More

  ಸೀತಾಮಾತೆಗೂ ದೇಗುಲದ ನೆಲೆ

  ಶ್ರೀರಾಮನ ವರ್ಚಸ್ಸಿನ ನೆರಳಲ್ಲಿ ಸೀತಾಮಾತೆಯ ಆದರ್ಶ ಸದಾ ಮಸುಕು. ರಾಮಾಯಣದಲ್ಲಿ ರಾಮಚಂದ್ರನಿಗೆ ಎಷ್ಟು ಮಹತ್ವವಿದೆಯೋ ಜಾನಕಿಗೂ ಇದೆ ಅಷ್ಟೇ ತೂಕ. ಆದರೆ ಭಾರತವೇಕೆ, ಇಡೀ ಭೂಮಂಡಲ ಹುಡುಕಿದರೂ ಸೀತೆಗೊಂದು ಪ್ರತ್ಯೇಕ ದೇಗುಲ ನೋಡುವುದಕ್ಕೆ ದುರ್ಬೀನು ಹಾಕಲೇಬೇಕು. ಸೀತೆಯನ್ನು ನೆನೆದು ಮನದೊಳಗೇ ಕೈಮಗಿಯುವ ಕೋಟ್ಯಂತರ ಭಕ್ತರು ಅಯೋಧ್ಯೆಯ ರಾಮ ಮಂದಿರದಲ್ಲಾದರೂ ಸೀತೆ ಇರಬೇಕಿತ್ತೆಂದು ಆಶಿಸಿದ್ದಿದೆ. ಈ ಮನ್ ಕಿ ಬಾತ್ ಮೋದಿ ಸರ್ಕಾರದ ಕಿವಿ ಮುಟ್ಟಿದೆ. ಅಯೋಧ್ಯೆಯ ರಾಮಮಂದಿರದಂತೆ ಸೀತಾಮಾತೆಯ ಜನ್ಮಸ್ಥಳ ಎಂದು ನಂಬಲಾದ ಬಿಹಾರದ ಸೀತಾಮಡಿಯಲ್ಲಿ ಸೀತಾಮಾತೆಯ ಭವ್ಯ ಮಂದಿರ ನಿರ್ವಿುಸುವುದಾಗಿ ಬಿಜೆಪಿ ಘಂಟಾಘೋಷವಾಗಿ ಸಾರಿದೆ. ಇದು ಕೇಸರಿಪಡೆಯ ಚುನಾವಣೆ ಘೋಷಣೆ ಆಗಿದ್ದರೂ ಸೀತೆಯನ್ನು ಪೂಜಿಸಿ, ಗೌರವಿಸುವವರ ಮನದಲ್ಲಿ ಹೊಸ ಆಶಾಭಾವ ಮೂಡಿಸಿದೆ.

  ರಾಮಮಂದಿರ ನಿರ್ಮಾಣ ಆದಾಗಲೇ ಕೋಟ್ಯಂತರ ವೆಚ್ಚದಲ್ಲಿ ದೇಗುಲ ಕಟ್ಟಬೇಕಿತ್ತಾ ಎಂಬ ಅಪಸ್ವರ ಕೇಳಿಬಂದಿತ್ತು. ಶ್ರೀರಾಮ ಅಯೋಧ್ಯೆಯಲ್ಲಿ ಮಾತ್ರ ಇದ್ದಾನಾ? ನಮ್ಮೂರಿನಲ್ಲಿರೋದು ಶ್ರೀರಾಮನಲ್ವಾ? ಎಂಬ ಮಾತುಗಳು ತೇಲಾಡಿತ್ತು. ಆದರೆ ಮಂದಿರ ಲೋಕಾರ್ಪಣೆ ತಣ್ಣಗಾದ ಬಳಿಕ ಟೀಕಿಸಿ, ಕೊಂಕು ಆಡಿದ್ದವರೆಲ್ಲ ಸದ್ದಿಲ್ಲದೆ ಅಯೋಧ್ಯೆಗೆ ಹೋಗಿ ಶ್ರೀರಾಮನಿಗೆ ಜೈಕಾರ ಹಾಕಿ ಬಂದಿದ್ದರು. ಭಾರತವನ್ನು ಆವರಿಸಿದ ಶ್ರೀರಾಮನ ಅಲೆಯಿಂದ ಪ್ರೇರಿತರಾದ ಗೃಹ ಸಚಿವ ಅಮಿತ್ ಷಾ ಇದೀಗ ಸೀತಾಮಂದಿರದ ಕನಸನ್ನು ಬಿತ್ತಿದ್ದಾರೆ. ಮೋದಿ ಕಾಲದಲ್ಲಿ ರಾಮಮಂದಿರ ನಿರ್ವಣವಾಯಿತು. ಈಗ ಸೀತೆಗಾಗಿ ಯಾರಾದರೂ ರಾಮಮಂದಿರ ನಿರ್ವಿುಸಿದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಸೀತಾಮಡಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಾರಿದ್ದಾರೆ.

