More

    ಮಾಡೆಲ್​ಗಳಿಬ್ಬರ ದುರ್ಮರಣ: ನಿಗೂಢ ಸಾವಿಗೆ ಕೊನೆಗೂ ಕಾರಣ ಪತ್ತೆಹಚ್ಚಿದ ಪೊಲೀಸರು!

    ಕೊಚ್ಚಿ: ಕೇರಳದ ಮಾಡೆಲ್​ಗಳಿಬ್ಬರ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಮಾಡೆಲ್​ಗಳು ಪಾಲ್ಗೊಂಡಿದ್ದ ಡಿಜಿ ಪಾರ್ಟಿ ನಡೆದ ಹೋಟೆಲ್​ ಮಾಲೀಕ ಹಾಗೂ ಅಪಘಾತಕ್ಕೀಡಾದ ಕಾರನ್ನು ಚೇಸ್​ ಮಾಡಿದ್ದ ಆಡಿ ಕಾರು ಪ್ರಕರಣವನ್ನು ನಿಗೂಢತೆಗೆ ದೂಡಿತ್ತು. ಇದೀಗ ಪ್ರಕರಣಕ್ಕೆ ಅಂತ್ಯ ಆಡಿರುವ ಪೊಲೀಸರು ಇದು ಕೊಲೆಯಲ್ಲ, ಮದ್ಯದ ಅಮಲಿನಲ್ಲಿ ನಡೆದ ದುರ್ಘಟನೆ ಎಂದು ನಿಗೂಢತೆಗೆ ತೆರೆ ಎಳೆದಿದ್ದಾರೆ.

    ನವೆಂಬರ್​ 1ರಂದು ಕೇರಳದ ವ್ಯಟ್ಟಿಲ-ಪಲರಿವಟ್ಟಮ್​ ರಾಷ್ಟ್ರೀಯ ಹೆದ್ದಾರಿಯ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಭರವಸೆಯ ಮಾಡೆಲ್​ಗಳು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ 2019ರ ಮಿಸ್​ ಕೇರಳ ವಿಜೇತೆ ಅಟ್ಟಿಂಗಲ್​ ಮೂಲದ ಅನ್ಸಿ ಕಬೀರ್​ (25), ತ್ರಿಸ್ಸೂರ್​ ಮೂಲಕ ರನ್ನರ್​ ಅಪ್​ ಅಂಜನಾ ಶಾಜನ್​ (24) ಮತ್ತು ಕೆ.ಎ. ಮಹಮ್ಮದ್​ ಆಶಿಕ್​ (25) ದಾರುಣವಾಗಿ ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್​ ರೆಹಮಾನ್​ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿದೆ. ಚಾಲಕನ ಅಜಾರುಕತೆಯಿಂದ ಮತ್ತು ಮದ್ಯದ ಅಮಲಿನಲ್ಲಿ ಸಂಭವಿಸಿರುವ ದುರ್ಘಟನೆಯಾಗಿದ್ದು, ಕೊಲೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನು ಮಾಡೆಲ್​ಗಳಿದ್ದ ಕಾರು ಅಪಘಾತಕ್ಕೀಡಾಗುವ ಮುನ್ನ ಆಡಿ ಕಾರೊಂದು ಅವರನ್ನು ಹಿಂಬಾಲಿಸಿತ್ತು. ಇದು ಪ್ರಕರಣದ ನಿಗೂಢತೆಗೆ ಸಾಕ್ಷಿಯಾಗಿತ್ತು. ಆ ಆಡಿ ಕಾರು ಎಡಪ್ಪಳ್ಳಿಯ ಇಂದಿರಾಜಿ ರಸ್ತೆಯ ನಿವಾಸಿ ಫೆಬಿ ಪೌಲ್ ಎಂಬುವರಿಗೆ ಸೇರಿದ್ದು, ಫೆಬಿ ಪೌಲ್ ಅವರು ಕೋಝಿಕ್ಕೋಡ್‌ನ ನಡಕ್ಕಾವು ಎಂಬಲ್ಲಿ ಅಗ್ನಿಶಾಮಕ ಮತ್ತು ಸುರಕ್ಷತಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಘಟನೆ ಸಂಬಂಧ ಕೇರಳದ ಮಾತೃಭೂಮಿ ಮಾಧ್ಯಮ ಫೆಬಿ ಪೌಲ್​ ಅನ್ನು ಸಂಪರ್ಕಿಸಿದೆ.

