More

  ಹೊರಗುತ್ತಿಗೆಯಲ್ಲೂ ಮೀಸಲು: ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳ ಗ್ರೂಪ್-ಡಿ ಹುದ್ದೆಗೆ ಅನ್ವಯ

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ಹೊರ ಗುತ್ತಿಗೆ (ಔಟ್ ಸೋರ್ಸ್) ಉದ್ಯೋಗಗಳಲ್ಲಿ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಲಾಗಿದೆ ಎಂಬ ಕೊರಗಿಗೆ ಕೊನೆಗೂ ತೆರೆ ಬಿದ್ದಿದೆ. ಸಿದ್ದರಾಮಯ್ಯ ಸರ್ಕಾರ ಮೊದಲ ವರ್ಷಾಚರಣೆ ದಿನವೇ ಹೊರಗುತ್ತಿಗೆ ಉದ್ಯೋಗಗಳಿಗೆ ಮೀಸಲಾತಿ ಅಳವಡಿಸಿ ಆದೇಶ ಹೊರಡಿಸಿದೆ. ಜನಾದೇಶ ಪಡೆದು ಅಧಿಕಾರಕ್ಕೇರಿದ ಬಳಿಕ ಹೊರ ಗುತ್ತಿಗೆಯಲ್ಲಿ ಮೀಸಲು ವ್ಯವಸ್ಥೆ ಜಾರಿ ತರುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಮುಖ್ಯಮಂತ್ರಿ ಸಿದ್ದರಾಯ್ಯ ಬಜೆಟ್​ನಲ್ಲೂ ಈ ಭರವಸೆ ಪುನರುಚ್ಚರಿಸಿದ್ದರು. ಕಳೆದ ಡಿಸೆಂಬರ್​ನಲ್ಲಿ ಸಚಿವ ಸಂಪುಟ ಸಭೆ ನಿರ್ಣಯ ಅಂಗೀಕರಿಸಿತ್ತು.

  ಅದರ ಬೆನ್ನಲ್ಲೇ ಸೋಮವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಕಚೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್-ಡಿ ಹುದ್ದೆಗಳನ್ನು ಹೊರ ಗುತ್ತಿಗೆ ಮೂಲಕ ಭರ್ತಿ ಸಂದರ್ಭದಲ್ಲಿ ಮೀಸಲಾತಿ ಇನ್ನು ಮುಂದೆ ಅನ್ವಯವಾಗಲಿದೆ.

  ಮಹಿಳೆಯರಿಗೆ ಶೇ.33: ಇಲಾಖೆಗಳಲ್ಲಿ ನಡೆಯುವ ಎಲ್ಲ ಹೊರಗುತ್ತಿಗೆ ನೇಮಕಾತಿಯಲ್ಲೂ ಮಹಿಳೆಯರಿಗೆ ಕನಿಷ್ಠ ಶೇ.33 ಮೀಸಲು ನಿಗದಿಪಡಿಸಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮದೊಂದಿಗೆ ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳನ್ನು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

  ಅಪಸ್ವರವಿತ್ತು: ಖಾಲಿಯಿರುವ ಕಾಯಂ ಹುದ್ದೆಗಳನ್ನು ಕೈಬಿಟ್ಟು, ಗುತ್ತಿಗೆ ಹಾಗೂ ಹೊರ ಮೂಲ ಗುತ್ತಿಗೆ ಪದ್ಧತಿ ಜಾರಿಗೊಳಿಸಿದ ಮೇಲೆ ಮೀಸಲು ವ್ಯವಸ್ಥೆ ಮಾಯವಾಗಿತ್ತು. ಹೊರ ಮೂಲ ಗುತ್ತಿಗೆಯಡಿ ಸಾಮಾಜಿಕ ನ್ಯಾಯ ಗಾಳಿಗೆ ತೂರಲಾಗಿದೆ ಎಂಬ ದಟ್ಟ ಅಪಸ್ವರವಿತ್ತು. ಹೊರ ಮೂಲದಗುತ್ತಿಗೆ ಸಂಸ್ಥೆ/ ಏಜನ್ಸಿಗಳು ಮೀಸಲಾತಿಯನ್ನು ಪರಿಗಣಿಸುತ್ತಿಲ್ಲ. ಲಾಭಾಂಶ ಉದ್ದೇಶಿತ ಸಂಸ್ಥೆಗಳಿಗೆ ಸರ್ಕಾರವು ಮೀಸಲಾತಿ ನೀತಿ ಪಾಲನೆಗೆ ಸೂಚಿಸುತ್ತಿಲ್ಲವೆಂದು ಅನೇಕಸಂಘಟನೆಗಳು ದೂರಿದ್ದವು. ಕಾಯಂ ಹುದ್ದೆಗಳನ್ನು ತುಂಬಿ ಕೊಳ್ಳುವ ತನಕ ಹೊರ ಗುತ್ತಿಗೆಯಲ್ಲೂ ಮೀಸಲಾತಿ ಜಾರಿಗೆ ತರಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.

  ನಿರಾಸೆಯೂ ಇದೆ: ಹೊರ ಗುತ್ತಿಗೆ ನೇಮಕಾತಿಯಲ್ಲಿ ಮೀಸಲು ಅಳವಡಿಕೆ ಸಮಾಧಾನಕರ ವಿಷಯವೇ ಸರಿ. ಆದರೆ ಪ್ರಸ್ತಾಪಿಸಿದ ಹಲವು ಸೂಚನೆಗಳ ಪೈಕಿ ಹೊರ ಗುತ್ತಿಗೆ ನೌಕರರನ್ನು ಕಾಯಂ ಮಾಡಲು ಪರಿಗಣಿಸತಕ್ಕದ್ದಲ್ಲವೆಂಬ ಅಂಶವು ಸರ್ಕಾರಿ ಕಾಯಂ ಉದ್ಯೋಗಾಕಾಂಕ್ಷಿಗಳನ್ನು ನಿರಾಸೆಯ ಮಡುವಿಗೆ ತಳ್ಳಲಿದೆ.

  ಗುತ್ತಿಗೆ ಹೋಗಿ ಹೊರಗುತ್ತಿಗೆ: ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದವರು ಕಾಯಂಗೆ ಒತ್ತಾಯಿಸಿ ಚಳವಳಿ ಹೂಡಿದ್ದಲ್ಲದೆ, ಸುಪ್ರೀಂಕೋರ್ಟ್ ಕಟಕಟೆ ಹತ್ತಿದ್ದರು. ‘ಗುತ್ತಿಗೆ ಪದ್ಧತಿ’ಯು ಸರ್ಕಾರದ ಹಿಂಬಾಗಿಲ ಪ್ರವೇಶವಲ್ಲವೆಂದು ಸುಪ್ರೀಂಕೋರ್ಟ್ ಚಾಟಿ ಬೀಸಿದ ನಂತರ ಗುತ್ತಿಗೆ ಪದ್ಧತಿ ರದ್ದಾಯಿತು. ಮಾನವೀಯ ನೆಲೆಯಲ್ಲಿ ಹಾಲಿ ಗುತ್ತಿಗೆ ಸಿಬ್ಬಂದಿಯನ್ನು ಮುಂದುವರಿಸಿದೆ. ಆದರೆ ನಂತರದ ವರ್ಷಗಳಲ್ಲಿ ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಠ ವೇತನದಡಿ ಸಿಬ್ಬಂದಿ ನೇಮಕ ಶಾಶ್ವತವಾಗಿ ಕೈಬಿಟ್ಟು, ಹೊರಗುತ್ತಿಗೆ ವ್ಯವಸ್ಥೆಗೆ ಮೊರೆ ಹೋಗಿದೆ.

  ಕಾಯಂ ಶಾಶ್ವತ ನಿಷಿದ್ಧ: ವಾಹನ ಚಾಲಕರು, ಡಿ ಗ್ರೂಪ್ ಹುದ್ದೆಗಳಿಗೆ ಕಾಯಂ ನೇಮಕವನ್ನು ಸರ್ಕಾರ ಶಾಶ್ವತವಾಗಿ ನಿಷೇಧಿಸಿದೆ. ಈ ಬಗ್ಗೆ ಅಧಿಕೃತವಾಗಿ ಹೇಳದಿದ್ದರೂ ದಶಕಗಳಿಂದಲೂ ಗುತ್ತಿಗೆ ನಂತರ ಹೊರ ಗುತ್ತಿಗೆಯಡಿ ಇಂತಹ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಾ ಬಂದಿದೆ. ಇಷ್ಟೇ ಅಲ್ಲ, ಸೇವೆಯಿಂದ ವಯೋನಿವೃತ್ತ ವಿವಿಧ ಶ್ರೇಣಿ ಅಧಿಕಾರಿಗಳು ಮತ್ತು ನೌಕರರನ್ನು ಹೊರ ಗುತ್ತಿಗೆಯಡಿ ನೇಮಕ ಮಾಡಿಕೊಳ್ಳುವ ಹೊಸ ಪರಿಪಾಠ ಶುರುವಾಗಿದೆ. ಈ ಕ್ರಮವು ಸರ್ಕಾರದ ಒಳ, ಹೊರಗೂ ತೀವ್ರ ವಿರೋಧಕ್ಕೆ ಗುರಿಯಾಗಿದೆ.

