

ನವದೆಹಲಿ: ಕ್ರಿಕೆಟ್ ಕ್ಷೇತ್ರದ ಪ್ರಮುಖ ಬೆಳವಣಿಗೆಯಲ್ಲಿ, ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಸ್ಥಾನವನ್ನು ಅಲಂಕರಿಸಲು ಕರ್ನಾಟಕದ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಸಮ್ಮತಿ ಸೂಚಿಸಿದ್ದಾರೆ. ದುಬೈನಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿರುವ ಟಿ20 ವರ್ಲ್ಡ್ ಕಪ್ನ ನಂತರ ಅವರು ಕಾರ್ಯಾರಂಭ ಮಾಡಲಿದ್ದಾರೆ ಎನ್ನಲಾಗಿದೆ.
ಕಳೆದ 6 ವರ್ಷಗಳಿಂದ ಭಾರತದ ಎ ಟೀಂ ಮತ್ತು ಅಂಡರ್ 19 ಟೀಂಗಳ ಉಸ್ತುವಾರಿ ವಹಿಸಿಕೊಂಡಿರುವ 48 ವರ್ಷದ ದ್ರಾವಿಡ್, ಆರಂಭಿಕವಾಗಿ ಈ ಬಗ್ಗೆ ಹಿಂಜರಿಕೆ ತೋರಿದರು. ಆದರೆ, ನಿನ್ನೆ ಐಪಿಎಲ್ ಫೈನಲ್ಸ್ನ ಸಮಯದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಅವರೊಂದಿಗೆ ಮಾತನಾಡಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಭಾರತದ ಜನಪ್ರಿಯ ಬ್ಯಾಟ್ಸ್ಮನ್ ಆಗಿದ್ದು, ಹಾಲಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ದ್ರಾವಿಡ್, ಹೆಡ್ ಕೋಚ್ ಸ್ಥಾನಕ್ಕೆ ವಿದಾಯ ಹೇಳುತ್ತಿರುವ ಹಿರಿಯ ಆಟಗಾರ ರವಿ ಶಾಸ್ತ್ರಿ ಅವರ ಸ್ಥಾನ ಪಡೆಯಲಿದ್ದಾರೆ. ರಾಹುಲ್ ದ್ರಾವಿಡ್ರ ತರಬೇತಿ ವ್ಯವಸ್ಥೆಯಲ್ಲಿ ಭಾರತಕ್ಕೆ ಈಗಾಗಲೇ ರಿಷಭ್ ಪಂತ್, ಅವೇಶ್ ಖಾನ್, ಪೃಥ್ವಿ ಶಾ, ಹನುಮ ವಿಹಾರಿ, ಶುಬ್ಮಾನ್ ಗಿಲ್ರಂಥ ಆಟಗಾರರು ಲಭಿಸಿದ್ದಾರೆ. (ಏಜೆನ್ಸೀಸ್)