    ಕಾರಿನ ಬಗ್ಗೆ ಮಾತನಾಡಿರುವ ಫೆಬಿ ಪೌಲ್​, ಈಗಲೂ ಕಾರು ನೋಂದಣಿಯಲ್ಲೇ ಇದೆ. ಆದರೆ, ಅದನ್ನು ಸೈಜು ಎಂಬಾತ ಬಳಸುತ್ತಿದ್ದಾರೆ. ಕೆಲಸದ ಭಾಗವಾಗಿ ಮೂರು ವರ್ಷಗಳ ಹಿಂದೆ ಸೈಜ್​ನನ್ನು ನಾನು ಭೇಟಿಯಾಗಿದ್ದೆ. ಸೈಜು ಒಬ್ಬ ಅದ್ಭುತ ವಾಸ್ತುಶಿಲ್ಪಿ ಮತ್ತು ನಮ್ಮ ಸಂಬಂಧವು ಸಂಪೂರ್ಣವಾಗಿ ವೃತ್ತಿಪರವಾಗಿದೆ. ಅವರ ಸಹೋದರ ಸೋನಿ ಕೂಡ ನನಗೆ ತುಂಬಾ ಹತ್ತಿರವಾಗಿದ್ದಾರೆ; ನಮ್ಮ ಕುಟುಂಬಗಳು ಕೂಡ ಪರಿಚಿತವಾಗಿವೆ. ಸೆಕೆಂಡ್​ ಹ್ಯಾಂಡ್​ ಆಡಿ ಕಾರು ಖರೀದಿಸುವ ಆಸೆಯ ಬಗ್ಗೆ ಕಳೆದ ವರ್ಷ ಸೈಜು ನನ್ನ ಬಳಿ ಹೇಳಿಕೊಂಡಿದ್ದ. ಆದರೆ, ಆತನ ಕೈಯಲ್ಲಿ 13 ಲಕ್ಷ ರೂಪಾಯಿ ಇದ್ದು, ಕಾರು ಖರೀದಿಸಲು ಇನ್ನೂ 7 ಲಕ್ಷ ರೂಪಾಯಿ ಬೇಕಿತ್ತು. ಅವನ ಸಿಐಬಿಐಎಲ್​ ಸ್ಕೋರ್ ದುರ್ಬಲವಾಗಿದ್ದರಿಂದ, ನಾನೇ ಅವನಿಗೆ ಬ್ಯಾಂಕ್​ನಲ್ಲಿ ಸಾಲವನ್ನು ಪಡೆಯಲು ಸಹಾಯ ಮಾಡಿದೆ. ಅಂದಿನಿಂದ ಸ್ವಯಂಚಾಲಿತವಾಗಿ ನನ್ನ ಹೆಸರಿನಲ್ಲಿ ಕಾರು ನೋಂದಾಯಿಸಲ್ಪಟ್ಟಿದೆ. ಸಾಲು ತೀರಿಸಲು ವಿಫಲವಾದರೆ ಕಾರನ್ನು ವಶಕ್ಕೆ ಪಡೆಯುವ ಬಗ್ಗೆ ಇಬ್ಬರ ನಡುವೆ ಒಪ್ಪಂದ ಆಗಿತ್ತು. ವಾಹನದ ಬಳಕೆದಾರರು ಸೈಜು ಮಾತ್ರ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿತ್ತು ಮತ್ತು ವಾಹನದ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು. ಒಂದು ತಿಂಗಳು ತಪ್ಪಿಸದೇ ತಿಂಗಳಿಗೆ ಅಂದಾಜು 32 ಸಾವಿರ ಇಎಂಐ ಕಟ್ಟಿ ಸಾಲವನ್ನು ಸೈಜು ತೀರಿಸಿದ್ದಾರೆ. ಆದರೆ, ಇನ್ನು ತನ್ನ ಹೆಸರಿಗೆ ಕಾರನ್ನು ಮಾತ್ರ ನೋಂದಣಿ ಮಾಡಿಸಿಕೊಂಡಿರಲಿಲ್ಲ ಎಂದು ಫೆಬಿ ಪೌಲ್​ ಹೇಳಿದ್ದಾರೆ.