  ಆದರ್ಶವೇಕೆ ಸೀತೆ?: ಸೀತಾಮಾತೆ ಜೀವನ ಮಹಿಳೆಯರಿಗೆ ಆದರ್ಶ, ಅನುಕರಣೀಯ. ತನ್ನ ಜೀವನಪೂರ್ತಿ ಕಷ್ಟ, ಕಾರ್ಪಣ್ಯ ಎದುರಿಸಿದರೂ ಎಂದೂ ಕೊರಗಿ ಕೂರಲಿಲ್ಲ. ಹಾಗೆಯೇ ಪತಿಯೇ ಪರಧರ್ಮ ಎಂಬ ತನ್ನ ನಂಬಿಕೆ, ನಿಷ್ಠೆಯನ್ನೂ ಬದಲಿಸಲಿಲ್ಲ. ಶ್ರೀರಾಮನ ಪ್ರತಿ ಹೆಜ್ಜೆಗೂ ಜತೆಯಾಗಿ ಹೆಜ್ಜೆ ಹಾಕಿದ ಸೀತೆ ರಾವಣ ಅಪಹರಿಸಿದಾಗ ಧೈರ್ಯಗೆಡಲಿಲ್ಲ. ತಾಳ್ಮೆಯನ್ನೂ ಕಳೆದುಕೊಳ್ಳಲಿಲ್ಲ. ಅಶೋಕ ವನದಲ್ಲಿ ಶ್ರೀರಾಮನಿಗಾಗಿ ವರ್ಷಗಟ್ಟಲೆ ಕಾದು ಕುಳಿತಾಗಲೂ ಎದೆಗುಂದಲಿಲ್ಲ. ಶ್ರೀರಾಮ ಎಂದಾದರೂ ಒಂದು ದಿನ ನನ್ನನ್ನು ಬಂದು ಕರೆದುಕೊಂಡು ಹೋಗುತ್ತಾನೆಂಬ ನಿರೀಕ್ಷೆ ಸೀತೆಗೆ ಪರಾಕ್ರಮಿಯ ಸ್ಥಾನ ತಂದುಕೊಟ್ಟಿತು. ಇನ್ನು ರಾವಣನ ಕಪಿಮುಷ್ಟಿಯಿಂದ ಬಿಡಿಸಿಕೊಂಡ ಬಳಿಕವೂ ಸೀತೆಯ ಬಾಳು ಸುಖವಾಗಿರಲಿಲ್ಲ. ಪತಿಯಿಂದ ಪರಿತ್ಯಕ್ತಳಾಗಿ ಕಾಡಿಗೆ ಹೋದ ಸೀತೆ ಸ್ವಾವಲಂಬಿತನ ಬಿಡದೆ ಪುತ್ರರಾದ ಲವ, ಕುಶರನ್ನು ಧೀರ, ವೀರರಾಗಿ ಬೆಳೆಸಿದ್ದು ಸೀತೆಯ ಮತ್ತೊಂದು ಹೆಗ್ಗಳಿಕೆ. ಇಂತಹ ಸೀತಾಮಾತೆ ಶತಶತಮಾನ ಕಳೆದರೂ ಹೆಣ್ಮಕ್ಕಳಿಗೆ ಆದರ್ಶನೀಯ. ಪವಿತ್ರತೆ ವಿಚಾರ ಬಂದಾಗ ಇಂದಿಗೂ ಮಹಿಳೆಯರನ್ನು ಸೀತಾಮಾತೆಗೆ ಹೋಲಿಸಲಾಗುತ್ತದೆ. ಹೀಗಾಗಿ ಸೀತಾಮಾತೆ ದೇಗುಲ ಭಾರತದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಲಿದೆ.

  ಸೀತಾಮಾತೆಗೂ ದೇಗುಲದ ನೆಲೆ

  ಸೀತಾಮಡಿಯ ನೆಲದಲ್ಲಿ: ಹಿಂದು ಗ್ರಂಥಗಳ ಪ್ರಕಾರ ಬಿಹಾರದ ಸೀತಾಮಡಿ ಸೀತಾಮಾತೆಯ ಜನ್ಮತಾಣ. ಮಿಥಿಲೆಯ ಜನಕ ರಾಜ ಸೀತಾಮಡಿಯ ಜಮೀನೊಂದರಲ್ಲಿ ಉಳುಮೆ ಮಾಡುವಾಗ ಮಡಿಕೆಯೊಂದರಲ್ಲಿ ಸೀತಾ ಮಾತೆ ಉದ್ಭವಿಸಿದಳೆಂಬುದು ನಂಬಿಕೆ. ಹೀಗಾಗಿ ಈ ಕ್ಷೇತ್ರ ಈಗಲೂ ಹಿಂದುಗಳ ಪಾಲಿನ ಪವಿತ್ರ ತಾಣ. ಸದ್ಯ ಈ ಸ್ಥಳ ಈಗ ಬಿಹಾರದ ಲೋಕಸಭಾ ಕ್ಷೇತ್ರವೂ ಹೌದು.

  ಅಳಿಯನಿಗೆ ಅತ್ತೆ ಮನೆ ಉಡುಗೊರೆ…: ಅಯೋಧ್ಯೆ ರಾಮಮಂದಿರಕ್ಕಾಗಿ ಸೀತೆ ತವರು ನೇಪಾಳ ಭರ್ಜರಿ ಉಡುಗೊರೆ ಕಳುಹಿಸಿತ್ತು. ಬರೋಬ್ಬರಿ 1100 ಬುಟ್ಟಿಗಳಲ್ಲಿಡಲಾಗಿದ್ದ ವಿಶೇಷ ಉಡುಗೊರೆಯನ್ನು 500 ಜನರು ಮೆರವಣಿಗೆ ಮೂಲಕ ನೇಪಾಳದ ಜನಕಪುರದಿಂದ ಅಯೋಧ್ಯೆಗೆ ಹೊತ್ತು ತಂದಿದ್ದರು. ಚಿನ್ನ, ಬೆಳ್ಳಿ ವಸ್ತುಗಳು, ಡ್ರೖೆಫ್ರೂಟ್ಸ್, ಪಾತ್ರೆ, ಬಟ್ಟೆ, ಸೌಂದರ್ಯವರ್ಧಕಗಳು, ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ನೇಪಾಳ ಬಳುವಳಿಯಾಗಿ ಶ್ರೀರಾಮನಿಗೆ ಅರ್ಪಿಸಿತ್ತು. ಈ ಉಡುಗೊರೆಗಳನ್ನು ಜ.22ರಂದು ನಡೆದ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಳಸಲಾಗಿತ್ತು. ಆ ಮೂಲಕ ಭಾರತ ನೇಪಾಳದ ಸಂಬಂಧ ಇನ್ನಷ್ಟು ಗಟ್ಟಿಗೊಂಡಿತು.

  ಸೀತಾಮಾತೆಗೂ ದೇಗುಲದ ನೆಲೆ

  ಸೀತೆಯ ಜನ್ಮವಿವಾದ: ಸೀತಾಮಾತೆ ಜನ್ಮಸ್ಥಳದ ಬಗ್ಗೆ ವಿವಾದವೂ ಇದೆ. ಬಿಹಾರದ ಸೀತಾಮಡಿಯೇ ಸೀತೆಯ ಜನ್ಮತಾಣ ಎಂದು ಒಂದು ವರ್ಗಹೇಳಿದರೆ ನೇಪಾಳ ತನ್ನ ನೆಲದ ಜನಕಪುರವೇ ಸೀತೆ ತವರು ಎಂದು ವಾದಿಸುತ್ತದೆ. ಜನಕಪುರ ದಲ್ಲಿ ಜಾನಕಿ ದೇಗುಲವಿದ್ದು, ನೇಪಾಳದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

