ನಟ ಧನುಷ್​-ಐಶ್ವರ್ಯಾ ಡಿವೋರ್ಸ್​ಗೆ ಕಾರಣವೇನು? ಸ್ಟಾರ್​ ದಂಪತಿ ಕೊಟ್ಟ ಸ್ಪಷ್ಟನೆ ಹೀಗಿದೆ...

Dhanush
Published on

ಚೆನ್ನೈ: ಕಾಲಿವುಡ್​ನ ಸ್ಟಾರ್​ ದಂಪತಿಗಳೆಂದೇ ಖ್ಯಾತರಾಗಿದ್ದ ನಟ ಧನುಷ್​ ಮತ್ತು ಸೂಪರ್​ಸ್ಟಾರ್​ ರಜಿನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ ನಿನ್ನೆ (ಜ.17) ಗುಡ್​ ಬೈ ಹೇಳಿದ್ದಾರೆ. ಇದು ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಶಾಕಿಂಗ್​ ಸಂಗತಿಯಾಗಿದೆ. ತುಂಬಾ ಅನೋನ್ಯವಾಗಿದ್ದ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನಿರಬಹುದೆಂಬ ಪ್ರಶ್ನೆಯೇ ಈಗ ಎಲ್ಲೆಡೆ ಕೇಳಿಬರುತ್ತಿದೆ.

ಐಶ್ವರ್ಯಾ ಮತ್ತು ಧನುಷ್​ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ಸ್ಟಾರ್​ ಜೋಡಿ. ಆದರೆ, ಇಬ್ಬರು ಡಿವೋರ್ಸ್​ ಆಗುವ ಮೂಲಕ ಪ್ರೀತಿಯ ಮೇಲಿನ ನಂಬಿಕೆಯನ್ನೇ ಹುಸಿ ಮಾಡಿದಂತಾಗಿದೆ. ಇಬ್ಬರು ಕೂಡ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಡಿವೋರ್ಸ್​ ವಿಚಾರವನ್ನು ಖಚಿತಪಡಿಸಿದ್ದಾರೆ.

ಡಿವೋರ್ಸ್​ಗೆ ಕಾರಣವೇನು?

ಧನುಷ್​ ಮತ್ತು ಐಶ್ವರ್ಯಾ ತಮ್ಮ ಹೇಳಿಕೆಯಲ್ಲಿಯೇ ಇಬ್ಬರ ನಡುವೆ ಯಾವುದೇ ದ್ವೇಷದ ಭಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾಸ್ತವವಾಗಿ ದಂಪತಿಗಳು ತಮ್ಮ ಜೀವನದಲ್ಲಿ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸಲು ಮತ್ತು ವ್ಯಕ್ತಿಗಳಾಗಿ ಬೆಳೆಯಲು ಬಯಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದಾಗಿ ದೃಢಪಡಿಸಿದ್ದಾರೆ. ಆದರೆ, ಇಬ್ಬರ ನಡುವೆ ಏನಾದರೂ ಅಸಮಾಧಾನ ಇದೆಯಾ? ಎಂಬುದರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಆದರೆ, ಇಬ್ಬರ ಡಿವೋರ್ಸ್​ಗೆ ವೈಯಕ್ತಿಕ ಮಾತ್ರವಲ್ಲದೇ ಸಿನಿ ಜಗತ್ತು ಕೂಡ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಟ್ವೀಟ್​ ಮೂಲಕ ಡಿವೋರ್ಸ್​ ಖಚಿತಪಡಿಸಿರುವ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದಾರೆ. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ.

ಐಶ್ವರ್ಯಾ ಮತ್ತು ಧನುಷ್​ 2004ರ ನವೆಂಬರ್​ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್​ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net