

ನವದೆಹಲಿ: ದೇಶ ಪಂಚರಾಜ್ಯಗಳ ಚುನಾವಣೆಗೆ ಸಜ್ಜಾಗುತ್ತಿದ್ದು, ಆ ಪೈಕಿ ಕಾಂಗ್ರೆಸ್ನಿಂದ 'ರಾಮಾಯಣದ ಹನುಮಾನ್' ಚುನಾವಣಾ ಕಣಕ್ಕಿಳಿಯುವುದು ಖಚಿತವಾಗಿದೆ. ರಾಜ್ಯವೊಂದರ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶ ಕಂಡುಬಂದಿದೆ.
ಮಿಜೋರಾಂ, ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆ ಪೈಕಿ ಮಧ್ಯಪ್ರದೇಶದ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಇಂದು ತಮ್ಮ ಪಕ್ಷದ 144 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಹೆಸರಿದ್ದು, ಅವರು ಛಿಂದ್ವಾರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಹಾಗೇ ನಟ ವಿಕ್ರಮ್ ಮಸ್ತಲ್ ಹೆಸರಿದ್ದು, ಅವರು ಬುಧ್ನಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಕ್ಷೇತ್ರದಲ್ಲಿ ಇವರ ಪ್ರತಿಸ್ಪರ್ಧಿ ಆಗಿ ಈಗಿನ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧೆ ಮಾಡಲಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಅರುಣ್ ಯಾದವ್ ವಿರುದ್ಧ ಸ್ಪರ್ಧೆ ಮಾಡಿದ್ದ ಶಿವರಾಜ್ ಸಿಂಗ್ ಚೌಹಾಣ್ 58 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದರು.
ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಆನಂದ್ ಸಾಗರ್ ಅವರ 'ರಾಮಾಯಣ್'ನಲ್ಲಿ ಹನುಮಾನ್ ಪಾತ್ರ ಮಾಡಿದ್ದವರು ವಿಕ್ರಮ್ ಮಸ್ತಲ್. ಈ ಧಾರಾವಾಹಿಯಲ್ಲಿ ಗುರ್ಮೀತ್ ಚೌಧರಿ ರಾಮ ಹಾಗೂ ದೆಬಿನಾ ಬೊನರ್ಜಿ ಸೀತೆ ಪಾತ್ರ ಮಾಡಿದ್ದರು. ಹನುಮಾನ್ ಪಾತ್ರ ಮಾಡಿ ಜನಪ್ರಿಯತೆ ಗಳಿಸಿದ್ದ ವಿಕ್ರಮ್ ಮಸ್ತಲ್ ಈ ವರ್ಷದ ಜೂನ್ನಲ್ಲಿ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದರು.
ವಿಕ್ರಮ್ ಮಸ್ತಲ್ ಇತ್ತೀಚೆಗೆ ಬಿಡುಗಡೆ ಆಗಿದ್ದ 'ಆದಿಪುರುಷ್' ಸಿನಿಮಾದ ಹನುಮಾನ್ ಪಾತ್ರದ ಕೆಲವು ಸಂಭಾಷಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ವಿಕ್ರಮ್ ರಾಮಾಯಣ್ ಧಾರಾವಾಹಿ ಮಾತ್ರವಲ್ಲದೆ ಟಾಪ್ ಗೇರ್ ಸಿನಿಮಾ ಹಾಗೂ ಎರಡು ವೆಬ್ಸೀರಿಸ್ನಲ್ಲೂ ನಟಿಸಿದ್ದರು.
ಕಾಂಗ್ರೆಸ್ ಬಿಡುಗಡೆ ಮಾಡಿರುವ 144 ಅಭ್ಯರ್ಥಿಗಳ ಪಟ್ಟಿಯಲ್ಲಿ ಸಾಮಾನ್ಯ ವರ್ಗದ 47, ಒಬಿಸಿ-39, ಎಸ್ಟಿ-30, ಎಸ್ಸಿ-22, ಮುಸ್ಲಿಂ-1 ಹಾಗೂ 50 ಮಹಿಳಾ ಅಭ್ಯರ್ಥಿಗಳಿದ್ದಾರೆ. ಮತ್ತೊಂದೆಡೆ ಬಿಜೆಪಿ ಈಗಾಗಲೆ 136 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಧ್ಯಪ್ರದೇಶದಲ್ಲಿ ನ. 17ರಂದು ಒಂದೇ ಹಂತದ ಚುನಾವಣೆ ನಡೆಯಲಿದ್ದು, ಡಿ. 3ರಂದು ಫಲಿತಾಂಶ ಪ್ರಕಟವಾಗಲಿದೆ.