    ಇನ್ನು ಸೈಜುಗೆ ಐಷಾರಾಮಿ ಪಾರ್ಟಿಗಳಲ್ಲಿ ಭಾಗವಹಿಸುವ ಹವ್ಯಾಸ ಇದೆ. ಅಲ್ಲದೆ, ಆತ ಒಳ್ಳೆಯ ಮನುಷ್ಯನಾಗಿದ್ದು, ಸಹಾಯ ಮಾಡುವ ಗುಣವಿದೆ. ಆತನಿಗೆ ಬಹುದೊಡ್ಡ ಸ್ನೇಹಿತರ ಬಳಗವಿದೆ. ತಮ್ಮ ಒಳ್ಳೆಯ ಸ್ವಭಾವದಿಂದಲೇ ಎಲ್ಲರ ಬಳಿ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದಾರೆ. ಬಹುಶಃ ಅಪಘಾತಕ್ಕೀಡಾದ ಮಾಡೆಲ್​ಗಳು ಸಹ ಸೈಜುಗೆ ಪರಿಚಿತರಾಗಿರಬಹುದು. ಅವರು ಮದ್ಯಪಾನ ಮಾಡಿದ್ದರಿಂದ ಅವರು ಸುರಕ್ಷಿತವಾಗಿ ಮನೆಗೆ ಹೋಗುವುದಕ್ಕೆ ಸಹಾಯ ಮಾಡಲು ಅವರನ್ನು ಹಿಂಬಾಲಿಸಿರಬಹುದು. ಅಲ್ಲದೆ, ಮದ್ಯದ ಅಮಲಿನಲ್ಲಿದ್ದ ಅವರನ್ನು ತಮ್ಮ ಮನೆಯಲ್ಲಿ ಉಳಿಯುವಂತೆ ಸೈಜ್​ ಆಫರ್​ ಮಾಡಿದರು ಅದನ್ನು ತಿರಸ್ಕರಿಸಿ ಹೋಟೆಲ್​ನಿಂದ ಹೊರಟರಂತೆ. ಒಂದೇ ಮಾರ್ಗವಾದ್ದರಿಂದ ಅವರನ್ನು ಸೈಜು ಹಿಂಬಾಲಿಸಿದ್ದಾರೆ. ತುಂಬಾ ವೇಗವಾಗಿ ಚಾಲನೆ ಮಾಡಿಕೊಂಡು ಹೋದ್ದರಿಂದ ಅವರ ಬಳಿ ತಲುಪುವಷ್ಟರಲ್ಲೇ ಕಾರು ಅಪಘಾತಕ್ಕೀಡಾಗಿ ಮಾಡೆಲ್​ಗಳು ಸಾವಿಗೀಡಾಗಿದ್ದರು. ಆ ವೇಳೆ ಸೈಜು ಒಬ್ಬರೇ ಅಲ್ಲಿ ಇದ್ದಿದ್ದು, ಸಹಾಯ ಮಾಡುವ ಉದ್ದೇಶದಿಂದ ಹಿಂಬಾಲಿಸಿದ್ದಾರಷ್ಟೇ ಎಂದು ಫೆಬಿ ಸ್ಪಷ್ಟನೆ ನೀಡಿದರು.