  ಸೀತೆಯ ಪ್ರಮುಖ ತಾಣಗಳು

  1. ಪಂಚವಟಿ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಈ ದೇಗುಲವಿದೆ. ರಾವಣ ಸೀತೆಯನ್ನು ವಂಚನೆಯಿಂದ ಅಪಹರಿಸಿದ್ದು ಇದೇ ಸ್ಥಳದಲ್ಲಿ ಎಂಬುದು ನಂಬಿಕೆ. ಈ ಸ್ಥಳದಲ್ಲಿ ಐದು ಅಶ್ವತ್ಥ ಮರಗಳು ಒಟ್ಟಿಗೆ ಇರುವುದರಿಂದ ಇದನ್ನು ಪಂಚವಟಿ ಎಂದು ಕರೆಯಲಾಗುತ್ತದೆ.

  2. ಸೀತಾ ರಸೋಯಿ: ಅಯೋಧ್ಯೆಯ ರಾಮನ ಜನ್ಮಸ್ಥಳದ ಸನಿಹ ಈ ದೇಗುಲವಿದೆ. ಒಮ್ಮೆ ರಾಜ ಮನೆತನದ ಸೊಸೆಯಾದ ಸೀತೆ ತನ್ನ ಕುಟುಂಬಕ್ಕಾಗಿ ಇದೇ ಸ್ಥಳದಲ್ಲಿ ಅಡುಗೆ ಮಾಡಿ ಬಡಿಸಿದರೆಂಬ ನಂಬಿಕೆ ಇದೆ.

  3. ಸೀತಾಬನಿ: ಉತ್ತರಾಖಂಡದ ರಾಮ್ಗರದಿಂದ 20 ಕಿ.ಮೀ ದೂರದಲ್ಲಿ ಈ ದೇಗುಲವಿದೆ. ಸೀತೆ ವನವಾಸದ ಕೆಲವು ದಿನಗಳನ್ನು ಇಲ್ಲಿ ಕಳೆದರೆಂಬ ವಾದವಿದೆ. ಹಾಗೆಯೇ ಲವ,ಕುಶರಿಗೆ ಇದೇ ಸ್ಥಳದಲ್ಲಿ ಜನ್ಮನೀಡಿದರೆಂದು ಹೇಳಲಾಗುತ್ತದೆ.

  4. ಸೀತಾದೇವಿ ಸಮಾಧಿ: ಉತ್ತರ ಪ್ರದೇಶದ ಸಂತ ರವಿದಾಸ್ ನಗರದಲ್ಲಿ ಸೀತಾಮಾತೆಯ ಸಮಾಧಿ ಇದೆ ಎಂದು ನಂಬಲಾಗಿದೆ. ಸೀತೆ ಅವಮಾನ, ಅಗ್ನಿಪರೀಕ್ಷೆ ಎದುರಿಸುವಾಗ ತನ್ನ ತಾಯಿ ಭೂಮಿಯೊಳಗೆ ಸೇರಿಕೊಳ್ಳುತ್ತಾಳೆ. ಇಂದಿಗೂ ಬಾಯ್ತೆರೆದುಕೊಂಡೇ ಇದೆ.

  ಸೀತೆಯ ಹೆಸರುಗಳು

  1. ಜಾನಕಿ: ಜನಕರಾಜನ ಮಗಳು

  2. ಮೈಥಿಲಿ: ಮಿಥಿಲೆ ರಾಜನ ಮಗಳು

  3. ವೈದೇಹಿ: ಜನಕನ ಪೂರ್ವಜ ವಿದೇಹ

  4. ಭೂಮಿಜಾ: ಭೂಮಿಯಿಂದ ಬಂದವಳು

  5. ಸಿಯಾ: ಚಂದ್ರನ ಬೆಳಕಿನಂತವಳು

  6. ಪಾರ್ಥವಿ: ಭೂಮಿಯ ಮಗಳು

  7. ರಾಮಪ್ರಿಯ: ರಾಮನ ಪ್ರೀತಿಯ ಮಡದಿ

  8. ಊರ್ವಿಜಾ: ಲಕ್ಷ್ಮಿ ಅವತಾರ ಎಂಬ ನಂಬಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts