More

    ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ ನೀಡದಿರುವುದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ: ರಾಹುಲ್ ಗಾಂಧಿ

    ನವದೆಹಲಿ: ದೇಶದ ರಾಷ್ಟ್ರಪತಿ ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸಂಸತ್ತು ಅಹಂಕಾರದ ಇಟ್ಟಿಗೆಗಳಿಂದ ಕಟ್ಟಿಲ್ಲ. ಸಾಂವಿಧಾನಿಕ ಮೌಲ್ಯಗಳಿಂದ ಸಂಸತ್ ಕೂಡಿದೆ ಎಂದು ಹೇಳಿಕೊಂಡಿದ್ದಾರೆ.

    ರಾಷ್ಟ್ರಪತಿ ಉದ್ಘಾಟಿಸಬೇಕು ಎಂದ ಕಾಂಗ್ರೆಸ್

    ಹೊಸ ಸಂಸತ್ ಭವನದ ಉದ್ಘಾಟನೆ ಕುರಿತು ಅಧಿಕೃತ ಆಹ್ವಾನ ಪತ್ರಿಕೆಯನ್ನು ಲೋಕಸಭಾ ಸಚಿವಾಲಯ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮೇ 28ರಂದು ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

    ಸದ್ಯ ಪ್ರಧಾನಿ ಮೋದಿ ಸಂಸತ್ ಭವನ ಉದ್ಘಾಟಿಸುತ್ತಿರುವುದರ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ಹೊಸ ಪಾರ್ಲಿಮೆಂಟ್ ಕಟ್ಟಡ ಆಡಳಿತ ಪಕ್ಷದ ಹೆಚ್ಚುಗಾರಿಕೆಯಲ್ಲ. ಅದು ಪ್ರಜಾಪ್ರಭುತ್ವದ ಪ್ರತೀಕ. ಹೀಗಾಗಿ ರಾಷ್ಟ್ರಪತಿ, ದೌಪದಿ ಮುರ್ಮು ಅವರು ಈ ಕಟ್ಟಡವನ್ನು ಉದ್ಘಾಟಿಸಬೇಕು. ಪ್ರಧಾನಿ ಉದ್ಘಾಟಿಸುವುದು ಸಾಂವಿಧಾನಿಕ ಹುದ್ದೆಗೆ ಮಾಡುವ ಅವಮಾನ ಎಂದು ಕಾಂಗ್ರೆಸ್ ಟೀಕಿಸಿದೆ.

    ಕಾಂಗ್ರೆಸ್ ಟೀಕೆಗೆ ಬಿಜೆಪಿ ತಿರುಗೇಟು

    ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದಿಪ್ ಸಿಂಗ್ ಪುರಿ, ಕಾಂಗ್ರೆಸ್​ಗೆ ವಿವಾದ ಸೃಷ್ಟಿಸುವುದೆಂದರೆ ಬಹಳ ಇಷ್ಟ. ರಾಷ್ಟ್ರಪತಿ ಮತ್ತು ಪ್ರಧಾನಿ ಇಬ್ಬರೂ ಸಂಸದೀಯ ವ್ಯವಸ್ಥೆಯ ಭಾಗ. ಆದರೆ, ರಾಷ್ಟ್ರಪತಿಗಳು ಸಂಸತ್‌ನ ಯಾವುದೇ ಸದನದ ಸದಸ್ಯರಲ್ಲ. ಪ್ರಧಾನಿ ಸಂಸತ್‌ ಸದಸ್ಯರಾಗಿರುತ್ತಾರೆ. ಹೀಗಾಗಿ ಪ್ರಧಾನಿಯವರಿಂದ ಈ ಕಟ್ಟಡ ಉದ್ಘಾಟನೆ ಆಗುತ್ತಿದೆ ಎಂದು ಟ್ವಿಟ್ ಮಾಡಿದ್ದಾರೆ.

    ಈ ರೀತಿಯ ಕಟ್ಟಡಗಳನ್ನು ಪ್ರಧಾನಿಯೇ ಲೋಕಾರ್ಪಣೆ ಮಾಡಿದ ಉದಾಹರಣಿಗಳು ಈ ಹಿಂದೆಯೂ ಇದೆ. 1975ರಲ್ಲಿ ಸಂಸತ್ ಭವನದ ಅನೆಕ್ಸ್ ಕಟ್ಟಡವನ್ನು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಉದ್ಘಾಟಿಸಿದ್ದರು. 1987ರಲ್ಲಿ ಸಂಸತ್‌ ಭವನ ಗ್ರಂಥಾಲಯಕ್ಕೆ ಪ್ರಧಾನಿ ರಾಜೀವ್‌ ಗಾಂಧಿ ಚಾಲನೆ ನೀಡಿದ್ದರು. ಆಗ ಕಾಂಗ್ರೆಸ್‌ ಸರ್ಕಾರ ಮುಖ್ಯಸ್ಥರು ಈ ಕಾರ್ಯ ಮಾಡಬಹುದು. ಈಗ ನಮ್ಮ ಸರ್ಕಾರದ ಮುಖ್ಯಸ್ಥರು ಉದ್ಘಾಟನೆ ಮಾಡಬಾರದೆ? ಎಂದು ಪ್ರಶ್ನಿಸಿದ್ದಾರೆ.

    ಟಿಎಂಸಿ, ಸಿಪಿಐ, ಟಿಡಿಪಿ ಬಹಿಷ್ಕಾರ

    ಹೊಸ ಸಂಸತ್‌ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿರುವುದಾಗಿ ಟಿಎಂಸಿ, ಟಿಡಿಪಿ ಮತ್ತು ಸಿಪಿಐ ಪಕ್ಷಗಳು ಹೇಳಿವೆ. ಈ ಭವನವನ್ನು ರಾಷ್ಟ್ರಪತಿಗಳಿಂದ ಲೋಕಾರ್ಪಣೆ ಮಾಡಿಸಬೇಕು ಎಂಬ ವಿರೋಧ ಪಕ್ಷಗಳು ಒತ್ತಾಯವನ್ನು ಸರ್ಕಾರ ಕಡೆಗಣಿಸಿದೆ. ಹೀಗಾಗಿ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts