

ಟೊಕಿಯೋ: ಸಾಮಾನ್ಯವಾಗಿ ಒಂದು ಕೆಜಿ ಮೀನಿನ ಬೆಲೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಇರುತ್ತದೆ. ಕೆಲವೆಡೆ ಒಂದು ಕೆಜಿ 300 ರೂ. ಇದ್ದರೆ, ಇನ್ನು ಕೆಲವೆಡೆ 600 ರೂ. ಕೂಡ ಇರುತ್ತದೆ. ಅಪರೂಪದ ಮೀನಿಗೆ, 1500 ರೂ. ಆಗುತ್ತದೆ. ಅದರಲ್ಲೂ ಕೆಲವೊಂದು ತಳಿಯ ಮೀನು ಸಿಕ್ಕರಂತೂ ಹರಾಜಿನಲ್ಲಿ ಸಾವಿರಾರು ರೂಪಾಯಿಗೆ ಮಾರಾಟವಾಗುತ್ತದೆ. ಆದರೆ, ಜಪಾನ್ನಲ್ಲಿ ಸೆರೆಸಿಕ್ಕಿರುವ ಮೀನೊಂದರ ಬೆಲೆ ಎಲ್ಲರ ಹುಬ್ಬೇರಿಸುವಂತಿದೆ. ಒಂದು ಕೆಜಿಗೆ ಬರೋಬ್ಬರಿ 51 ಸಾವಿರ ರೂ. ಅಂದರೆ ನೀವು ನಂಬಲೇಬೇಕು.
ಆ ಮೀನಿನ ಹೆಸರು ಬ್ಲೂಫಿನ್ ಟ್ಯೂನಾ. ಜಪಾನ್ ರಾಜಧಾನಿ ಟೊಕಿಯೋದ ಮೀನು ಮಾರುಕಟ್ಟೆಯಲ್ಲಿ ಬುಧವಾರ ದುಬಾರಿ ಬೆಲೆಗೆ ಮಾರಾಟವಾಗಿದೆ. ನಮ್ಮ ಭಾರತೀಯ ಕರೆನ್ಸಿಗೆ ಹೋಲಿಸಿದರೆ ಈ ಮೀನು ತುಂಬಾ ದುಬಾರಿ. ಆದರೆ, ಜಪಾನ್ನಲ್ಲಿ ಮೂರನೇ ವರ್ಷದ ಹರಾಜು ಪ್ರಕ್ರಿಯೆಯಲ್ಲೂ ಈ ಮೀನು ತುಂಬಾ ಕಡಿಮೆ ಬೆಲೆಗೆ ಬಿಕರಿಯಾಗಿದೆಯಂತೆ.
211 ಕೆಜಿ ತೂಗುವ ಟ್ಯೂನಾ ಮೀನನ್ನು ಉತ್ತರ ಜಪಾನ್ನ ಓಮಾದಲ್ಲಿ ಬಲೆಗೆ ಬೀಳಿಸಲಾಗಿದೆ. ಹರಾಜಿನಲ್ಲಿ 1,45,290 ಡಾಲರ್ಗೆ ಬಿಕರಿಯಾಗಿದೆ. ಭಾರತೀಯ ಕರೆನ್ಸಿಯ ಪ್ರಕಾರ ಮೀನಿನ ಬೆಲೆ 1,08,12,953 ರೂ. ಆಗಿದೆ. ಇನ್ನು ಒಂದು ಕೆಜಿಗೆ 80 ಸಾವಿರ ಜಪಾನ್ ಯೆನ್ನಂತೆ ಮಾರಾಟವಾಗಿದೆ. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ಒಂದು ಕೆಜಿಗೆ 51,352 ರೂಪಾಯಿ. ಈ ಮಾಹಿತಿಯನ್ನು ಟೊಕಿಯೋ ಮಾರುಕಟ್ಟೆಯ ಅಧಿಕಾರಿಗಳು ನೀಡಿದ್ದಾರೆ. ಹರಾಜಿನಲ್ಲಿ ಜಪಾನಿನ ಸಗಟು ವ್ಯಾಪಾರಿ ಯಮಾಯುಕಿ ಮೈಕೆಲಿನ್- ಸುಶಿ ಚೈನ್ ಆಪರೇಟರ್ ಒನೊಡೆರಾ ಗ್ರೂಪ್ನೊಂದಿಗೆ ಸೇರಿಕೊಂಡಿ ಹರಾಜನ್ನು ಗೆದಿದ್ದಾರೆಂದು ಒನೊಡೆರಾ ಫುಡ್ ಸರ್ವೀಸ್ ವಕ್ತಾರರು ತಿಳಿಸಿದ್ದಾರೆ.
