ಗೊತ್ತಿಲ್ಲದೆ ಇಬ್ಬರು ಪ್ರೀತಿಸಿದ್ದು ಒಬ್ಬಳನ್ನೆ: ಗೊತ್ತಾಗ್ತಿದ್ದಂತೆ ಸೋದರಸಂಬಂಧಿಗಳಿಬ್ಬರ ದುರಂತ ಸಾವು!

Youth
Published on

ಜೈಪುರ: ಸೋದರಸಂಬಂಧಿಗಳಿಬ್ಬರು ಚಲಿಸುವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ರಾಜಸ್ಥಾನದ ಬಂಡಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಪ್ರೀತಿಯಲ್ಲಿ ಇಬ್ಬರು ಊಹೆ ಮಾಡಿರದ ತಿರುವು ಪಡೆದುಕೊಂಡಿದ್ದೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.

ಮೃತರನ್ನು ದೇವರಾಜ್​ ಗುರ್ಜರ್​ (23) ಮತ್ತು ಮಹೇಂದ್ರ ಗುರ್ಜರ್​ (23) ಎಂದು ಗುರುತಿಸಲಾಗಿದೆ. ಇಬ್ಬರು ಸಹ ಬಂಡಿ ಜಿಲ್ಲೆಯ ದಬ್ಲಾನಾ ಪೊಲೀಸ್​ ಠಾಣಾ ವ್ಯಾಪ್ತಿಯ ಕೇಶವ್​ಪುರ ಗ್ರಾಮದ ನಿವಾಸಿಗಳು. ಇಬ್ಬರ ಸಾವಿಗೆ ಪ್ರೀತಿಯಲ್ಲಾದ ಆಕಸ್ಮಿಕವೇ ಕಾರಣ.

ಘಟನೆಯ ವಿವರಣೆಗೆ ಬರುವುದಾದರೆ, ಸೋದರಸಂಬಂಧಿಗಳು ತಮಗೇ ಗೊತ್ತಿಲ್ಲದಂತೆ ಒಂದೇ ಹುಡುಗಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದೇ ಆತ್ಮಹತ್ಯೆಗೆ ಕಾರಣ. ಇಬ್ಬರು ಸಹ ಆಶಾ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಆ ಹೆಸರನ್ನು ಕೈಮೇಲೂ ಹಚ್ಚೆ ಹಾಕಿಸಿಕೊಂಡಿದ್ದಾರೆ. ಗುಡ್ಲಾ ಠಾಣೆ ಬಳಿಯ ದೆಹಲಿ-ಮುಂಬೈ ರೈಲ್ವೆ ಹಳಿಯಲ್ಲಿ ಬಿದ್ದಿದ್ದ ಅವರ ಮೃತದೇಹಗಳ ಕೈನಲ್ಲಿ ಪತ್ತೆಯಾದ ಹಚ್ಚೆಯೇ ಪ್ರಕರಣಕ್ಕೆ ಪ್ರಮುಖವಾದ ತಿರುವು ನೀಡಿದೆ.

ಇಬ್ಬರು ರೈಲಿನತ್ತ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾರೆ. ಅದರಲ್ಲಿರುವಂತೆ ತಮ್ಮ ಸಾವಿಗೆ ಯಾರು ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ. ಸಾವಿಗೆ ನಾವೇ ಜವಬ್ದಾರಿ ಎಂದಿದ್ದಾರೆ. ನಾವು ಯಾರನ್ನು ದೂಷಿಸುವುದಿಲ್ಲ. ನಮಗೆ ಬದುಕಲು ಇಷ್ಟವಿಲ್ಲ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೀತಿಯ ವಿಚಾರಕ್ಕೆ ಬರುವುದಾದರೆ, ಒಂದು ದಿನ ಇಬ್ಬರ ಒಟ್ಟಿಗೆ ಕುಳಿತು ಮಾತನಾಡುವಾಗ ತಮ್ಮ ಪ್ರೀತಿಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹೀಗೆ ಇಬ್ಬರು ಅವರವರ ಹುಡುಗಿಯ ಪರಿಚಯ ಮಾಡಲು ಮುಂದಾಗಿದ್ದಾರೆ. ಯುವತಿ ವಿಳಾಸ ಸೇರಿದಂತೆ ಎಲ್ಲ ಮಾಹಿತಿಯನ್ನು ಇಬ್ಬರು ಹಂಚಿಕೊಂಡಿದ್ದಾರೆ. ಆದರೆ, ಪ್ರಕರಣಕ್ಕೆ ಯಾರು ಊಹಿಸಿರದ ಟ್ವಿಸ್ಟ್​ ಸಿಕ್ಕಿದ್ದೆ ಇಲ್ಲಿ. ಏಕೆಂದರೆ, ಇಬ್ಬರು ಹೇಳಿದ ಅಷ್ಟೂ ಮಾತುಗಳು ಸಹ ಒಬ್ಬಳ ಬಗ್ಗೆಯೇ. ಅಂದರೆ ಇಬ್ಬರು ಪ್ರೀತಿಸುತ್ತಿದ್ದುದ್ದು ಒಬ್ಬಳನ್ನೆ. ಇದು ಇಬ್ಬರಿಗೆ ತೀವ್ರ ಆಘಾತವಾಯಿತು.

ನಂತರ ಮುಂದೇನು ಮಾಡುವುದು ಎಂದು ಇಬ್ಬರು ಯೋಚಿಸಿದ್ದಾರೆ. ಆದರೆ, ಯಾವುದಕ್ಕೂ ಪರಿಹಾರ ಸಿಗದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಆತುರದ ನಿರ್ಧಾರ ಮಾಡಿದ್ದಾರೆ. ಕೊನೆಗೂ ಹೇಳಿದಂತೆಯೇ ಚಲಿಸುವ ರೈಲಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ತಪ್ಪನ್ನು ಕ್ಷಮಿಸಿ ಎಂದು ಯುವಕರು ಕುಟುಂಬವನ್ನು ಕೇಳಿಕೊಂಡಿದ್ದಾರೆ. ಯುವತಿಗೆ ಸರಿಯಾದ ವರ ಹುಡುಕಿ ಮದುವೆ ಮಾಡಿ ಎಂತಲೂ ವಿಡಿಯೋದಲ್ಲಿ ಹೇಳಿದ್ದಾರೆ.

ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಪಾಲಕರನ್ನು ಕರೆದು ವಿಚಾರಣೆ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net