ಸಂಪಾದನೆ ಮಾಡಿದ್ರೆ ಇಂಥಾ ಅಭಿಮಾನಿಗಳನ್ನು ಸಂಪಾದಿಸ ಬೇಕು: ಫ್ಯಾನ್ಸ್​ಗೆ ಕಿಚ್ಚನ ಧನ್ಯವಾದ

Kichcha
Published on

ಬೆಂಗಳೂರು: ಬಹುನಿರೀಕ್ಷಿತ ಕೋಟಿಗೊಬ್ಬ 3 ಚಿತ್ರಕ್ಕೆ ಮೊದಲ ದಿನವೇ ಎದುರಾದ ಸಮಸ್ಯೆ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದು, ಅಭಿಮಾನಿಗಳು ಮತ್ತು ಮಾಧ್ಯಮಗಳ ಪ್ರೀತಿಯ ಮಧ್ಯೆ ಎಲ್ಲ ನೋವು ಮರೆತು ಹೋಯಿತು ಎಂದಿದ್ದಾರೆ.

ಮೊದಲ ದಿನ ನನಗೆ ಬೇಜಾರಾಗಿದ್ದೇನು ಅಂದ್ರೆ 6 ಗಂಟೆಗೆ ಬಂದು ಕೂತವರನ್ನು ನೋಡಿದ್ದು. ಸಿನಿಮಾ ನೋಡೋಕೆ ಬಂದವರೆಲ್ಲ ನನ್ನ ನೋಡೋಕೆ ಬಂದವರು. ಮಾರ್ನಿಂಗ್ ಶೋ ಬರಲಿಲ್ಲ ಅಂದಾಗ ಮ್ಯಾಟ್ನಿ ಶೋ ಹಾಕ್ಲಿಕ್ಕೆ ನಂಗೆ ಮನಸಿರಲಿಲ್ಲ. ಹೀಗಾಗಿ ಫ್ರೆಶ್​ ಆಗಿ ನಾಳೆಯಿಂದ ಬರ್ತೀವಿ ಅಂತ ಶುಕ್ರವಾರ ಶುರು ಮಾಡಿದ್ವಿ. ಚಿತ್ರ ಬಿಡುಗಡೆ ಆಗದಿದ್ದರೂ ಅದನ್ನು ತಾಳ್ಮೆಯಿಂದ ತೆಗೆದುಕೊಂಡು ಮೊದಲ ದಿನವೂ ಅಭಿಮಾನಿಗಳು ಸಂಭ್ರಮ ಮಾಡಿದರು. ಸಂಪಾದನೆ ಮಾಡಿದ್ರೆ ಇಂಥಾ ಅಭಿಮಾನಿಗಳನ್ನ ಸಂಪಾದಿಸ ಬೇಕು. ಸಂಪಾದನೆ ಮಾಡಿದಮೇಲೆ ಅದನ್ನು ಉಳಿಸಿಕೊಳ್ಳಬೇಕು ಎಂದು ಸುದೀಪ್​ ಹೇಳಿದರು.

ಯಾರೋ ಸಿನಿಮಾದವರಿಂದ ನನ್ನ ಸಿನಿಮಾಗೆ ಹೀಗಾಯಿತು ಅಂತಾ ಆರೋಪ ಮಾಡಲ್ಲ. ನಮ್ಮ ತಂಡದ ಉದಾಸೀನತೆಯಿಂದ ಹೀಗಾಗಿದೆ ಅಷ್ಟೇ. ಯಾರ ಮೇಲೂ ಆರೋಪ ಮಾಡೋಕ್ಕಾಗಲ್ಲ. ನನ್ನ ದೃಷ್ಟಿಕೋನದಲ್ಲಿ ಇದು ಷಡ್ಯಂತ್ರ ಅಂತ ಹೇಳಲ್ಲ. ಸಲಗ ಮತ್ತು ಕೋಟಿಗೊಬ್ಬ ಸಿನಿಮಾಗೆ ಸಂಬಂಧ ಇಲ್ಲದವರೆಲ್ಲಾ ಹಿಂದೆ ಕೆಲಸ ಮಾಡಿದ್ದಾರೆ. ಕೋಟಿಗೊಬ್ಬ ಬೇರೆ ಸಲಗ ಬೇರೆಯಲ್ಲ. ಸಲಗಗೆ ಒಳ್ಳೆದಾಗ್ಲಿ ಅಂತ ನಾನೇ ಕ್ಲಾಪ್ ಮಾಡಿದೆ. ಕೆಟ್ಟದು ಬಯಸುವುದಕ್ಕೆ ಆಗುತ್ತಾ ಎಂದು ಹೇಳಿದರು.

ಮನೆ ಉರಿದು ಹೊಗುತ್ತಿರುವಾಗ ಸುಮ್ಮನೇ ನೋಡಿಕೊಂಡು ಕುಳಿತುಕೊಳ್ಳುವ ಹೀರೋ ನಾನಲ್ಲ. ತಾಕತ್ ತೋರಿಸೋ ಟೈಮ್ ಇದೇ. ಅದು ಬಂದಾಗ ನಾನು ಏನು ಅಂತಾ ಗೊತ್ತಾಗುತ್ತದೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ಸಮಯ ಬಂದಾಗ ಎಲ್ಲವೂ ಬಹಿರಂಗವಾಗುತ್ತದೆ ಎಂದು ಸುದೀಪ್​ ಅವರು ತಿಳಿಸಿದರು.

ಒಂದು ದಿನದ ಬಳಿಕ ತಡವಾಗಿ ಚಿತ್ರ ಬಿಡುಗಡೆಯಾದರೂ ಕೋಟಿಗೊಬ್ಬ 3 ಸಿನಿಮಾಗೆ ರಾಜ್ಯಾದ್ಯಾಂತ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇನ್ನೊಂದೆಡೆ ಸಲಗ ಚಿತ್ರವೂ ಕೂಡ ಮಾಸ್​ ಪ್ರೇಕ್ಷರನ್ನು ಸೆಳೆದಿದ್ದು, ಎರಡೂ ಚಿತ್ರಗಳೂ ಗಲ್ಲಾಪಟ್ಟಿಗೆಯಲ್ಲಿ ಕಮಾಲ್​ ಮಾಡುತ್ತಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net