More

    ಮಾಡೆಲ್​ಗಳಿಬ್ಬರ ದುರಂತ ಸಾವು: ಪಾರ್ಟಿ ನಡೆದ ಹೋಟೆಲ್​ ಮಾಲೀಕನ ದುಷ್ಕೃತ್ಯ ಬಿಚ್ಚಿಟ್ಟ ಸಿಬ್ಬಂದಿ!

    ಕೊಚ್ಚಿ: ಕೇರಳದ ಮಾಡೆಲ್​ಗಳಿಬ್ಬರ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಪೊಲೀಸರು ತಾರ್ಕಿಕ ಅಂತ್ಯ ಹಾಡಿದರೂ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೊದಲಿಂದಲೂ ಈ ಪ್ರಕರಣದ ಮೇಲೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಮಾಡೆಲ್​ಗಳು ಪಾಲ್ಗೊಂಡಿದ್ದ ಡಿಜಿ ಪಾರ್ಟಿ ನಡೆದ ಹೋಟೆಲ್​ ಮಾಲೀಕ ಹಾಗೂ ಅಪಘಾತಕ್ಕೀಡಾದ ಕಾರನ್ನು ಚೇಸ್​ ಮಾಡಿದ್ದ ಆಡಿ ಕಾರು, ಪ್ರಕರಣವನ್ನು ನಿಗೂಢತೆಗೆ ದೂಡಿತ್ತು. ಆದರೆ, ಇದು ಕೊಲೆಯಲ್ಲ, ಮದ್ಯದ ಅಮಲಿನಲ್ಲಿ ನಡೆದ ದುರ್ಘಟನೆ ಎಂದು ನಿಗೂಢತೆಗೆ ತೆರೆ ಎಳೆಯಲು ಪೊಲೀಸರು ಪ್ರಯತ್ನಿಸಿದರೂ, ಅಪಘಾತಕ್ಕೀಡಾದ ಕಾರು ಚಾಲಕನ ಹೇಳಿಕೆ ಹಾಗೂ ಹೋಟೆಲ್​ ಮಾಲೀಕನ ನಿಗೂಢ ನಡೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿತ್ತು.

    ಇದೀಗ ಪ್ರಕರಣದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ. ಅಕ್ಟೋಬರ್​ 31 ಮತ್ತು ನವೆಂಬರ್​ 1ರ ಮಧ್ಯರಾತ್ರಿ ಫೋರ್ಟ್​ ಕೊಚ್ಚಿಯಲ್ಲಿರುವ ಹೋಟೆಲ್​ ನಂಬರ್​ 18ರಲ್ಲಿ ನಡೆದ ಡಿಜೆ ಪಾರ್ಟಿಗೆ ಸಂಬಂಧಿಸಿದ ಸಿಸಿಟಿವಿ ಡಿವಿಆರ್​ ಅನ್ನು ನಾಶ ಮಾಡಿ, ಕೆರೆಯೊಳಗೆ ಎಸೆದಿದ್ದಾರೆ ಎಂದು ಬುಧವಾರ ನಡೆದ ಪೊಲೀಸ್​ ವಿಚಾರಣೆ ವೇಳೆ ಹೋಟೆಲ್​ನ ಸಿಬ್ಬಂದಿ ಹೇಳಿದ್ದಾರೆ.

    ಹೋಟೆಲ್​ ಸಿಬ್ಬಂದಿ ಹೇಳಿಕೆ ಆಧಾರದ ಮೇಲೆ ಪಲರಿವಟ್ಟಮ್​ ಪೊಲೀಸರು ಹೋಟೆಲ್​ ಮಾಲೀಕ ರಾಯ್​ ವಯಲತ್​ ಮತ್ತು ಐವರು ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ಬಂಧಿತ ಸಿಬ್ಬಂದಿಗಳನ್ನು ಕೆ.ಕೆ. ಅನಿಲ್​, ವಿಲ್ಕನ್​ ರೆಯ್ನಾಲ್ಡ್​, ಎಂ.ಬಿ. ಮೆಲ್ವಿನ್​, ಜಿ.ಎ. ಸೈಜುಲಾಲ್​ ಮತ್ತು ವಿಷ್ಣು ಕುಮಾರ್​ ಎಂದು ಗುರುತಿಸಲಾಗಿದೆ.

