

ಚೆನ್ನೈ: ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ.
ಇದೀಗ ಕಾಲಿವುಡ್ ಸಿಂಗರ್ ಸುಚಿತ್ರಾ ಅವರು ರಂಗನಾಥನ್ ವಿರುದ್ಧ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ತನ್ನ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಮಾರ್ಚ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ನನ್ನ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದಾರೆ. ನನ್ನನ್ನು ಡ್ರಗ್ಸ್ ಮತ್ತು ಲೈಂಗಿಕ ವ್ಯಸನಿ ಎಂದು ರಂಗನಾಥನ್ ಕರೆದಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಸುಚಿತ್ರಾ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಂಗನಾಥನ್ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ನನಗೆ ಕಾಲಿವುಡ್ನಲ್ಲಿ ಯಾರೂ ಅವಕಾಶಗಳನ್ನು ನೀಡುತ್ತಿಲ್ಲ. ಪ್ರಸ್ತುತ ನನ್ನ ಆದಾಯ ಶೂನ್ಯವಾಗಿರಲು ರಂಗನಾಥನ್ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 2017ರ ನಂತರ ನಾನು ಸಲ್ಲಿಸಿರುವ ಐಟಿ ರಿಟರ್ನ್ ನೋಡಿದರೆ ಸತ್ಯಾಂಶ ತಿಳಿಯುತ್ತದೆ ಎಂದಿದ್ದಾರೆ.
2017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್ನಿಂದ ಕಾಲಿವುಡ್ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಹೊರಬಿದ್ದ ಬಳಿಕ ಭಾರೀ ವಿವಾದ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು ಎಂದು ಸುಚಿತ್ರಾ ಹೇಳಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್ ಮಾಡಿದ್ದರು ಎನ್ನಲಾಗಿದೆ. ಆದರೂ ಈ ಪ್ರಕರಣ ಬಹಳ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
ಸುಚಿ ಲೀಕ್ಸ್ ಪ್ರಕರಣವನ್ನು ಉಲ್ಲೇಖಿಸಿರುವ ಸುಚಿತ್ರಾ, ನಟ ಧನುಷ್, ನಿರ್ದೇಶಕ ವೆಂಕಟ್ ಪ್ರಭು ಮತ್ತು ಕಾರ್ತಿಕ್ ಕುಮಾರ್ ಬೈಲ್ವಾನ್ ರಂಗನಾಥನ್ ಬೆಂಗಾವಲಾಗಿದ್ದಾರೆ. ಇವರು ರಂಗನಾಥನ್ನನ್ನು ಛೂ ಬಿಟ್ಟು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುವುದಾಗಿ ಸುಚಿತ್ರಾ ಅವರಿಗೆ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)