

ಚೆನ್ನೈ: 'ಜೈಲರ್' ಚಿತ್ರವಲ್ಲದೆ ರಜನಿಕಾಂತ್ ಇನ್ನೂ ಎರಡು ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇದ್ದೇ ಇತ್ತು. ಈಗ ಅದರಲ್ಲಿ ಒಂದು ಚಿತ್ರ ಭಾನುವಾರ ಬೆಳಿಗ್ಗೆ ಸದ್ದಿಲ್ಲದೆ ಸೆಟ್ಟೇರಿದೆ. ಅದೇ 'ಲಾಲ್ ಸಲಾಂ'. ಹಾಗಂತ ಇದು ರಜನಿಕಾಂತ್ ಅಭಿನಯದ ಪೂರ್ಣಪ್ರಮಾಣದ ಚಿತ್ರ ಎಂದು ಭಾವಿಸಬೇಡಿ. ಈ ಚಿತ್ರದಲ್ಲಿ ರಜನಿಕಾಂತ್ ಅವರದ್ದು ಅತಿಥಿ ಪಾತ್ರವಷ್ಟೇ ಹೌದು.
ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಸಂತೋಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕಥೆ ಏನು, ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಮಾಹಿತಿಗಳು ಸದ್ಯಕ್ಕೆ ಇಲ್ಲ. ಆದರೆ, ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಇದೊಂದು ಗಲಭೆ ಕುರಿತಾದ ಚಿತ್ರ ಎಂದು ಪೋಸ್ಟರ್ ಸೂಕ್ಷ್ಮವಾಗಿ ಹೇಳುತ್ತದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಕ್ರಿಕೆಟ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಸಹ ಸೂಚಿಸುತ್ತಾರೆ.
ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ನಡಿ ಸುಭಾಸ್ಕರನ್ ನಿರ್ಮಾಣ ಮಾಡಿದರೆ, ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಚಿತ್ರ ತೆರೆಗೆ ಬರಲಿದೆ.