    ಸಾಕ್ಷ್ಯಾನಾಶ ಮಾಡಿದ ಆರೋಪದ ಮೇಲೆ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೂ ಮುನ್ನ ಮಾತನಾಡಿದ್ದ ಮೃತ ಮಾಡೆಲ್​ ಅನ್ಸಿ ಕಬೀರ್​ ಕುಟುಂಬ ಹೋಟೆಲ್​ ಮಾಲೀಕ ರಾಯ್​ ವಿರುದ್ಧ ಪೊಲೀಸರು ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಆದಾಗ್ಯೂ ಪೊಲೀಸರ ತನಿಖೆಯ ಮೇಲೆ ಭರವಸೆ ವ್ಯಕ್ತಪಡಿಸಿದ್ದರು.

    ಮೊದ ಮೊದಲು ಡಿಜೆ ಪಾರ್ಟಿ ನಡೆದ ಹಾಲ್​ಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ರಾಯ್​ ಪೊಲೀಸರಿಗೆ ಸಲ್ಲಿಸಿದ್ದ. ಆದರೆ, ಡಿಜೆ ಪಾರ್ಟಿಯ ದೃಶ್ಯಗಳು ಇರಲಿಲ್ಲ. ಇದಾದ ಬಳಿಕ ಪೊಲೀಸರು ಹೋಟೆಲ್​ ಮೇಲೆ ದಾಳಿ ಮಾಡಿದರು. ಆದರೆ, ಸಿಸಿಟಿವಿ ಡಿವಿಆರ್​ ಪತ್ತೆ ಆಗಿರಲಿಲ್ಲ. ಇದೀಗ ಹೋಟೆಲ್​ ಸಿಬ್ಬಂದಿಯ ಹೇಳಿಕೆ ಪ್ರಕಾರ ರಾಯ್​, ಡಿವಿಆರ್​ ಅನ್ನು ನಾಶಪಡಿಸಿ ಕೆರೆಯೊಂದರ ಒಳಗೆ ಎಸೆದಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಹಾರ್ಡ್​ ಡಿಸ್ಕ್​ ಪತ್ತೆ ಹಚ್ಚಲು ಸಿಬ್ಬಂದಿಯನ್ನು ಕೆರೆಯ ಸಮೀಪ ಕರೆದೊಯ್ಯಲು ಪೊಲೀಸರು ಮುಂದಾಗಿದ್ದಾರೆ.

    ಘಟನೆ ಹಿನ್ನೆಲೆ ಏನು?
    ನವೆಂಬರ್​ 1ರಂದು ಫೋರ್ಟ್​ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಹಿಂದಿರುಗುವಾಗ ಕೇರಳದ ವ್ಯಟ್ಟಿಲ-ಪಲರಿವಟ್ಟಮ್​ ರಾಷ್ಟ್ರೀಯ ಹೆದ್ದಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಭರವಸೆಯ ಮಾಡೆಲ್​ಗಳು ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ 2019ರ ಮಿಸ್​ ಕೇರಳ ವಿಜೇತೆ ಅಟ್ಟಿಂಗಲ್​ ಮೂಲದ ಅನ್ಸಿ ಕಬೀರ್​ (25), ತ್ರಿಸ್ಸೂರ್​ ಮೂಲದ ರನ್ನರ್​ ಅಪ್​ ಅಂಜನಾ ಶಾಜನ್​ (24) ಮತ್ತು ಕೆ.ಎ. ಮಹಮ್ಮದ್​ ಆಶಿಕ್​ (25) ದಾರುಣವಾಗಿ ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್​ ರೆಹಮಾನ್​ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

    ಇನ್ನು ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್​ ನಂಬರ್​ 18 ಮಾಲೀಕ ರಾಯ್​ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್​ರನ್ನು ಸಂಪರ್ಕಿಸಿದ್ದಾರೆ. ರಾಯ್​ ಮತ್ತು ಸೈಜು ಸ್ನೇಹಿತರು ಎಂದು ತಿಳಿದುಬಂದಿದೆ. ಅಪಘಾತದ ಬೆನ್ನಲ್ಲೇ ಸೈಜು, ರಾಯ್​ ಮತ್ತು ಹೋಟೆಲ್​ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ.

