More

    ಮೌನಕ್ಕೆ ಜಾರಿದ ಮಾಯಾ: ಪಕ್ಷದಲ್ಲಿ ಕಾಣದ ಉತ್ಸಾಹ; ಬಿಜೆಪಿ-ಎಸ್​ಪಿ ನೇರ ಹಣಾಹಣಿ

    | ರಾಘವ ಶರ್ಮ ನಿಡ್ಲೆ ನವದೆಹಲಿ

    ಉತ್ತರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದರೂ ಮಾಜಿ ಸಿಎಂ, ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ 66 ವರ್ಷದ ಮಾಯಾವತಿ ಈ ಪರಿಯಲ್ಲಿ ರಾಜಕೀಯ ನಿರಾಸಕ್ತಿ ಹೊಂದಲು ಕಾರಣ ಏನಿರಬಹುದು? ದೇಶದ ರಾಜಕೀಯಾಸಕ್ತರಿಗೆಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಿದು.

    2007ರಲ್ಲಿ ಷೇರುಗೂಳಿಯಂತೆ ಏರಿದ್ದ ಮಾಯಾವತಿಯವರ ರಾಜಕೀಯ ಗ್ರಾಫ್ 2012ರಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆಯೇ ಪಾತಾಳಕ್ಕಿಳಿದುಬಿಟ್ಟಿತು. ಸಾಂಪ್ರದಾಯಿಕ ಮತಬ್ಯಾಂಕ್​ಗಳು ಅವರಿಂದ ದೂರವಾಗಿವೆ. 2017ರಲ್ಲಿ ಬಿಎಸ್​ಪಿಯಿಂದ ಗೆದ್ದಿದ್ದ 19 ಶಾಸಕರಲ್ಲಿ ಮೂವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಮಾಯಾವತಿ ಸಹವಾಸ ಸಾಕು ಎಂದು ಹೊರ ನಡೆದು, ಎಸ್​ಪಿ, ಬಿಜೆಪಿಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

    70ರ ದಶಕದಲ್ಲಿ ದಿಲ್ಲಿಯ ಮಯೂರ್ ವಿಹಾರ್ ಪಕ್ಕದ ಕೊಳೆಗೇರಿಯಂತಿದ್ದ ಪಟ್ಪರ್​ಗಂಜ್ ನಿವಾಸಿಯಾಗಿದ್ದ ಮಾಯಾವತಿ, ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದರು. ದಲಿತ ಜಾಟವ ಸಮಾಜದ ಮಾಯಾವತಿ, ದಿಲ್ಲಿ ವಿಶ್ವವಿದ್ಯಾಲಯದ ಫೇಕಲ್ಟಿ ಆಫ್ ಲಾ ವಿಭಾಗದಿಂದ ಎಲ್​ಎಲ್​ಬಿ ಪದವಿ ಪಡೆದಿದ್ದಲ್ಲದೆ, 1976ರಲ್ಲಿ ಮೀರಠ್ ಯುನಿವರ್ಸಿಟಿಯಿಂದ ಬಿ.ಎಡ್. ಉನ್ನತ ಪದವಿ ಪೂರ್ಣಗೊಳಿಸಿದ್ದರು. ನಂತರ, ದಿಲ್ಲಿಯ ಇಂದರ್​ಪುರಿಯ ಜೆಜೆ ಕೊಳಗೇರಿ ಕಾಲನಿಯಲ್ಲಿ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಾ, ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ದಲಿತರ ಮೇಲಿನ ಶೋಷಣೆ, ಅನ್ಯಾಯದಿಂದ ಬೇಸತ್ತಿದ್ದ ಮಯಾವತಿ 1977ರಲ್ಲಿ ಬಿಎಸ್​ಪಿ ಸಂಸ್ಥಾಪಕ ಕಾಂಶೀರಾಮ್ ಜತೆ ಕೈಜೋಡಿಸಿದರು. ಉತ್ತರಪ್ರದೇಶದಲ್ಲಿ ಸಂಘಟನೆ ವಿಸ್ತರಣೆಗೆ ಮುಂದಾದ ಅವರು 1984ರಲ್ಲಿ ಬಹುಜನ ಸಮಾಜಪಾರ್ಟಿ ಸ್ಥಾಪಿಸಿದ್ದರು. ಇದಾದ ಕೆಲವೇ ವರ್ಷಗಳಲ್ಲಿ ಮಾಯಾವತಿ ಲಖನೌದ ಕಾಳಿದಾಸ ಮಾರ್ಗದಲ್ಲಿದ್ದ ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ವಿರಾಜಮಾನದರು. ನಂತರ ನಡೆದಿದ್ದೆಲ್ಲವೂ ಇತಿಹಾಸ.

    ನಾಲ್ಕು ಬಾರಿ ಸಿಎಂ ಸ್ಥಾನಕ್ಕೇರಿದ್ದ ಮಾಯಾವತಿ, ಗೂಂಡಾ ರಾಜಕಾರಣಕ್ಕೆ ಪ್ರೇರೇಪಣೆ ನೀಡುತ್ತಿದ್ದ ಸಮಾಜವಾದಿಗಳಿಂದ ಹೈರಾಣಾಗಿದ್ದ ಉತ್ತರ ಪ್ರದೇಶದ ನಾಗರಿಕರಿಗೆ, ಕಾನೂನು ಸುವ್ಯವಸ್ಥೆ ಸರಿ ದಾರಿಗೆ ತಂದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದರು. ಆದರೆ, ದಲಿತರ ಹೆಸರಲ್ಲಿ ಅಧಿಕಾರಕ್ಕೇರಿ ಅವರ ಕಲ್ಯಾಣಕ್ಕಾಗಿ ಏನು ಮಾಡಿದರು ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. 2014ರಿಂದ ಹಿಡಿದು ಇಲ್ಲಿಯವರೆಗೆ ಬಹುಪಾಲು ಬಿಎಸ್​ಪಿ ಮತಬ್ಯಾಂಕ್ (ಬಹುಪಾಲು ಜಾಟವರನ್ನು ಹೊರತುಪಡಿಸಿ) ಬಿಜೆಪಿ ಕಡೆ ಒಲವು ತೋರಲು ಇದು ಕೂಡ ಪ್ರಮುಖ ಕಾರಣ. ದಿಲ್ಲಿಯಲ್ಲಿ ಮೂರ್ನಾಲ್ಕು ಬಂಗಲೆ, ಪಕ್ಷದ ಬೃಹತ್ ಕಚೇರಿಯೂ ಇದೆ. ಸೌತ್ ಅವೆನ್ಯೂ ಬಳಿ ಈಗಲೂ ಸರ್ಕಾರಿ ಬಂಗಲೆಯಿದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಯಾವ ಕಾರ್ಯಕರ್ತ ನರಪಿಳ್ಳೆಯೂ ಇತ್ತ ಕಂಡಿಲ್ಲ. ಬಿಜೆಪಿ ಪ್ರವರ್ಧಮಾನಕ್ಕೆ ಬಂದ ಮೇಲೆ ಮಾಯಾವತಿ ಮಾಯವಾಗಿದ್ದಾರೆ.

    ಏನಿರಬಹುದು ಕಾರಣ?: ಹಾಗಾದರೆ ರಾಜ್ಯ ರಾಜಕಾರಣದಲ್ಲಿ ತಮ್ಮ ಪಕ್ಷ ಅಪ್ರಸ್ತುತ ಎಂದು ಮಾಯಾವತಿಗೆ ಅನಿಸಿಬಿಟ್ಟಿದೆಯೇ? ಅಕ್ರಮ ಹಣ ಸಂಪಾದನೆ ಕೇಸ್​ನಲ್ಲಿ ತಮ್ಮ ಸೋದರ ವಿವಿಧ ಹಂತಗಳಲ್ಲಿ ವಿಚಾರಣೆ ಎದುರಿಸುತ್ತಿರುವುದು ರಾಜಕೀಯದಲ್ಲಿ ಮೌನವಾಗಿರುವಂತೆ ಮಾಡಿದೆಯೇ? ಅಥವಾ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ತಾನು ಕಿಂಗ್​ವೆುೕಕರ್ ಆಗಬಲ್ಲೆ ಎಂದುಕೊಂಡಿದ್ದಾರಾ? ವಾಸ್ತವದಲ್ಲಿ, ಪಕ್ಷದ ಭವಿಷ್ಯದ ದೃಷ್ಟಿಯಿಂದ ಎರಡನೇ ತಲೆಮಾರಿನ ನಾಯಕರನ್ನು (ಕುಟುಂಬದಾಚೆಗಿನ) ಬೆಳೆಸಿಯೇ ಇಲ್ಲ. ಸೋದರಳಿಯ ಆಕಾಶ್ ಆನಂದ್​ಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ. ಬ್ರಾಹ್ಮಣ ಸಮುದಾಯದ ಸತೀಶ್​ಚಂದ್ರ ಮಿಶ್ರಾ ಬಿಟ್ಟರೆ ಇತರರು ಬೆಳಕಿಗೆ ಬಂದದ್ದು ಕಡಿಮೆ. ಈ ಚುನಾವಣೆಯಲ್ಲೂ ಆಕಾಶ್ ಆನಂದ್ ಮತ್ತು ಸತೀಶ್​ಚಂದ್ರ ಮಿಶ್ರಾ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಅಂದು ಕಾಂಶಿರಾಮ್ ಯಾವ ಘನ ಉದ್ದೇಶವಿಟ್ಟುಕೊಂಡು ಪಕ್ಷ ಸ್ಥಾಪನೆ ಮಾಡಿದ್ದರೂ, ಅದು ಈಡೇರುತ್ತಿಲ್ಲ. ಈ ಪಕ್ಷ 2 ಕುಟುಂಬಗಳಿಗೆ ಸೀಮಿತವಾಗಿದೆ ಎಂಬ ಅಸಮಾಧಾನ ಮುಖಂಡರು, ಕಾರ್ಯಕರ್ತ ವರ್ಗದಲ್ಲಿ ಆಳವಾಗಿ ಬೇರೂರಿದ್ದರಿಂದಲೇ ಬಿಎಸ್​ಪಿ ವರ್ಷದಿಂದ ವರ್ಷಕ್ಕೆ ಸಾಮೂಹಿಕ ರಾಜಕೀಯ ವಲಸೆಗೆ ಸಾಕ್ಷಿಯಾಗುತ್ತಿದೆ.

    ಲಖನೌಗೆ ಸೀಮಿತ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಸಮಾಜವಾದಿ, ಆರ್​ಎಲ್​ಡಿ, ಸಣ್ಣಪುಟ್ಟ ಪಕ್ಷಗಳ ನಾಯಕರೂ ಹತ್ತು ಹಲವು ರಾಜಕೀಯ ಸಭೆ, ಸಮಾವೇಶಗಳನ್ನು ನಡೆಸುತ್ತಾ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಮಾಯಾವತಿ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದೂ ಘೊಷಿಸಿದ್ದಾರೆ. ಕೆಲ ಪ್ರತಿಕಾ ಹೇಳಿಕೆ ಮತ್ತು ಟ್ವೀಟ್ ಮಾಡುವುದನ್ನು ಬಿಟ್ಟರೆ ತಮ್ಮ ಲಖನೌ ನಿವಾಸಕ್ಕೆ ಅವರು ಸೀಮಿತವಾಗಿಬಿಟ್ಟಿದ್ದಾರೆ. ಇತರ ನಾಯಕರಲ್ಲಿ ಕಾಣುವ ಉತ್ಸಾಹ, ಹುರುಪು ಬಿಎಸ್​ಪಿ ನಾಯಕಿಯಲ್ಲಿ ಕಾಣುತ್ತಿಲ್ಲ. ಇದೇ ಕಾರಣಕ್ಕೆ ರಾಜ್ಯದ ಬಹುಪಾಲು ಕ್ಷೇತ್ರಗಳು ಬಿಜೆಪಿ ವರ್ಸಸ್ ಸಮಾಜವಾದಿ ಪಾರ್ಟಿ ನಡುವಿನ ರಣಕಣಗಳಾಗಿ ಮಾರ್ಪಟ್ಟಿವೆ.

    ಹಿಸ್ಟರಿ ರಿಪೀಟ್ಸ್​.. ಇದು ಚರಿತ್ರೆ ಸೃಷ್ಟಿಸೋ ಅವತಾರ: ಭಕ್ತರ ಆವೇಶಕ್ಕೆ ಪೊಲೀಸರ ಸರ್ಪಗಾವಲೂ ತತ್ತರ..

    ಪ್ರಿಯಾಂಕ ಉಪೇಂದ್ರ ‘ಉಗ್ರಾವತಾರ’; ‘ಅಯ್ಯೋ ನನ್ನ ದೇವರೇ..’ ಅಂದ್ರು ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಿಸ್ಟರ್ಸ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts