ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷಗೆ ಒಳಗಾದ ಒಟ್ಟು 214 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದ ಬೆನ್ನಲ್ಲೇ, ಪರಪ್ಪನ ಅಗ್ರಹಾರ ಜೈಲಿನಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ರಾಜ್ಯ ಸರ್ಕಾರ 214 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶ ನೀಡಿತ್ತು. ಇದೀಗ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ 81 ಕೈದಿಗಳು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರಬಂದಿದ್ದಾರೆ.
ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆ ಕುರಿತಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದು, ಒಟ್ಟು 234 ಕೈದಿಗಳ ಬಿಡುಗಡೆಗೆ ಶಿಫಾರಸು ಮಾಡಲಾಗಿತ್ತು. ಇವುಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಹಾಗೂ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 20 ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಪ್ರಕರಣಗಳನ್ನು ತಿರಸ್ಕರಿಸಲಾಗಿದೆ.