ಬ್ಲೂಫಿನ್ ಟ್ಯೂನಾ ಮೀನು ಹೊಸ ವರ್ಷದ ಹರಾಜಿನ ಬೆಲೆಯು ಒಂದು ವರ್ಷದ ಹಿಂದೆ 20.84 ಮಿಲಿಯನ್ ಯೆನ್ಗಿಂತ ಕಡಿಮೆಯಿತ್ತು. ಕರೊನಾ ವೈರಸ್ ಸೋಂಕಿನ ಹರಡುವಿಕೆಯಿಂದಾಗಿ ಅದರ ಮೌಲ್ಯವು ಗಮನಾರ್ಹವಾಗಿ ಕುಸಿಯುತ್ತಿದೆ. ಈ ಹಿಂದೆ ತೀವ್ರ ಸ್ಪರ್ಧೆಯಿಂದಾಗಿ ಹೊಸ ವರ್ಷದ ಸಮಯದಲ್ಲಿ ಮೀನಿನ ಬೆಲೆ ಗಗನಕ್ಕೇರಿತು. ಸ್ವ-ಶೈಲಿಯ "ಟ್ಯೂನ ಕಿಂಗ್" ಕಿಯೋಶಿ ಕಿಮುರಾ ನಡೆಸುತ್ತಿರುವ ಜಪಾನಿನ ಸುಶಿ ಚೈನ್ ಕಿಯೋಮುರಾ ಕಾರ್ಪ್ 2019ರಲ್ಲಿ 333.6 ಮಿಲಿಯನ್ ಯೆನ್ ನೀಡಿ ಬ್ಲೂಫಿನ್ ಖರೀದಿಸಿದ್ದರು.
ಒನೊಡೆರಾ ಫುಡ್ ಸರ್ವಿಸ್ ಪ್ರಕಾರ, ವಿಜೇತ ಟ್ಯೂನಾ ಮೀನುಗಳನ್ನು ಟೋಕಿಯೊದ ಒಮೊಟೆಸಾಂಡೋ ಶಾಪಿಂಗ್ ಜಿಲ್ಲೆಯ ಗಿಂಜಾ ಒನೊಡೆರಾದಲ್ಲಿ ಕತ್ತರಿಸಲಾಗುತ್ತದೆ ಮತ್ತು ನ್ಯೂಯಾರ್ಕ್ ಮತ್ತು ಶಾಂಘೈ ಸೇರಿದಂತೆ ಪ್ರಪಂಚದಾದ್ಯಂತದ ಒನೊಡೆರಾದ 12 ಸುಶಿ ರೆಸ್ಟೋರೆಂಟ್ಗಳಲ್ಲಿ ಸೇವೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಜಪಾನ್ನ ಜನರು ಮೀನುಗಳನ್ನು ಅತಿಯಾಗಿ ತಿನ್ನುತ್ತಾರೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಮೀನುಗಳನ್ನು ವಿವಿಧ ಭಕ್ಷ್ಯಗಳೊಂದಿಗೆ ಸೇವಿಸಲಾಗುತ್ತದೆ. ಗ್ರಾಹಕರ ಮನಸೆಳೆಯಲು ರೆಸ್ಟೊರೆಂಟ್ ಮ್ಯಾನೇಜರ್ಗಳು ಕೂಡ ಒಳ್ಳೆಯ ಬೆಲೆಬಾಳುವ ಮೀನುಗಳನ್ನು ತಂದು ಬಗೆಬಗೆಯ ತಿನಿಸುಗಳನ್ನು ಮಾಡುತ್ತಾರೆ. ಹೊಸ ವರ್ಷದ ದಿನ ಮೀನು ಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಅವರದ್ದಾಗಿದೆ. (ಏಜೆನ್ಸೀಸ್)