    ಇದಾದ ಬಳಿಕ ಮಾತೃಭೂಮಿ ಮಾಧ್ಯಮ ತನಿಖಾಧಿಕಾರಿ ಅನಂತಲಾಲ್ ಅವರನ್ನು ಸಂಪರ್ಕಿಸಿದೆ. “ಪ್ರಕರಣದಲ್ಲಿ ನಿಗೂಢ ಏನೂ ಇಲ್ಲ. ಕುಡಿದ ಅಮಲಿನಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ಸಂಭವಿಸಿದ ಅಪಘಾತ ಎಂಬುದು ಸ್ಪಷ್ಟವಾಗಿದೆ. ಪ್ರಕರಣದಲ್ಲಿ ಸೈಜು ಅವರ ಕೈವಾಡವಿಲ್ಲ. ಅವರನ್ನು ಹಿಂಬಾಲಿಸಿದ್ದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳುತ್ತಾರೆ. ಆದರೆ, ಇದು ಕೇವಲ ಊಹೆಯಾಗಿದೆ ಮತ್ತು ಈ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದಿಲ್ಲ. ಪಲರಿವಟ್ಟಂ ಪೊಲೀಸರು ಸೋಮವಾರ ಚಾಲಕ ಅಬ್ದುಲ್ ರೆಹಮಾನ್‌ನನ್ನು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಸೈಜು ಹೇಳಿಕೆಗಳನ್ನು ಪರಿಶೀಲಿಸಲು ಅಬ್ದುಲ್ ರೆಹಮಾನ್ ಅವರನ್ನು ಪ್ರಶ್ನಿಸೋಣ ಎಂದು ಅನಂತಲಾಲ್ ಹೇಳಿದ್ದಾರೆ.

    ಪಾರ್ಟಿ ನಡೆದ ನಂಬರ್-18 ಹೋಟೆಲ್ ಮಾಲೀಕನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸರು ಸಮನ್ಸ್ ನೀಡಿದ್ದಾರೆ. “ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾಲೀಕರಿಗೂ ಅಪಘಾತಕ್ಕೂ ಸಂಬಂಧವಿಲ್ಲ. ಆದರೆ, ಹೊಟೇಲ್‌ನಲ್ಲಿದ್ದ ಸಿಸಿಟಿವಿ ದೃಶ್ಯಗಳ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ. ಅದನ್ನು ಏಕೆ ಮರೆಮಾಚಲಾಗಿದೆ ಎಂದು ತಿಳಿಯಲು ನಾವು ಬಯಸುತ್ತೇವೆ ಎಂದು ಅನಂತಲಾಲ್ ತಿಳಿಸಿದ್ದಾರೆ.

    ಬಹುಶಃ ಪಾರ್ಟಿಗೆ ಸಂಬಂಧಿಸಿದ ಹೋಟೆಲ್‌ನಲ್ಲಿ ನಡೆದಿದ್ದ ಅಕ್ರಮ ಚಟುವಟಿಕೆಗಳನ್ನು ಬಚ್ಚಿಡಲು ಅಥವಾ ಇನ್ನಾವುದಾದರೂ ಮರೆಮಾಚಲು ಹಾರ್ಡ್ ಡಿಸ್ಕ್ ಅನ್ನು ಬಚ್ಚಿಡಲಾಗಿದೆ ಎಂದು ಪೊಲೀಸರು ಭಾವಿಸಿದ್ದಾರೆ. (ಏಜೆನ್ಸೀಸ್​)

    ಮಾಡೆಲ್​ಗಳಿಬ್ಬರ ದುರ್ಮರಣ: ಆಡಿ ಕಾರು, ಹೋಟೆಲ್​ ಮಾಲೀಕ… ಪೊಲೀಸರಿಗೆ ಸಿಕ್ತು ಸ್ಫೋಟಕ ಸುಳಿವು

    ಕೇರಳ ಮಾಡೆಲ್​ಗಳಿಬ್ಬರ ದುರ್ಮರಣ: ಮಧ್ಯರಾತ್ರಿಯ ಡಿಜೆ ಪಾರ್ಟಿ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ!

    ಮಾಡೆಲ್​ಗಳಿಬ್ಬರ ದುರ್ಮರಣ: ರಹಸ್ಯ ಮಾಹಿತಿ ಇರೋ ಸಿಸಿಟಿವಿ ಡಿವಿಆರ್​ನೊಂದಿಗೆ​ ಹೋಟೆಲ್​ ಮಾಲೀಕ ನಾಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts