

ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ಧನುಷ್ ಅವರು 18 ವರ್ಷದ ವೈವಾಹಿಕ ಜೀವನಕ್ಕೆ ದಿಢೀರ್ ಗುಡ್ ಬೈ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸೂಪರ್ಸ್ಟಾರ್ ರಜಿನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾರನ್ನು ವರಿಸಿದ್ದ ಧನುಷ್, ಇದೀಗ ಟ್ವಿಟರ್ ಮೂಲಕ ವಿಚ್ಛೇದನಾ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ಜನರಲ್ಲಿ ಧನುಷ್ ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದಾರೆ. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ.
ಐಶ್ವರ್ಯಾ ಮತ್ತು ಧನುಷ್ 2004ರ ನವೆಂಬರ್ 18ರಂದು ಮದುವೆಯಾದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್)