  ಮಾಫಿಯಾಗೂ ಕಡಿವಾಣದ ಬೇಡಿಕೆ: ಹೊರ ಗುತ್ತಿಗೆ ನೇಮಕದಲ್ಲಿ ಮೀಸಲಾತಿ ತಂದ ಬೆನ್ನಲ್ಲೇ, ವಿವಿಧ ಇಲಾಖೆಗಳಿಗೆ ಬೇಕಾದ ಮಾನವ ಸಂಪನ್ಮೂಲ ಪೂರೈಸುವ ಹೊರ ಮೂಲ ಏಜನ್ಸಿ ಮಾಫಿಯಾಕ್ಕೂ ಕಡಿವಾಣ ಹಾಕಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದೆ. ನಿರುದ್ಯೋಗಿಗಳ ಪರಿಸ್ಥಿತಿ ದುರ್ಲಾಭ, ಮುಂದೆ ಸರ್ಕಾರಿ ನೌಕರಿ ಕಾಯಂ ಆಗುತ್ತದೆ ಎಂಬ ಆಸೆ ಇಟ್ಟುಕೊಂಡವರು ಈ ಸಂಸ್ಥೆಗಳ ಬಲೆಗೆ ಬೀಳುತ್ತಾರೆ. ಪಿಎಫ್, ಇಎಸ್​ಐ ಯಾವುದನ್ನೂ ನೀಡದೆ ವಂಚಿಸುತ್ತಿದ್ದು, ಧ್ವನಿ ಎತ್ತಿದರೆ ಕೆಲಸ ಹೋದೀತು ಎಂದು ನೌಕರರು ಮೌನಕ್ಕೆ ಶರಣಾಗುತ್ತಾರೆ ಎಂಬ ದೂರುಗಳಿವೆ.

  ಸರ್ಕಾರ ತನ್ನ ಮೂಗಿನಡಿಯಲ್ಲೇ ನಡೆಯುವ ಈ ಶೋಷಣೆ ತಪ್ಪಿಸಲು ಖಾಸಗಿ ಸಂಸ್ಥೆಗಳ ಬದಲು ಕಿಯೊನಿಕ್ಸ್ ನಂತಹ ಸಂಸ್ಥೆಗಳನ್ನು ಹುಟ್ಟು ಹಾಕಬಹುದಾಗಿದೆ. ಇದರಿಂದ ಉತ್ತಮ ಸೇವೆ, ಸಿಬ್ಬಂದಿಗೆ ನ್ಯಾಯಬದ್ಧ ಸವಲತ್ತು ಲಭಿಸಲಿದ್ದು, ಉತ್ತರದಾಯಿತ್ವ ನಿಗದಿಯಾಗಲಿದೆ.

  ಯಾರಿಗೆ ಅನ್ವಯ? : ಸಚಿವಾಲಯ, ವಿಧಾನಸೌಧ ಸೇರಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮ-ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳಿಗೂ ಮೀಸಲಾತಿ ನೀತಿ, ನಿಯಮಗಳ ಪಾಲನೆ ಸೂಚನೆಗಳು ಅನ್ವಯಿಸುತ್ತವೆ.

  ಹಲವು ಬಗೆಯ ಹುದ್ದೆಗಳು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕಾಯಂ ಸಿಬ್ಬಂದಿ ಜತೆಗೆ ವಿವಿಧ ಬಗೆಯ ಹುದ್ದೆಗಳಲ್ಲಿ ಸೇವೆ ಸಲ್ಲಿಸುವವರೂ ಇದ್ದಾರೆ. ಈ ಪೈಕಿ ಕ್ಷೇಮಾಭಿವೃದ್ಧಿ ನೌಕರರು (ದಿನಗೂಲಿ ಸ್ವರೂಪ), ಗುತ್ತಿಗೆ ನೌಕರರು, ಹೊರ ಮೂಲ ಗುತ್ತಿಗೆ ನೌಕರರಿದ್ದಾರೆ. ವಿವಿಧ ಇಲಾಖೆಗಳಲ್ಲಿ ಒಟ್ಟು 2.75 ಲಕ್ಷ ಹುದ್ದೆಗಳು ಖಾಲಿಯಿದ್ದರೆ, ಹೊರ ಮೂಲ ಗುತ್ತಿಗೆಯಡಿ ಎರಡು ಲಕ್ಷ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ‘ಆಡಳಿತ ಶಕ್ತಿ’ ಕೇಂದ್ರ ವಿಧಾನಸೌಧವೂ ಇದಕ್ಕೆ ಹೊರತಾಗಿಲ್ಲ.

  ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳು

  1. ಹೊರಗುತ್ತಿಗೆ ಮೀಸಲಾತಿ 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ

  2. ಪ್ರತಿ ವರ್ಷ ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಕೆಟಿಪಿಪಿ ಅಧಿನಿಯಮ 1999ರಂತೆ ಟೆಂಡರ್ ಕರೆಯುವಾಗ ಕಡ್ಡಾಯ ವಾಗಿ ಮೀಸಲಾತಿಯಂತೆ ಸಿಬ್ಬಂದಿ ಪಡೆಯಲು ಷರತ್ತು ನಮೂದಿಸುವುದು

  3. ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಕಡ್ಡಾಯವಾಗಿ ಹೊರ ಸಂಪನ್ಮೂಲ ಏಜೆನ್ಸಿಯು ಅಂತಿಮಗೊಳಿಸಿದ ಸಿಬ್ಬಂದಿ ಪಟ್ಟಿ ಮೀಸಲಾತಿಯಂತೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

  4. ಜಾತಿ ಪ್ರಮಾಣಪತ್ರ ಮತ್ತು ಇತರೆ ದಾಖಲೆಗಳನ್ನು ಹೊರ ಸಂಪನ್ಮೂಲ ಏಜೆನ್ಸಿಯು ಪಡೆದು ನಿರ್ವಹಿಸತಕ್ಕದ್ದು. ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಈ ಬಗ್ಗೆ ಪರಿಶೀಲಿಸಿ ಕಾರ್ಯಾದೇಶ ನೀಡಲು ಕ್ರಮವಹಿಸುವುದು (ಸಿಂಧುತ್ವ ಪ್ರಮಾಣಪತ್ರದ ಅಗತ್ಯವಿರುವುದಿಲ್ಲ)

  5. ಹೊರಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡ/ ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿ ಪ್ರಮಾಣದಲ್ಲಿ ಕನಿಷ್ಠ ಶೇಕಡ 33ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕು

  6. ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸಬೇಕು

  ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆ

  1. ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 60 ವರ್ಷಗಳಾಗಿರಬೇಕು

  2. ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಹೊರ ಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅಳವಡಿಸಲಾಗುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕಾಗಿ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಲು ಪರಿಗಣಿಸತಕ್ಕದ್ದಲ್ಲ.

  ಕಾಯಮೇತರ ನೌಕರರಿಗೂ ಮೀಸಲಾತಿ ನೀತಿ ಅನ್ವಯಿಸುವುದನ್ನು ಸ್ವಾಗತಿಸುತ್ತೇವೆ. ಆದರೆ ನವ ಉದಾರೀಕರಣದ ನೀತಿ ಎಂಬ ಮೂಗಿಗೆ ಸಾಮಾಜಿಕ ನ್ಯಾಯದ ತುಪ್ಪ ಸವರಿ ಮೋಸ ಮಾಡಿದಂತಾಗುತ್ತದೆ. ಹೊರ ಗುತ್ತಿಗೆ ಪದ್ಧತಿ ಕೈಬಿಟ್ಟು, ಕಾಯಂ ನೇಮಕ ಮಾಡಿಕೊಳ್ಳಬೇಕು.

  | ಮೀನಾಕ್ಷಿ ಸುಂದರಂ ರಾಜ್ಯ ಕಾರ್ಯದರ್ಶಿ, ಸಿಐಟಿಯು

  ತಮಿಳುನಾಡಿನ ವಿವಿಧ ಕಡೆ ವರ್ಷಧಾರೆ: ಸಿಡಿಲು ಬಡಿದು ಇಬ್ಬರು ಮೃತ್ಯು, ಸಾವಿನ ಸಂಖ್ಯೆ 4ಕ್ಕೆ ಏರಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts