

ಹೈದರಾಬಾದ್: ಉಪ್ಪೇನಾ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಬೆಂಗಳೂರು ಬ್ಯೂಟಿ ಕೃತಿ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಚರ್ಚೆಯ ವಿಷಯವಾಗಿದ್ದರು. ಅದಕ್ಕೆ ಕಾರಣ ಮೊದಲ ಚಿತ್ರದಲ್ಲೇ ಕೃತಿ ಶೆಟ್ಟಿ ನಟನೆಯ ಮೂಲಕ ಮೋಡಿ ಮಾಡಿದ್ದರು. ಇದೀಗ ನಾನಿ ಮತ್ತು ನಾಗಚೈತನ್ಯ ಸೇರಿದಂತೆ ಪ್ರಮುಖ ನಟರ ದೊಡ್ಡ ಚಿತ್ರಗಳಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ. ಪರದೆಯ ಮೇಲೆ ರೊಮ್ಯಾನ್ಸ್ ಹಾಗೂ ಅರೆಬೆತ್ತಲೆಯಲ್ಲಿ ಕಾಣಿಸಿಕೊಳ್ಳಲು ನಾನೇನು ಆಟದ ವಸ್ತುವಲ್ಲ ಎಂದು ಹಿಂದೊಮ್ಮೆ ಸ್ಪಷ್ಟಪಡಿಸಿದ್ದರು.
ಆದರೆ, ಇಂದು ಬಿಡುಗಡೆಯಾಗಿರುವ ನಾನಿ ಅಭಿನಯದ "ಸ್ಯಾಮ್ ಸಿಂಘ ರಾಯ್" ಚಿತ್ರದ ಟೀಸರ್ನಲ್ಲಿ ಕೃತಿ ಶೆಟ್ಟಿ ತಮ್ಮ ಹೇಳಿಕೆಗೆ ತದ್ವಿರುದ್ಧವಾಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳದಿದ್ದರೂ ನಾನಿಯ ಜತೆ ಲಿಪ್ಲಾಕ್ ಮಾಡಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ.
ಉಪ್ಪೇನಾ ಬ್ಯೂಟಿ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರಾ ಎಂದು ಅನೇಕರು ಹುಬ್ಬೇರಿಸಿದ್ದಾರೆ. ಸಮಂತಾ, ಕಾಜಲ್ ಅಗರವಾಲ್, ತ್ರಿಶಾ ಹಾಗೂ ಇನ್ನು ಅನೇಕ ನಟಿಯರು ತಮ್ಮ ಸಿನಿಮಾ ಜರ್ನಿಯ ಆರಂಭದಲ್ಲೇ ಇಂತಹ ದೃಶ್ಯಗಳಲ್ಲಿ ನಟಿಸಿದ್ದರು. ಇದೀಗ ಅದೇ ಹಾದಿಯನ್ನು ಕೃತಿ ಶೆಟ್ಟಿ ಅನುಸರಿಸುತ್ತಿದ್ದಾರೆ. ಗ್ಲಾಮರ್ ಇಲ್ಲದೆ ಚಿತ್ರರಂಗದಲ್ಲಿ ಉಳಿಯುವುದು ಕಷ್ಟ ಎಂದು ತಿಳಿದು ಕೃತಿ ತಮ್ಮ ಮನಸ್ಸು ಬದಲಿಸಿರಬಹದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಬಿಡುಗಡೆಗೆ ಸಿದ್ಧವಾಗಿರುವ ನಟ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಂಗಾರರಾಜು ಸಿನಿಮಾದಲ್ಲಿ ಕೃತಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಗಚೈತನ್ಯಗೆ ಕೃತಿ ಜೋಡಿಯಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಕಾಣಲಿದೆ. ಒಂದು ತಿಂಗಳ ಅಂತರದಲ್ಲಿ ಕೃತಿ ಅವರ ಎರಡು ದೊಡ್ಡ ಚಿತ್ರಗಳು ತೆರೆಗೆ ಅಪ್ಪಳಿಸಲಿವೆ. ಆದರೆ, ತಮ್ಮ ಕಿಸ್ಸಿಂಗ್ ದೃಶ್ಯದ ಮೂಲಕ ಕೃತಿ ಟಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. (ಏಜೆನ್ಸೀಸ್)