

ಚೆನ್ನೈ: ಏಳು ವರ್ಷಗಳ ಡೇಟಿಂಗ್ ನಂತರ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮಿಬ್ಬರ ಸಂಬಂಧಕ್ಕೆ ವಿವಾಹದ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ಜೂನ್ 9ರಂದು ಮಹಾಬಲಿಪುರಂನ ಖಾಸಗಿ ರೆಸಾರ್ಟ್ ಒಂದರಲ್ಲಿ ಇಬ್ಬರು ಕುಟುಂಬದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ.
ಮದುವೆಯ ಬಳಿಕ ಅನೇಕ ಕುತೂಹಲಕಾರಿ ಸಂಗತಿಗಳು ಬಯಲಿಗೆ ಬರುತ್ತಿವೆ. ಮದುವೆ ದಿನ ವಿಘ್ನೇಶ್ ಶಿವನ್ ಸಹೋದರಿಗೆ ಉಡುಗೊರೆಯಾಗಿ 30 ಸವರನ್ ಚಿನ್ನವನ್ನು ನಯನಾ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕಿಂತಲೂ ದೊಡ್ಡದಾಗಿ ಕೇಳಿಬರುತ್ತಿರುವ ಮಾತೆಂದರೆ, ನಯನಾ ಅವರು ತಮ್ಮ ಪ್ರೀತಿಯ ಹುಡುಗ ಹಾಗೂ ಹಾಲಿ ಪತಿ ವಿಘ್ನೇಶ್ಗೆ 20 ಕೋಟಿ ರೂ. ಬೆಲೆ ಬಾಳುವ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಬಂಗಲೆಯ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಘ್ನೇಶ್ ಹೆಸರಿನಲ್ಲೇ ಬಂಗಲೆ ನೋಂದಣಿಯಾಗಿದೆ. ವಿಘ್ನೇಶ್ ಸಹೋದರಿ ಐಶ್ವರ್ಯಾಗೆ 30 ಸವರನ್ ಚಿನ್ನವನ್ನು ನಯನಾ ನೀಡಿದ್ದಾರೆ. ತನ್ನ ಆಪ್ತ ಸಂಬಂಧಿಕರಿಗೂ ದುಬಾರಿ ಬೆಲೆಯ ಉಡುಗೊರೆಯನ್ನು ನಯನಾ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಘ್ನೇಶ್ ಕೂಡ ಪ್ರತಿಯಾಗಿ ನಯನಾತಾರಾಗೆ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಮದುವೆ ದಿನ ನಯನಾ ಧರಿಸಿದ್ದ ಚಿನ್ನಾಭರಣವನ್ನು ವಿಘ್ನೇಶ್ ಬಹಳ ಪ್ರೀತಿಯಿಂದ ಕೊಂಡು ತಂದಿದ್ದರು ಎನ್ನಲಾಗಿದೆ. ಸುಮಾರು 2.5 ರಿಂದ 3 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇದಿಷ್ಟೇ ಅಲ್ಲದೆ, 5 ಕೋಟಿ ರೂ. ಮೌಲ್ಯದ ಉಂಗುರವನ್ನು ನಯನಾಗೆ ವಿಘ್ನೇಶ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)