

ಸೋನಾಕ್ಷಿ ಸಿನ್ಹಾ ಗ್ಲಾಮರಸ್ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಾರೆ, ಪ್ರಯೋಗಾತ್ಮಕ ಚಿತ್ರಗಳಿಗೂ ಸೈ ಎನ್ನುತ್ತಾರೆ. ಇದೀಗ ಅವರು ಮತ್ತೊಂದು ಹೊಸ ಅವತಾರದಲ್ಲಿ ಎದುರಾಗುತ್ತಿದ್ದಾರೆ. ಮೊದಲ ಬಾರಿ ಖಡಕ್ ಖಾಕಿ ತೊಟ್ಟು ರಗಡ್ ಲುಕ್ ಬೀರಿದ್ದಾರೆ. ಆ ಲುಕ್ ಸಿನಿಮಾದ್ದಲ್ಲ, ಬದಲಿಗೆ ಒಟಿಟಿಗಾಗಿ.
ಹೌದು, ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಅಮೆಜಾನ್ ಪ್ರೖೆಂ ವೇದಿಕೆ ಹೊರತರುತ್ತಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ವೆಬ್ಸಿರೀಸ್ನ ಫಸ್ಟ್ ಲುಕ್ ಇದು. ಕ್ರೖೆಂ ಥ್ರಿಲ್ಲರ್ ಹಿನ್ನೆಲೆಯಲ್ಲಿ ಸಾಗುವ ಈ ಸಿರೀಸ್ ಮೂಲಕ ಸೋನಾಕ್ಷಿ ಒಟಿಟಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ರೀಮಾ ಕಾಗ್ತಿ ಮತ್ತು ರುಚಿಕಾ ಒಬೇರಾಯ್ ಈ ವೆಬ್ಸರಣಿಯನ್ನು ನಿರ್ದೇಶನ ಮಾಡಿದ್ದು, ಎಕ್ಸೆಲ್ ಮಿಡಿಯಾ ಎಂಟರ್ಟೈನ್ವೆುಂಟ್ ಬಂಡವಾಳ ಹೂಡುತ್ತಿದೆ. ಸೋನಾಕ್ಷಿ ಜತೆಗೆ ವಿಜಯ್ ವರ್ವ, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದಾರೆ. ಈ ವೆಬ್ಸರಣಿ ಬಿಡುಗಡೆ ಯಾವಾಗ? ಇದರ ಶೀರ್ಷಿಕೆ ಏನು? ಎಂಬ ಹಲವು ಪ್ರಶ್ನೆಗಳು ಸೋನಾಕ್ಷಿ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ, ಸದ್ಯಕ್ಕಂತೂ ಸೋನಾಕ್ಷಿ ಈ ಬಗ್ಗೆ ಸೈಲೆಂಟ್ ಆಗಿದ್ದು, ಸದ್ಯದಲ್ಲೇ ಎಲ್ಲವನ್ನೂ ಬಹಿರಂಗ ಮಾಡುವುದಾಗಿ ಹೇಳಿದ್ದಾರೆ.