ಚಂಡೀಗಢ: ಭಾರತದ ಸ್ಟಾರ್ ಕುಸ್ತಿಪಟು ಪ್ರಸ್ತುತ ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಬಜರಂಗ್ ಪುನಿಯಾ ಅವರಿಗೆ ಭಾನುವಾರ (ಸೆಪ್ಟೆಂಬರ್ 8) ಕೊಲೆ ಬೆದರಿಕೆ ಬಂದಿದೆ. ವಿದೇಶಿ ನಂಬರ್‌ನಿಂದ ವಾಟ್ಸ್ ಆ್ಯಪ್ ಸಂದೇಶದ ಮೂಲಕ ಬೆದರಿಕೆ ಬಂದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಪಿಒಕೆ ಜನರನ್ನು ಪಾಕ್ನಂತೆ ವಿದೇಶಿಯರೆನ್ನುವುದಿಲ್ಲ; ಅವರು ನಮ್ಮವರೆ ಎಂದ ಸಚಿವ ರಾಜನಾಥ್ ಸಿಂಗ್
ಇತ್ತೀಚೆಗೆ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿರುವ ಬಜರಂಗ್ ಪುನಿಯಾ ಕಾಂಗ್ರೆಸ್ ತೊರೆಯಬೇಕು. ಇಲ್ಲದಿದ್ದರೆ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಒಳ್ಳೆಯದಲ್ಲ. ನೀವು ಎಲ್ಲಿ ಬೇಕಾದರೂ ದೂರು ನೀಡಿ, ಇದು ನಮ್ಮ ಮೊದಲ ಮತ್ತು ಕೊನೆಯ ಎಚ್ಚರಿಕೆ. ನೀವು ಕಾಂಗ್ರೆಸ್ ತೊರೆಯದಿದ್ದರೆ ಚುನಾವಣೆಗೂ ಮುನ್ನ ನಾವೇನು ಎಂಬುದನ್ನು ನಿಮಗೆ ತೋರಿಸುತ್ತೇವೆ ಎಂದು ಸಂದೇಶದಲ್ಲಿ ಬರೆದಿರುವುದಾಗಿ ಮೂಲಗಳು ತಿಳಿಸಿವೆ.ಈ ಬಗ್ಗೆ ಪೂನಿಯಾ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಪುನಿಯಾ ಸೋನಿಪತ್‌ನ ಬಹಲ್‌ಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದೇಶಿ ನಂಬರ್‌ನಿಂದ ಬೆದರಿಕೆ ಸಂದೇಶ ಬಂದಿದೆ. ದೂರಿನ ಮೇರೆಗೆ ಪೊಲೀಸ್ ಕ್ರಮ ಮುಂದುವರಿದಿದೆ. ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರ ರವೀಂದ್ರ ಸಿಂಗ್ ಹೇಳಿದ್ದಾರೆ.
ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು 2023ರಲ್ಲಿ ಮಾಜಿ ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇಬ್ಬರೂ ಕುಸ್ತಿಪಟುಗಳು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬಜರಂಗ್ ಪುನಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆ ವೇಳೆ ಇಬ್ಬರೂ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಆದರೆ ಕಾಂಗ್ರೆಸ್ ಬಜರಂಗ್ ಪುನಿಯಾಗೆ ವಿಧಾನಸಭೆ ಟಿಕೆಟ್ ನೀಡಿಲ್ಲ. ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಟಿಕೆಟ್ ನೀಡಿದ್ದು ಅವರು ಜೂಲಾನಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.(ಏಜೆನ್ಸೀಸ್)
ದಿನವೀಡಿ ಕೆಲಸ ಮಾಡಿ ನೈಟ್ಪಾರ್ಟಿಗೆ ಹೋಗುತ್ತೀರಾ?; ಹಾಗಾದ್ರೆ ನೀವು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯ ಇದು..