More

  ಶಾಲಾರಂಭ ವೇಳೆಗೆ ಸಿಗುವುದೇ ಪುಸ್ತಕ?; ಪುನಾರಂಭಕ್ಕೆ ಒಂದೇ ವಾರ ಬಾಕಿ

  | ಎನ್.ಎಲ್.ಶಿವಮಾದು ಬೆಂಗಳೂರು

  ಶಾಲಾ ಮಕ್ಕಳ ಪಠ್ಯಪರಿಷ್ಕರಣೆಗೊಳಿಸಿ ಮುದ್ರಣಕ್ಕೆ ಆದೇಶ ನೀಡಲು ವಿಳಂಬವಾದ ಪರಿಣಾಮ ಈ ಬಾರಿ ಶಾಲಾರಂಭದ ದಿನವೇ ರಾಜ್ಯದ ಎಲ್ಲ ಮಕ್ಕಳಿಗೆ ಪಠ್ಯಪುಸ್ತಕ ಲಭ್ಯವಾಗುವುದು ಅನುಮಾನವಾಗಿದೆ.

  ಈಗಾಗಲೇ ಖಾಸಗಿ ಶಾಲೆಗಳು ಆರಂಭವಾಗಿದ್ದು, ಮೇ 29ರಂದು ಸರ್ಕಾರಿ ಶಾಲೆಗಳೂ ಆರಂಭವಾಗಲಿವೆ. ಆದರೆ, ಇಲ್ಲಿಯವರೆಗೂ ಕೇವಲ ಶೇ.60 ಪುಸ್ತಕ ಮುದ್ರಣಗೊಂಡಿದ್ದು, ಶೇ.55 ಪಠ್ಯಪುಸ್ತಕ ಜಿಲ್ಲಾ ಕೇಂದ್ರಗಳಿಗೆ ಸರಬರಾಜಾಗಿದೆ. ಜೂನ್ ಮೊದಲ ವಾರದ ವೇಳೆಗೆ ಇನ್ನೂ ಶೇ.20 ಪಠ್ಯಪುಸ್ತಕ ಮುದ್ರಣಗೊಂಡು ಸರಬರಾಜಾಗಬಹುದು. ಉಳಿದ ಶೇ.25 ಮಕ್ಕಳು ಪಠ್ಯಪುಸ್ತಕವಿಲ್ಲದೆ ಕೆಲವು ದಿನಗಳ ಮಟ್ಟಿಗೆ ಶಾಲೆಗೆ ಆಗಮಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

  ಶಿಕ್ಷಣ ಇಲಾಖೆಯಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಿದ್ದು, ಬೆಂಗಳೂರು, ಮೈಸೂರು ವಿಭಾಗಗಳು ಬೆಂಗಳೂರಿನಿಂದ ಸಮೀಪದಲ್ಲಿಯೇ ಇರುವುದರಿಂದ ಸ್ವಲ್ಪ ಬೇಗ ಸರಬರಾಜಾಗುತ್ತವೆ. ಆದರೆ, ಹೆಚ್ಚಿನ ಮುದ್ರಣಾಲಯಗಳು ಬೆಂಗಳೂರಿನಲ್ಲಿಯೇ ಇರುವುದರಿಂದ ಎಲ್ಲ ಪುಸ್ತಕಗಳು ಮುದ್ರಣಗೊಂಡ ನಂತರ ಕಲಬುರಗಿ ಮತ್ತು ಬೆಳಗಾವಿ ವಲಯಗಳಿಗೆ ಸರಬರಾಜು ಮಾಡಲಾಗುತ್ತದೆ. ಒಂದೊಂದೇ ಪುಸ್ತಕಗಳನ್ನು ರವಾನಿಸುವುದು ಕಷ್ಟದ ಕೆಲಸವಾಗಿರುವ ಕಾರಣ ವಿಳಂಬವಾಗಲಿದೆ. ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿರುವುದರಿಂದ ಹಳೆಯ ಪುಸ್ತಕಗಳನ್ನಿಟ್ಟುಕೊಂಡು ಪಾಠ ಹೇಳಲು ಆಗಲ್ಲ ಎಂದು ಶಿಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಒಂದು ತಿಂಗಳು ಬೇಕು: 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕನ್ನಡ, 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಗಳ ಪರಿಷ್ಕರಣೆಗೆ ಮಂಜುನಾಥ ಜಿ.ಹೆಗಡೆ ನೇತೃತ್ವದಲ್ಲಿ 37 ಸದಸ್ಯರ ಸಮಿತಿ ರಚನೆ ಮಾಡಿತ್ತು. ಸಮಿತಿ ನೀಡಿದ ವರದಿ ಆಧಾರದಲ್ಲಿ ಶಿಕ್ಷಣ ಇಲಾಖೆಯು ಜನವರಿಯಲ್ಲಿ ಟೆಂಡರ್ ಕರೆದು ಫೆಬ್ರವರಿಯಲ್ಲಿ ಅಂತಿಮಗೊಳಿಸಿತ್ತು. ಮಾರ್ಚ್​ನಿಂದ ಪಠ್ಯಪುಸ್ತಕಗಳ ಮುದ್ರಣ ಆರಂಭವಾಗಿದೆ. ಮುದ್ರಣ ಕೆಲಸ ಮುಗಿಯಲು ಕನಿಷ್ಠ 4 ತಿಂಗಳು ಬೇಕಾಗುತ್ತದೆ. ಈಗ ಕೇವಲ ಎರಡೂವರೆ ತಿಂಗಳು ಮುಗಿದಿದ್ದು, ಇನ್ನೂ ಒಂದು ತಿಂಗಳು ಬೇಕಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಪಠ್ಯಪುಸ್ತಕಗಳ 861 ಶೀರ್ಷಿಕೆ, 34 ವರ್ಕ್ಬುಕ್, 2 ಡೈರಿ ಶೀರ್ಷಿಕೆ ಒಳಗೊಂಡಂತೆ ಒಟ್ಟು 175 ಪ್ಯಾಕೇಜ್ ನೀಡಲು ಟೆಂಡರ್ ಕರೆದಿದೆ. ಜಿಎಸ್​ಟಿ ಸೇರಿ 331 ಕೋಟಿ ರೂ. ಅಂದಾಜು ವೆಚ್ಚವನ್ನು ಟೆಂಡರ್​ಗೆ ಒಪ್ಪಿಗೆ ನೀಡಲಾಗಿದ್ದು, ಮುದ್ರಣ ಕಾರ್ಯ ಪ್ರಗತಿಯಲ್ಲಿದೆ.

  ವಿಳಂಬಕ್ಕೆ ಕಾರಣವೇನು?: ಸಾಮಾನ್ಯವಾಗಿ ಪಠ್ಯಪುಸ್ತಕ ಮುದ್ರಣವನ್ನು ಹಿಂದಿನ ವರ್ಷದ ಅಕ್ಟೋಬರ್-ನವೆಂಬರ್ ನಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಏಪ್ರಿಲ್-ಮೇ ವೇಳೆಗೆ ಮುದ್ರಿಸಿ ಶಾಲೆಗೆ ಕಳುಹಿಸಲಾಗುತ್ತದೆ. ಈ ವರ್ಷ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸದ ಕಾರಣ ಮತ್ತು ಹಿಂದಿನ ಬಿಜೆಪಿ ಸರ್ಕಾರ ಪರಿಷ್ಕರಿಸಿದ್ದ ಪಠ್ಯವನ್ನು ಮತ್ತೊಮ್ಮೆ ಪರಿಷ್ಕರಣೆಗೆ ಮುಂದಾಗಿದ್ದರಿಂದ ಸಮಸ್ಯೆಯಾಗಿ ಮುದ್ರಣ ಮಾರ್ಚ್​ನಲ್ಲಿ ಶುರುವಾಗಿದೆ. ಮುದ್ರಣ ಮತ್ತು ಸರಬರಾಜು ಕಾರ್ಯವನ್ನು ಜೂ.4ರಂದು ಪ್ರಕಟವಾಗುವ ಲೋಕಸಭಾ ಚುನಾವಣೆ ಫಲಿತಾಂಶ ವೇಳೆಗೆ ಪೂರ್ಣಗೊಳಿಸಬೇಕು ಎಂದು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

  ಶಾಲೆಗಳಲ್ಲಿ ಸಕಲ ಸಿದ್ಧತೆ

  ಉಡುಪಿ: ಪ್ರಸಕ್ತ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಕಲ ಸಿದ್ಧತೆ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಎಲ್ಲ ಶಾಲೆ ಗಳಿಗೂ ಸಕಾಲಕ್ಕೆ ಪುಸ್ತಕ, ಸಮವಸ್ತ್ರ ವಿತರಿಸಲಾಗುವುದು. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ 500 ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿ, ಕರ್ನಾಟಕ ಪಬ್ಲಿಕ್ ಸ್ಕೂಲ್​ಗಳಾಗಿ ಪರಿವರ್ತಿಸಲಾಗುತ್ತಿದೆ ಎಂದರು.

  Madhu Bangarappa

  ಕೃಪಾಂಕ ಇಲ್ಲ: ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೇ.20 ಕೃಪಾಂಕ ನೀಡಲಾಗಿತ್ತು. ಇದು ಈ ವರ್ಷ ಕ್ಕಷ್ಟೇ ಸೀಮಿತ. ಈ ಬಾರಿ ನಡೆವ ಪರೀಕ್ಷೆ-2, ಪರೀಕ್ಷೆ-3 ಗಳಿಗೂ ಶೇ.20 ಕೃಪಾಂಕ ಇರುವುದಿಲ್ಲ ಎಂದರು.

  ಸಚಿವರಿಗೆ ಸಂಸ್ಕಾರ ಕಲಿಸಬೇಕು

  ಹೊಸಪೇಟೆ: ಶಿಕ್ಷಣ ಸಚಿವರಿಗೆ ಯಾವುದೇ ಗಾಂಭೀರ್ಯ ಇಲ್ಲ. ಶರಣರು, ಸಂತರು ಜನಿಸಿದ ಹಾಗೂ ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನಲ್ಲಿ ಇಂಥವರು ಶಿಕ್ಷಣ ಸಚಿವರಾಗಿರುವುದು ಶೋಚನೀಯ ಎಂದು ಮಧು ಬಂಗಾರಪ್ಪ ವಿರುದ್ಧ ಎಂಎಲ್ಸಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದರು.

  MLC ravikumar

  ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯ ಕುಸಿತ ಕಂಡಿದೆ. ರಾಜ್ಯದ ಸಾವಿರಾರು ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಶಿಕ್ಷಕರ ನೇಮಕಾತಿ ನಡೆದಿಲ್ಲ. ಈ ಕುರಿತು ಗಮನಹರಿಸದ ಶಿಕ್ಷಣ ಸಚಿವರು ಉಡಾಫೆ ಮಾತನಾಡುತ್ತಿದ್ದಾರೆ. ಕನ್ನಡ ಓದಲು ಬಾರದ ಅವರಿಗೆ ಯಾರಾದರೂ ಕಟಿಂಗ್ ಮಾಡಿಸಿ ಸಂಸ್ಕಾರ ಕಲಿಸಬೇಕಿದೆ ಎಂದು ಟೀಕಿಸಿದರು.

  31ರಂದು ಶಾಲೆಗಳ ಪ್ರಾರಂಭ

  ಬೆಂಗಳೂರು: ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಮೇ 29 ಮತ್ತು 30ರಂದು ಶಾಲಾ ಪ್ರಾರಂಭೋತ್ಸವದ ಸಿದ್ಧತೆ ಮಾಡಿಕೊಂಡು ಮೇ 31ರಂದು ಶಾಲಾ ಪ್ರಾರಂಭೋತ್ಸವ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

  ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಹಂತದಲ್ಲಿ ಸಿಆರ್​ಪಿ, ಬಿಆರ್​ಪಿ ಹಾಗೂ ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಶಾಲೆ ಪ್ರಾರಂಭದ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಕ್ರಮ ವಹಿಸುವಂತೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

  ಶಾಲಾ ಸ್ವಚ್ಛತಾ ಕಾರ್ಯ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು. ಮೇ 29ರಂದು ಶಿಕ್ಷಕರು ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಶಾಲಾ, ತರಗತಿ, ಶಿಕ್ಷಕರ ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಶಿಕ್ಷಕರು ಪಾಠ ಯೋಜನೆ ತಯಾರಿಸಿಕೊಳ್ಳುವುದು. ಶಾಲಾಭಿವೃದ್ಧಿ ಯೋಜನೆ, ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ವಿಶೇಷ ದಾಖಲಾತಿ ಮಾಡಿಕೊಳ್ಳಲು ಜಾಥಾ, ಪ್ರಭಾತ್ ಪೇರಿ, ಮನೆ ಭೇಟಿ ಮುಂತಾದ ಕ್ರಮಗಳನ್ನು ಹಮ್ಮಿಕೊಳ್ಳುವುದು. ಮೇ 31ರಂದು ಮಕ್ಕಳಿಗೆ ಸಿಹಿ ಊಟ ವಿತರಿಸಿ ಪ್ರಾರಂಭೋತ್ಸವ ಮಾಡಬೇಕು. ಶಾಲಾರಂಭದ ದಿನವೇ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಬೇಕು. ಜೂ.1ರಿಂದ 30ರವರೆಗೆ ಸೇತುಬಂಧ ಕಾರ್ಯಕ್ರಮ ನಡೆಸಬೇಕು ಎಂದು ಸೂಚಿಸಲಾಗಿದೆ.

  ತಮಿಳುನಾಡಿನ ವಿವಿಧ ಕಡೆ ವರ್ಷಧಾರೆ: ಸಿಡಿಲು ಬಡಿದು ಇಬ್ಬರು ಮೃತ್ಯು, ಸಾವಿನ ಸಂಖ್ಯೆ 4ಕ್ಕೆ ಏರಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts