಡೆದುಕೊಂಡು ಹೋಗುತ್ತಿದ್ದ 10 ವರ್ಷದ ಬಾಲಕಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯ ಸರಗಳ್ಳ ನ ಕಳ್ಳತನದ ಯತ್ನವನ್ನು ವಿಫಲಗೊಳಿಸಿದ್ದಾಳೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದೂರಿನ ಪ್ರಕಾರ, ಫೆಬ್ರವರಿ 25ರಂದು ಪುಣೆ ನಗರದ ಮಾಡೆಲ್ ಕಾಲೋನಿ ಪ್ರದೇಶದಲ್ಲಿ 60 ವರ್ಷದ ವೃದ್ಧೆ ಲತಾ ಘಾಗ್ ತನ್ನ ಮೊಮ್ಮಗಳು ರುತ್ವಿ ಫಾಗ್ ಜತೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ದಾರಿ ಕೇಳುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ವೃದ್ಧ ಮಹಿಳೆ ಧರಿಸಿದ್ದ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಇದನ್ನು ನೋಡಿದ 10 ವರ್ಷದ ರುತ್ವಿ ಘಾಗ್ ಕಳ್ಳನ ಮುಖಕ್ಕೆ ಬ್ಯಾಗ್‌ನಿಂದ ಹೊಡೆಯಲು ಆರಂಭಿಸಿದಳು. ಇದರಿಂದಾಗಿ ಶಾಕ್ ನೀಡಲು ಬಂದವನೇ ಶಾಕ್ ಆಗಿದ್ದು ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಹೀಗೆ ಆತನ ಸರ ಕಿತ್ತುಕೊಳ್ಳುವ ಯತ್ನ ವಿಫಲವಾಯಿತು,'' ಎಂದು ದೂರಿನಲ್ಲಿ ತಿಳಿಸಲಾಗಿದೆ.
ಫೆಬ್ರವರಿ 25 ರಂದು ನಡೆದ ಘಟನೆ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ಪುಣೆ ಪೊಲೀಸರು ಸಂತ್ರಸ್ತೆಯನ್ನು ಭೇಟಿ ಮಾಡಿ ವಿಚಾರಣೆ ನಡೆಸಿದ್ದು ಮಾರ್ಚ್ 9ರಂದು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 393 ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)