    ಆದರೆ, ಸೈಜು ಹೇಳಿರುವ ಪ್ರಕಾರ ಹೋಟೆಲ್​ನಿಂದ ಹೊರಟ ಮಾಡೆಲ್​ಗಳು ಮತ್ತು ಕಾರಿನ ಚಾಲಕ ಅಬ್ದುಲ್​ ರೆಹಮಾನ್​ ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲು ಮತ್ತು ಚಾಲನೆ ಮಾಡದಂತೆ ಹೇಳಲು ಹಿಂಬಾಲಿಸಿದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ಒಪ್ಪಲು ಪೊಲೀಸರು ತಯಾರಿಲ್ಲ.

    ಅಪಘಾತ ಸಂಭವಿಸಿದ ನಂತರ ವ್ಯಕ್ತಿಯೊಬ್ಬ ಆಡಿ ಕಾರಿನಿಂದ ಇಳಿದು ಪರಿಸ್ಥಿತಿಯನ್ನು ಅವಲೋಕಿಸಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಇದಲ್ಲದೆ, ಅವರ ಸ್ನೇಹಿತರು ಬೇರೆ ವಾಹನಗಳಲ್ಲಿ ಬಂದಿದ್ದಾರೆ ಎಂದು ಶಂಕಿಸಲಾಗಿದೆ. ಅಪಘಾತ ಘಟನಾ ಸ್ಥಳದಲ್ಲಿ ನಿಗಾ ವಹಿಸಿ ಹಿಂತಿರುಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆಡಿ ಕಾರಿನಲ್ಲಿದ್ದವರು ಕೂಡ ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿರುವುದು ಪೊಲೀಸರು ಮತ್ತೆ ಪ್ರಕರಣದ ಮೇಲೆ ಅನುಮಾನ ಮೂಡಿದ್ದು, ಪ್ರಕರಣ ಇನ್ನುಷ್ಟು ನಿಗೂಢವಾಗುತ್ತಿದೆ. ಸದ್ಯ ತನಿಖೆ ಮುಂದುವರಿದಿದ್ದು, ಪ್ರಕರಣ ಯಾವು ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಮಾಡೆಲ್​ಗಳಿಬ್ಬರ ದುರ್ಮರಣ: ಪಾರ್ಟಿ ನಡೆದ ಹೋಟೆಲ್​ ಮಾಲೀಕ ಮಾಡಿದ ಈ ಕೃತ್ಯದಿಂದ ಸಂಶಯ ದುಪ್ಪಟ್ಟು!

    ಮಾಡೆಲ್​ಗಳಿಬ್ಬರ ದುರ್ಮರಣ: ನಿಗೂಢ ಸಾವಿಗೆ ಕೊನೆಗೂ ಕಾರಣ ಪತ್ತೆಹಚ್ಚಿದ ಪೊಲೀಸರು!

    ಮಾಡೆಲ್​ಗಳಿಬ್ಬರ ದುರ್ಮರಣ: ಆಡಿ ಕಾರು, ಹೋಟೆಲ್​ ಮಾಲೀಕ… ಪೊಲೀಸರಿಗೆ ಸಿಕ್ತು ಸ್ಫೋಟಕ ಸುಳಿವು

    ಮಾಡೆಲ್​ಗಳಿಬ್ಬರ ದುರ್ಮರಣ: ರಹಸ್ಯ ಮಾಹಿತಿ ಇರೋ ಸಿಸಿಟಿವಿ ಡಿವಿಆರ್​ನೊಂದಿಗೆ​ ಹೋಟೆಲ್​ ಮಾಲೀಕ ನಾಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts